ಉಡುಪಿಯ 12 ಇಆರ್‌ಎಸ್‌ಎಸ್ ಪೊಲೀಸ್ ವಾಹನಗಳಿಗೆ ಚಾಲನೆ

Update: 2021-01-23 14:56 GMT

ಉಡುಪಿ, ಜ.23: ಉಡುಪಿ ಜಿಲ್ಲೆಯಾದ್ಯಂತ ತುರ್ತು ಸೇವೆಗಳಿಗೆ ಸ್ಪಂದಿಸುವ 12 ಇ.ಆರ್.ಎಸ್.ಎಸ್.(ಎಮರ್ಜೆನ್ಸಿ ರೆಸ್‌ಪೋನ್ಸ್ ಸಪೊರ್ಟಿಂಗ್ ಸಿಸ್ಟಮ್) ವಾಹನಗಳಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಇಂದು ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಎಸ್ಪಿ, ಸಾರ್ವಜನಿಕರು ಇನ್ನು ಮುಂದೆ ಟೋಲ್ ಫ್ರೀ ನಂಬರ್ 100ರ ಬದಲಾಗಿ 112ಕ್ಕೆ ಕರೆ ಮಾಡಿದಲ್ಲಿ ಅವಶ್ಯಕತೆ ಇರುವ ಸ್ಥಳಕ್ಕೆ ಅತಿ ಸಮೀಪ ಇರುವ ಇಆರ್ ಎಸ್‌ಎಸ್ ವಾಹನ ಬಂದು ಅಗತ್ಯ ಸೇವೆ ಯನ್ನು ನೀಡಲಿದೆ. ಈ ವಾಹನವು ದಿನದ 24 ಘಂಟೆಗಳಕಾಲವೂ ಕಾರ್ಯಾ ಚರಿಸಲಿದೆ ಎಂದರು.

ಟೋಲ್ ಫ್ರೀ ನಂಬರ್ 112 ನೇರವಾಗಿ ಬೆಂಗಳೂರು ಕೇಂದ್ರದ ನಿಯಂತ್ರಣದಲ್ಲಿದ್ದು, ಅಕ್ಷಾಂಶ ಹಾಗೂ ರೇಖಾಂಶದ ಆಧಾರದ ಮೇಲೆ, ಕರೆ ಬಂದ ಸ್ಥಳಕ್ಕೆ ಕ್ಷಿಪ್ರವಾಗಿ ಅಗತ್ಯ ಸೇವೆಯನ್ನು ಸಲ್ಲಿಸಲು ಪ್ರತಿ ವಾಹನದಲ್ಲಿ ಓರ್ವ ಎಎಸ್ಸೈ ದರ್ಜೆಯ ಪೊಲೀಸ್ ಅಧಿಕಾರಿ ಇರುತ್ತಾರೆ. ಈ ವಾಹನಗಳು ಈ ಹಿಂದೆ ಹೆಚ್ಚಿನ ಅಪರಾಧಗಳು ನಡೆದ ಸ್ಥಳಗಳು, ಶಾಲಾ, ಕಾಲೇಜುಗಳ ಸಮೀಪ, ಜನದಟ್ಟಣೆ ಪ್ರದೇಶ, ಹೆಚ್ಚು ವಾಹನ ಸಂಚಾರ ಇರುವ ಪ್ರದೇಶಗಳಲ್ಲಿ ಕಾರ್ಯಾಚರಿಸಲಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕರು, ಅಪಘಾತ ಅಥವಾ ಯಾವುದೇ ತರಹದ ಅಪರಾಧಗಳು ನಡೆದಲ್ಲಿ ತಕ್ಷಣವೇ ಟೋಲ್ ಪ್ರೀ ನಂಬರ್ 112 ಸಂಖ್ಯೆಗೆ ಕರೆ ಮಾಡಬೇಕು ಎಂದು ಎಸ್ಪಿಯವರು ಮನವಿ ಮಾಡಿದರು. ಬಳಿಕ ವಾಹನಗಳು ಇಂದ್ರಾಳಿ, ಕಡಿಯಾಳಿ, ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಕರಾವಳಿ ಜಂಕ್ಷನ್ ಮಾರ್ವಾಗಿ ಅಂಬಾಲಿನವರೆಗೆ ತೆರಳಿದವು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್‌ಪಿ ಸುಧಾಕರ ನಾಯಕ್, ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಗೌಡಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News