​ಬೆಳೆ ವಿಮಾ ಯೋಜನೆ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ: ಭಾಕಿಸಂ ಆರೋಪ

Update: 2021-01-23 12:50 GMT

ಉಡುಪಿ, ಜ.23: ರೈತರ ಪಾಲಿಗೆ ವರದಾನವಾಗಬೇಕಿದ್ದ ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಡಬ್ಲುಬಿಸಿಐ), ಅಧಿಕಾರಿಗಳ ನಿರ್ಲಕ್ಷದಿಂದ ಶಾಪವಾಗಿ ಪರಿಣಮಿಸಿದೆ ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಅಭಿಪ್ರಾಯಪಟ್ಟಿದೆ.

ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಿತಿಯ ಮಾಸಿಕ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲಾಗಿದ್ದು, ಈ ವಿಮಾ ಯೋಜನೆಯ ಅನುಷ್ಠಾನದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಬಗ್ಗೆ ಪ್ರಧಾನಿ ಕಚೇರಿಗೆ ೂರು ನೀಡಲು ಸಂಘಟನೆ ನಿರ್ಧರಿಸಿದೆ.

ಈ ದೇಶದಲ್ಲಿ ರೈತರು ಹವಾಮಾನ ವೈಪರಿತ್ಯದಿಂದ ಪ್ರತೀ ವರ್ಷ ಅರ್ಥಿಕ ವಾಗಿ ನಷ್ಟ ಅನುಭವಿಸುತ್ತಿರುವುದನ್ನು ಮನಗಂಡ ಪ್ರಧಾನಿ, ಮೊದಲ ಬಾರಿಗೆ ರೈತರಿಗೆ ಅನುಕೂಲಕರವಾದ ವಿಮಾ ಯೋಜನೆಯೊಂದನ್ನು ಜಾರಿಗೊಳಿಸಿದ್ದರು. ಅದೇ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ. ಇದರಡಿ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳಗಾರರನ್ನು ಸೇರ್ಪಡೆಗೊಳಿಸಲಾಗಿತ್ತು. ಪ್ರಾರಂಭದಲ್ಲಿ ರೈತರು ಯೋಜನೆಯ ಬಗ್ಗೆ ಹೆಚ್ಚು ಆಕರ್ಷಿತರಾಗದಿದ್ದರೂ, ಕಳೆದೆರಡು ವರ್ಷದಿಂದ ಹೆಚ್ಚು ಹೆಚ್ಚು ರೈತರು ಈ ವಿಮೆಯನ್ನು ಮಾಡಿಸಲು ಮುಂದಾಗುತ್ತಿದ್ದಾರೆ ಎಂದು ಭಾಕಿಸಂ ಹೇಳಿದೆ.

ಈ ವಿಮೆಯನ್ನು ಯಾವುದೇ ಬ್ಯಾಂಕ್‌ಗಳಲ್ಲಿ ರೈತರು ಸಾಲ ಮಾಡಿರಲಿ ಅಥವಾ ಮಾಡದಿರಲೀ ಪ್ರೀಮಿಯಂ ಹಣ ಪಾವತಿಸಿ ಮಾಡಿಸಬಹುದಾಗಿದೆ. ಆದರೆ ಅನೇಕ ಬ್ಯಾಂಕ್‌ಗಳ ಅಧಿಕಾರಿಗಳು ತಮಗೆ ಕೆಲಸದ ಹೊರೆ ಎಂಬಂತೆ ರೈತರಿಗೆ ಸುಳ್ಳು ಕಾರಣ ನೀಡಿ, ನಮ್ಮ ಶಾಖೆಯಲ್ಲಿ ಮಾಡಿಸಲು ಅವಕಾಶವಿಲ್ಲ ಎಂದು ರೈತರನ್ನು ಹಿಂದಿರುಗಿಸಿದ ಅನೇಕ ಪ್ರಮೇಯಗಳು ಜಿಲ್ಲೆಯಲ್ಲಿ ನಡೆದಿವೆ. ಆದರೆ ಈಗಾಗಲೇ ಘೋಷಣೆಯಾಗಿರುವ ಪರಿಹಾರವನ್ನು ಪಾವತಿ ಮಾಡದೇ ವರ್ಷಗಳಿಂದ ಸತಾಯಿಸುತ್ತಾ, ಯಾವುದೇ ಮನವಿಗೂ ಸ್ಪಂದಿಸದೇ, ರೈತರಿಗೆ ಈ ಯೋಜನೆಯ ಬಗ್ಗೆ ಬೇಸರ ಬರುವಂತೆ ಮಾಡುವಲ್ಲಿ ವಿಮಾ ಕಂಪನಿ, ಲೀಡ್ ಬ್ಯಾಂಕ್, ಜಿಲ್ಲಾಡಳಿತ ಎಲ್ಲವೂ ಒಂದಾಗಿವೆ ಎಂದು ಭಾಕಿಸಂ ಅಭಿಪ್ರಾಯ ಪಟ್ಟಿದೆ.

ಸಿಗದ ಪರಿಹಾರ: ಉಡುಪಿ ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಪ್ರೀಮಿಯಂ ಹಣ ಪಾವತಿಸಿದ ರೈತರಿಗೆ ಈವರೆಗೂ ಪರಿಹಾರದ ಹಣವೂ ಘೋಷಣೆಯಾಗಿಲ್ಲ ಅಥವಾ ಅವರು ಪಾವತಿಸಿದ ಪ್ರೀಮಿಯಂ ಹಣವನ್ನೂ ಹಿಂದಿರುಗಿಸಿಲ್ಲ. 2018-19ನೇ ಸಾಲಿನಲ್ಲಿ ವಿಮೆ ಮಾಡಿಸಿದ ಎಲ್ಲಾ ರೈತರಿಗೂ ಪರಿಹಾರದ ಮೊತ್ತ ಘೋಷಣೆಯಾಗಿದ್ದರೂ, ಆ ಪೈಕಿ ಜಿಲ್ಲೆಯ 529 ರೈತರಿಗೆ ಈವರೆಗೂ ಪರಿಹಾರದ ಹಣ ಪಾವತಿಯಾಗಿಲ್ಲ. ಅದೇ ರೀತಿ 2019-20ನೇ ಸಾಲಿನಲ್ಲಿ ಪರಿಹಾರ ಘೋಷಣೆಯಾಗಿ, ಸೆಪ್ಟೆಂಬರ್ ತಿಂಗಳಿಗೆ ಮೊದಲೇ ಪರಿಹಾರ ಹಣ ಪಾವತಿಯಾಗಬೇಕಾಗಿದ್ದರೂ, ಡಿಸೆಂಬರ್ ಕೊನೆಯವರೆಗೆ ರೈತರ ಖಾತೆಗೆ ಹಣ ಜಮೆ ಮಾಡದೇ ಸತಾಯಿಸಿದ ವಿಮಾ ಕಂಪೆನಿ, ಇನ್ನೂ 950ಕ್ಕೂ ಹೆಚ್ಚು ರೈತರ ಖಾತೆಗೆ ಈವರೆಗೂ ಹಣ ಪಾವತಿಸಿಲ್ಲ ಎಂದು ಭಾಕಿಸಂ ದೂರಿದೆ.

ರಾಜ್ಯ ಕೃಷಿಸಚಿವರು ಈಚೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಸಂಘದ ಪದಾಧಿಕಾರಿ ಗಳು ಈ ಬಗ್ಗೆ ಮನವಿ ಸಲ್ಲಿಸಿದ್ದು, ಅವರು ಸಂಬಂಧ ಪಟ್ಟ ಇಲಾಖೆಗಳಿಗೆ ಪತ್ರ ಬರೆದಿದ್ದರೂ, ಏನೂ ಪ್ರಯೋಜನ ಆಗಿಲ್ಲ. ಜಿಲ್ಲಾಡಳಿತಕ್ಕೆ ಭಾರತೀಯ ಕಿಸಾನ್ ಸಂಘ ನೀಡಿದ ಮನವಿಗೆ ತೋಟಗಾರಿಕಾ ಉಪನಿರ್ದೇಶಕರು ಸ್ಪಂದಿಸಿ, ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗೆ ಪತ್ರ ಬರೆದು ಕ್ರಮ ವಹಿಸುವಂತೆ ಕೇಳಿದ್ದರೂ, ಜಿಲ್ಲಾ ಲೀಡ್ ಬ್ಯಾಂಕ್ ಮಾತ್ರ ಉತ್ತರ ನೀದೆ ಮೌನ ವಹಿಸಿದೆ.

3 ಕೋಟಿ ಪಾವತಿ ಬಾಕಿ: ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪಾವತಿ ಯಾಗಬೇಕಿದ್ದ 3 ಕೋಟಿ ರೂ.ಗೂ ಅಧಿಕ ಪರಿಹಾರ ಹಣ ವಿಮಾ ಕಂಪೆನಿ ಖಾತೆಯಲ್ಲಿ ಹಾಗೂ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಕೊಳೆ ಯುತ್ತಿದ್ದು, ಸಂಕಷ್ಟದಲ್ಲಿರುವ ರೈತರಿಗೆ ತಲುಪುತ್ತಿಲ್ಲ. ಇದು ಉಡುಪಿ ಜಿಲ್ಲೆಯ ಸಮಸ್ಯೆ ಮಾತ್ರ ಆಗಿರದೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಇದರ ಪುನರಾ ವರ್ತನೆಯಾಗಿದೆ. ಇದರ ವಿರುದ್ದ ಯೋಜನೆಯನ್ನು ರೈತರಿಗಾಗಿ ಜಾರಿಗೊಳಿಸಿದ ಪ್ರಧಾನ ಮಂತ್ರಿಗಳಿಗೆ ದೂರು ನೀಡಲು ಭಾಕಿಸಂ ನಿರ್ಧಾರ ಕೈಗೊಳ್ಳಬೇಕು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಸಭೆಗೆ ತಿಳಿಸಿದರು.

ಸಭೆಯಲ್ಲಿ ಮೆಸ್ಕಾಂ ಪ್ರಸ್ತಾಪಿತ ಪ್ರತೀ ಯುನಿಟ್‌ಗೆ 1.67ರೂ. ವಿದ್ಯುತ್ ದರ ಏರಿಕೆ ವಿರುದ್ದ ಆಕ್ಷೇಪ ಸಲ್ಲಿಸುವಂತೆ ರೈತರಿಗೆ ಕರೆಕೊಡಲು ತೀರ್ಮಾನಿ ಸಲಾಯಿತು. ಜಿಲ್ಲೆಯ 45 ಗ್ರಾಮಗಳ 30,000 ಎಕರೆಗೂ ಹೆಚ್ಚು ಪ್ರದೇಶ ಘೋಷಿತ ಪರಿಸರ ಸೂಕ್ಷ್ಮ ವಲಯದಡಿ ಬಂದಿದ್ದು, ಆ ಬಗ್ಗೆ ಸರಕಾರವನ್ನು ಹಾಗೂ ಜನರನ್ನು ಎಚ್ಚರಿಸುವ ಬಗೆ್ಗಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ವಿ. ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಶ್ರೀನಿವಾಸ ಭಟ್ಟ, ಕೋಶಾಧಿಕಾರಿ ವಾಸುದೇವ ಶ್ಯಾನುಬಾಗ್, ಜಿಲ್ಲಾ ಸಮಿತಿ ಸದಸ್ಯರಾದ ಸೀತಾರಾಮ ಗಾಣಿಗ, ರಾಜೀವ ಶೆಟ್ಟಿ, ಆಸ್ತೀಕ ಶಾಸ್ತ್ರಿ, ಸುಂದರ ಶೆಟ್ಟಿ, ಶಂಕರನಾರಾಯಣ ಟ್, ವಿಶ್ವನಾಥ ಶೆಟ್ಟಿ, ರಾಮಚಂದ್ರ ಪೈ, ಪ್ರಾಣೇಶ ಯಡಿಯಾಳ, ಅನಂತಪದ್ಮನಾ ಉಡುಪ, ಕೆ.ಪಿ. ಭಂಡಾರಿ, ಚಂದ್ರಹಾಸ ಶೆಟ್ಟಿ, ಪಾಂಡುರಂಗ ಹೆಗ್ಡೆಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News