ಕೋಡಿ: ಕಡಲಾಮೆಯ 100ಕ್ಕೂ ಅಧಿಕ ಮೊಟ್ಟೆಗಳ ರಕ್ಷಣೆ

Update: 2021-01-23 13:18 GMT

ಕುಂದಾಪುರ, ಜ.23: ಕೋಡಿ ಲೈಟ್‌ಹೌಸ್ ಬೀಚ್ ಬಳಿ ಪತ್ತೆಯಾಗಿರುವ ಕಡಲಾಮೆಯ ನೂರಕ್ಕೂ ಅಧಿಕ ಮೊಟ್ಟೆಗಳನ್ನು ರಕ್ಷಿಸಲಾಗಿದೆ.
ಜ.21ರಂದು ರಾತ್ರಿ ವೇಳೆ ತೀರಕ್ಕೆ ಬಂದ ಅಪರೂಪದ ಆಲಿವ್ ರಿಡ್ಲೇ ಪ್ರಬೇಧಕ್ಕೆ ಸೇರಿದ ಕಡಲಾಮೆಯು ಮರಳಿನಲ್ಲಿ ಗೂಡು ರಚಿಸಿ 100ಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟು ಮರಳಿದೆ. ಮರುದಿನ ಅಂದರೆ ಜ.22ರಂದು ಬೆಳಗ್ಗೆ ಕಡಲಾಮೆ ಮೊಟ್ಟೆಯನ್ನು ಸ್ಥಳೀಯರಾದ ಬಾಬು ಮೊಗವೀರ, ಗಣಪತಿ ಖಾರ್ವಿ ಮೊಟ್ಟೆಗಳನ್ನು ಗುರುತಿಸಿದ್ದಾರೆ.

ಹಲವು ವರ್ಷಗಳಿಂದ ಕಡಲಾಮೆ ಸಂರಕ್ಷಣೆಯಲ್ಲಿ ತೊಡಗಿಸಿ ಕೊಂಡಿರುವ ಎಫ್‌ಎಸ್‌ಎಲ್ ತಂಡಕ್ಕೆ ಈ ಕುರಿತು ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ತಂಡ ಮೊಟ್ಟೆಗಳನ್ನು ರಕ್ಷಿಸಿದೆ. ಅದೇ ಸ್ಥಳದಲ್ಲಿ ಮೊಟ್ಟೆಗಳನ್ನು ನಾಯಿ, ಹದ್ದಿನಿಂದ ರಕ್ಷಿಸುವ ನಿಟ್ಟಿನಲ್ಲಿ ಸುತ್ತ ಮೀನಿನ ಬಲೆಗಳನ್ನು ಹಾಕಿ ಹ್ಯಾಚರಿ(ಮೊಟ್ಟೆ ಸಂರಕ್ಷಿಸುವ ಸ್ಥಳ) ನಿರ್ಮಾಣ ಮಾಡಲಾಗಿದೆ.

ಎಫ್‌ಎಸ್‌ಎಲ್ ಇಂಡಿಯಾ ಸಂಯೋಜಕ ದಿನೇಶ್ ಸಾರಂಗ, ವೆಂಕಟೇಶ್ ಶೇರುಗಾರ್, ಕೋಡಿ ಭಾರತ್ ಕ್ಲೀನ್ ಯೋಜನೆಯ ಸಂದೀಪ್ ಕೋಡಿ, ಉದಯ ಖಾರ್ವಿ, ಅನಿಲ್ ಖಾರ್ವಿ, ದಿನೇಶ್ ಕೋಡಿ ರಕ್ಷಣಾ ತಂಡದಲ್ಲಿ ದ್ದರು. ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಕೋಡಿ ಅರಣ್ಯ ಇಲಾಖೆಯ ಹಸ್ತ ಶೆಟ್ಟಿ ಉಪಸ್ಥಿತರಿದ್ದರು.

‘ನಮ್ಮ ಕರಾವಳಿ ತೀರದಲ್ಲಿ ಆಲಿವ್ ರಿಡ್ಲೇ ಹಾಗೂ ಗ್ರೀನ್ ಸೀಟರ್ಟಲ್ ಎಂಬ ಎರಡು ಪ್ರಬೇಧದ ಕಡಲಾಮೆಗಳು ಮಾತ್ರ ಇದ್ದು, ಗ್ರೀನ್ ಸೀ ಟರ್ಟಲ್‌ನ ಮೊಟ್ಟೆಗಳ ಗಾತ್ರ ಸಣ್ಣದಾಗಿರುತ್ತದೆ. ಈಗ ಪತ್ತೆಯಾಗಿರುವ ಮೊಟ್ಟೆಗಳ ಗಾತ್ರ ದೊಡ್ಡದಾಗಿರುವುದರಿಂದ ಇವು ಆಲಿವ್ ರಿಡ್ಲೇ ಆಮೆಯ ಮೊಟ್ಟೆಗಳಾಗಿವೆ. ಇವು ಮುಂದೆ 52-56 ದಿನಗಳಲ್ಲಿ ಮರಿಯಾಗಿ ಹೊರಗೆ ಬಂದು ರಾತ್ರಿ ವೇಳೆ ಸಮುದ್ರ ಸೇರುತ್ತದೆ. ಅಲ್ಲಿಯವರೆಗೆ ಮೊಟ್ಟೆಗಳನ್ನು ರಕ್ಷಣೆ ಮಾಡಲಾಗುತ್ತದೆ. ಕಡಲಾಮೆಯ ಮೊಟ್ಟೆಗಳು ಅಪರೂಪದಲ್ಲಿ ಕಂಡುಬರುತ್ತಿದ್ದು, 2017ರ ನಂತರ ಮೊದಲ ಬಾರಿಗೆ ಕಂಡುಬಂದಿದೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News