'ಮೈ ಸಿಟಿ ಮೈ ಬಜೆಟ್' ಅಭಿಯಾನ: ಮಂಗಳೂರಿನ ಸಾವಿರಕ್ಕೂ ಅಧಿಕ ಮಂದಿಯಿಂದ ಸ್ಪಂದನೆ

Update: 2021-01-23 12:43 GMT

ಮಂಗಳೂರು, ಜ.23: ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್‌ಗೆ ಸಂಬಂಧಿಸಿ ಜನಾಗ್ರಹ ಸಂಸ್ಥೆಯು ಆಯೋಜಿಸಿದ್ದ ‘ಮೈ ಸಿಟಿ ಮೈ ಬಜೆಟ್’ ಅಭಿಯಾನಕ್ಕೆ ಸಾವಿರಕ್ಕೂ ಅಧಿಕ ಮಂದಿಯಿಂದ ಸ್ಪಂದನೆ ವ್ಯಕ್ತವಾಗಿದೆ.

ಮಂಗಳವಾರ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಬಳಿಕ ಕೇವಲ 3 ದಿನದಲ್ಲಿ ಮನಪಾ ವ್ಯಾಪ್ತಿಯ ನಾಗರಿಕರು, ಜನಪ್ರತಿನಿಧಿಗಳು, ವಸತಿ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳನ್ನು ಒಳಗೊಂಡಂತೆ ಸುಮಾರು 1060 (856 ಆನ್‌ಲೈನ್ ಮತ್ತು 204 ಲಿಖಿತ) ಸಲಹೆಗಳು ಬಂದಿದೆ. ಈ ಸಾರ್ವಜನಿಕರ ಸಲಹೆ, ಅಭಿಪ್ರಾಯ, ಸೂಚನೆಗಳನ್ನು ಮೇಯರ್ ದಿವಾಕರ್ ಪಾಂಡೇಶ್ವರ, ಆಯುಕ್ತ ಅಕ್ಷಯ್ ಶ್ರೀಧರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್‌ಗೆ ಶನಿವಾರ ಸಲ್ಲಿಸಲಾಯಿತು.

ಶೇ.27ರಷ್ಟು ನಾಗರಿಕರು ರಸ್ತೆಗಳನ್ನು ಮುಖ್ಯ ಆದ್ಯತೆಯನ್ನಾಗಿ ಗುರುತಿಸಿದ್ದರೆ, ಶೇ.20ರಷ್ಟು ನಾಗರಿಕರು ಘನತ್ಯಾಜ್ಯ ನಿರ್ವಹಣೆ ಹಾಗು ಶೇ.16ರಷ್ಟು ನಾಗರಿಕರು ಒಳಚರಂಡಿ ಕಾಮಗಾರಿಗಾಗಿ ಸಾರ್ವಜನಿಕ ನಿಧಿಯನ್ನು ಬಳಸಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದಾರೆ.

ಸುಮಾರು ಶೇ.14ರಷ್ಟು ಮಂದಿ ಪಾದಚಾರಿ ರಸ್ತೆಗಳಿಗೆ ಒತ್ತು ನೀಡಿದ್ದಾರೆ.ಶೇ.10ರಷ್ಟು ಮಂದಿ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದಾರೆ. ಸಾರ್ವಜನಿಕ ಶೌಚಾಲಯಗಳಿಗೆ ಶೇ.7ರಷ್ಟು ಮಂದಿ, ಬೀದಿದೀಪಗಳಿಗೆ ಶೇ.6ರಷ್ಟು ಮಂದಿ ಒತ್ತಾಯಿಸಿದ್ದಾರೆ. ಒಟ್ಟು 60 ವಾರ್ಡ್‌ಗಳ ಪೈಕಿ ಅತಿ ಹೆಚ್ಚಿನ ಪ್ರತಿಕ್ರಿಯೆ ಬಿಜೈ ವಾರ್ಡ್‌ನಿಂದ ಬಂದಿದೆ ಎಂದು ಜನಾಗ್ರಹದ ಸಾರ್ವಜನಿಕ ಅಭಿಪ್ರಾಯ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್ ಅಳವಳ್ಳಿ ಮತ್ತು ಸಪ್ನಾ ಕರೀಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News