ರೈತರ ಪ್ರತಿಭಟನೆಗೆ ಸ್ಪಂದಿಸದೆ ದುರಹಂಕಾರ ಪ್ರದರ್ಶಿಸುತ್ತಿರುವ ಕೇಂದ್ರ ಸರಕಾರ: ಸೋನಿಯಾ ಗಾಂಧಿ

Update: 2021-01-22 18:23 GMT

ಹೊಸದಿಲ್ಲಿ, ಜ. 22: ಕೃಷಿ ಕಾಯ್ದೆಗಳ ಕುರಿತಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸರಕಾರ ರೈತರ ಪ್ರತಿಭಟನೆಗೆ ಸ್ಪಂದಿಸದೆ ದುರಹಂಕಾರ ಪ್ರದರ್ಶಿಸುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋನಿಯಾ ಗಾಂಧಿ, ಮೂರು ಕೃಷಿ ಕಾಯ್ದೆಗಳನ್ನು ತರಾತುರಿಯಿಂದ ಸಿದ್ಧಪಡಿಸಲಾಗಿದೆ. ಕಾಯ್ದೆಯ ಪರಿಣಾಮದ ಬಗ್ಗೆ ಪರಿಶೀಲನೆ ನಡೆಸಲು ಸಂಸತ್ತಿನಲ್ಲಿ ಉದ್ದೇಶಪೂರ್ವಕವಾಗಿ ಅವಕಾಶ ನಿರಾಕರಿಸಲಾಗಿದೆ ಎಂದರು. ‘‘ಆರಂಭದಿಂದಲೇ ನಮ್ಮ ನಿಲುವು ಸ್ಪಷ್ಟವಾಗಿದೆ. ಕನಿಷ್ಠ ಬೆಂಬಲ ಬೆಲೆ, ಸಾರ್ವಜನಿಕ ಖರೀದಿ ಹಾಗೂ ಪಿಡಿಎಸ್ ಆಧಾರವಾಗಿರುವ ಆಹಾರ ಭದ್ರತೆ ಅಡಿಪಾಯವನ್ನು ನಾಶ ಮಾಡುತ್ತದೆ ಎನ್ನುವ ಕಾರಣಕ್ಕೆ ಈ ಕಾಯ್ದೆಗಳನ್ನು ನಾವು ನಿರಾಕರಿಸಿದೆವು’’ ಎಂದು ಅವರು ಹೇಳಿದರು.

ಬಾಲಕೋಟ್ ದಾಳಿಯ ಬಗ್ಗೆ ಮಾಹಿತಿ ಸೋರಿಕೆಯಾಗಿದೆ ಎನ್ನುವ ವಿಷಯದ ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರಸಕ್ತ ಆಡಳಿತ ರಾಷ್ಟ್ರೀಯ ಭದ್ರತೆ ಬಗ್ಗೆ ಸಂಪೂರ್ಣವಾಗಿ ರಾಜಿ ಮಾಡಿಕೊಂಡಿದೆ ಎಂದರು. ಸೇನಾ ಕಾರ್ಯಾಚರಣೆಯ ಅಧಿಕೃತ ರಹಸ್ಯವನ್ನು ಸೋರಿಕೆ ಮಾಡುವುದು ರಾಷ್ಟ್ರ ದ್ರೋಹ. ದೇಶಭಕ್ತಿ ಹಾಗೂ ರಾಷ್ಟ್ರೀಯತೆಯ ಪ್ರಮಾಣಪತ್ರಗಳನ್ನು ನೀಡುವವರು ಈಗ ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ ಎಂದು ಅವರು ಹೇಳಿದರು. ಅತಿ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮ ಹಾಗೂ ಅನೌಪಚಾರಿಕ ವಲಯಗಳಿಗೆ ಆರ್ಥಿಕ ನೆರವು ವಿಸ್ತರಿಸಲು ನಿರಾಕರಿಸಿರುವುದಕ್ಕೆ ಕೇಂದ್ರ ಸರಕಾರವನ್ನು ಟೀಕಿಸಿದ ಅವರು, ಇದರಿಂದ ಆರ್ಥಿಕತೆ ಕಠಿಣ ಪರಿಸ್ಥಿತಿಗೆ ತಲುಪಲು ಕಾರಣವಾಯಿತು ಎಂದರು.

ಕೊರೋನ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಈ ಸಂಕಷ್ಟಗಳಿಂದ ಪಾರಾಗಿ ಹೊರಬರಲು ಇನ್ನು ಹಲವು ವರ್ಷಗಳು ಬೇಕಾಗಬಹುದು. ಆರ್ಥಿಕ ಪರಿಸ್ಥಿತಿಯೂ ದುಸ್ಥಿತಿಯಲ್ಲಿದೆ. ಎಂಎಸ್‌ಎಂಇ ಸೇರಿದಂತೆ ಹಲವು ಕ್ಷೇತ್ರಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಎಂದು ಅವರು ಹೇಳಿದರು. ಕೇಂದ್ರ ಸರಕಾರ ಖಾಸಗೀಕರಣದ ವ್ಯಾಮೋಹದಲ್ಲಿ ಸಿಲುಕಿಕೊಂಡಿದೆ. ಇದನ್ನು ಕಾಂಗ್ರೆಸ್ ಸರಕಾರ ಎಂದಿಗೂ ಒಪ್ಪಿಕೊಳ್ಳಲು ಹಾಗೂ ಬೆಂಬಲಿಸಲು ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News