ದೇಶದ ಭದ್ರತಾ ರಹಸ್ಯ ಸೋರಿಕೆಗೆ ಆರೆಸ್ಸೆಸ್ ಮೌನ ಯಾಕೆ ? : ಪ್ರಕಾಶ್ ರಾಥೋಡ್

Update: 2021-01-23 10:26 GMT

ಮಂಗಳೂರು, ಜ.23: ದೇಶದ ಭದ್ರತೆಗೆ ಸಂಬಂಧಪಟ್ಟಂತೆ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಬಾರ್ಕ್‌ನ ಮಾಜಿ ಸಿಇಒ ಪಾರ್ಥವ್ ದಾಸ್ ಗುಪ್ತಾ ಜತೆ ವಾಟ್ಸ್‌ಆ್ಯಪ್ ಸಂದೇಶದ ಮೂಲಕ ವಿಚಾರ ವಿನಿಮಯ ಮಾಡಿಕೊಂಡಿರುವುದು ಆಘಾತಕಾರಿ ಅಂಶವಾಗಿದೆ. ಈ ಬಗ್ಗೆ ಆರೆಸ್ಸೆಸ್ ಮೌನ ವಹಿಸಿರುವುದು ಯಾಕೆ ಎಂದು ಕೆಪಿಸಿಸಿ ವಕ್ತಾರ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಪ್ರಶ್ನಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಗೌಪ್ಯತೆ, ರಕ್ಷಣೆ ಮಾಡಬೇಕಾದುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ದೇಶದ ರಕ್ಷಣೆಗೆ ಸಂಬಂಧಿಸಿ ಪ್ರಧಾನಿ, ಗೃಹ ಸಚಿವರು, ವಿದೇಶಾಂಗ ಸಚಿವರು, ರಕ್ಷಣಾ ಸಚಿವರು, ಹಣಕಾಸು ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಒಳಗೊಂಡ ವಿಶೇಷ ಸಮಿತಿಯಿದೆ. ಈ ಸಮಿತಿಯು ರಕ್ಷಣೆಗೆ ಸಂಬಂಧಿಸಿದ ಎಲ್ಲಾ ಅಂಶದ ಬಗ್ಗೆಯೂ ಗೌಪ್ಯತೆ ಕಾಪಾಡಿಕೊಳ್ಳಲಿದೆ. ಆದರೆ ಈ ಸಭೆಯಲ್ಲಿ ನಡೆದ ಚರ್ಚೆ ಸೋರಿಕೆಯಾಗಿದ್ದು, ಇದರ ಹೊಣೆಯನ್ನು ಪ್ರಧಾನ ಮಂತ್ರಿ ಹೊತ್ತುಕೊಳ್ಳಬೇಕು. ಈ ಸೋರಿಕೆಗೆ ಹೊಣೆಗಾರರಾದವರಿಗೆ ದೇಶದ ಕಾನೂನಿನಡಿಯಲ್ಲಿ ಶಿಕ್ಷೆಯಾಗಬೇಕು. ಇದರ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದು.

ಕೇವಲ ರಾಜಕೀಯ ಲಾಭಕೋಸ್ಕರ ಬಾಲಕೋಟ್ ಕಾರ್ಯಾಚರಣೆ ನಡೆದಿರುವುದು ವಾಟ್ಸಪ್ ಮಾಹಿತಿ ಸೋರಿಕೆಯಿಂದ ಸ್ಪಷ್ಟವಾಗಿದೆ. ಇದರಿಂದಾಗಿ ಪುಲ್ವಾಮಾ ದಾಳಿಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಚುನಾವಣೆ ಸಂದರ್ಭ ಕಾಂಗ್ರೆಸ್ ಮೇಲೆ 2ಜಿ, 3ಜಿ ಹಗರಣ ಆರೋಪ ಮಾಡಿದ ಬಿಜೆಪಿಗರು ಈಗ ಏನು ಮಾಡುತ್ತಿದ್ದಾರೆ ?. ರಾಜಕೀಯ ಲಾಭಕ್ಕೋಸ್ಕರ ಅಕ್ಷಮ್ಯ ಅಪರಾಧಕ್ಕೆ ಮುಂದಾಗಿರುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದ ರಾಥೋಡ್ ಮಾಹಿತಿ ಸೋರಿಕೆ ಪತ್ತೆಹಚ್ಚಲು ವಿಫಲರಾದ ದೇಶದ ಭದ್ರತಾ ಮಂಡಳಿಯ ಸಲಹೆಗಾರ ಅಜಿತ್ ಗೋವಲ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಅಕ್ರಮ ಗಣಿಗಾರಿಕೆ ತನಿಖೆಯಾಗಲಿ: ಸಿಎಂ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ ಅವರ ತವರು ಜಿಲ್ಲೆಯಾದ ಶಿವಮೊಗ್ಗದ ಹುಣಸೋಡುವಿನಲ್ಲಿ ಗಣಿಗಾರಿಕೆ ಸ್ಫೋಟದಿಂದ ಅಮಾಯಕರು ಜೀವ ತೆತ್ತಿದ್ದಾರೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗ ಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಆಗ್ರಹಿಸಿದರು.

ಸಿಎಂ ತವರು ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಪೋಟಕಗಳು ಸಾಗಾಟವಾಗಿರುವುದು ಇದೀಗ ಬಯಲಾಗಿದೆ. ಪೊಲೀಸರು, ಗಣಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತಪಾಸಣೆ ನಡೆಸದೆ ಬಿಟ್ಟಿದ್ದು ಯಾಕೆ ? ಈ ಘಟನೆಯ ಹೊಣೆಗಾರಿಕೆ ಹೊತ್ತು ಗಣಿ ಇಲಾಖೆಯ ಸಚಿವರು ರಾಜೀನಾಮೆ ನೀಡಬೇಕು ಮತ್ತು ಗಣಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಈ ದುರ್ಘಟನೆಯಿಂದ ಸುಮಾರು 60 ಗ್ರಾಮಗಳಿಗೆ ಹಾನಿಯಾಗಿದೆ. ಈ ಸ್ಪೋಟದ ದುಷ್ಪರಿಣಾಮವು ಮುಂದಿನ ಮಳೆಗಾಲದ ಬಳಿಕ ತಿಳಿಯಲಿದೆ ಎಂದು ಖಾದರ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಅಶೋಕ್ ಪಠಾಣ್, ಎಐಸಿಸಿ ಸದಸ್ಯೆ ಕವಿತಾ ಸನಿಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಲ್ಲಾಳ್, ರಾಜ್ಯ ಯುವ ಇಂಟಕ್ ಅಧ್ಯಕ್ಷ ವರುಣ್ ಕುಮಾರ್, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಬೋಳಂತೂರು, ರಕ್ಷಿತ್ ಸುವರ್ಣ, ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News