ಕೃಷಿ ಕ್ಷೇತ್ರದ ಸುಧಾರಣೆ ಇಂದಿನ ತುರ್ತು ಅಗತ್ಯ: ಅಣ್ಣಾಮಲೈ

Update: 2021-01-23 15:35 GMT

ಉಡುಪಿ, ಜ.23: ಭಾರತ ಕೃಷಿ ಪ್ರದಾನ ದೇಶವಾಗಿದ್ದು, ಇಲ್ಲಿನ ಶೇ.60ರಷ್ಟು ಮಂದಿ ಕೃಷಿಕರಾಗಿದ್ದಾರೆ. ಆದರೆ ಇಂದಿನ ಯುವಜನತೆ ಕೃಷಿಯಿಂದ ವಿಮುಖ ವಾಗುತ್ತಿದೆ. ಅವರನ್ನು ಕೃಷಿಯತ್ತ ಸೆಳೆಯಲು ಈ ಕ್ಷೇತ್ರದಲ್ಲಿ ಸಮಗ್ರವಾದ ಸುಧಾರಣೆಯ ತುರ್ತು ಅಗತ್ಯವಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನು ಈ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿದೆ ಎಂದು ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಪ್ರಸ್ತುತ ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

ಪರ್ಯಾಯ ಅದಮಾರು ಮಠ ಹಾಗೂ ಕೃಷ್ಣ ಮಠದ ಆಶ್ರಯದಲ್ಲಿ ರಾಜಾಂಗಣದ ನರಹರಿ ತೀರ್ಥ ವೇದಿಕೆಯಲ್ಲಿ ಜ.16ರಿಂದ ನಡೆದಿರುವ ದ್ವೈವಾರ್ಷಿಕ ಪರ್ಯಾಯದ ಪಂಚ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ವಿಡಿಯೋ ಸಂದೇಶದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರೈತರ ಭೂ ಹಿಡುವಳಿಯೂ ಕುಸಿಯುತ್ತಿದೆ. ಇಂಥ ಸಂದರ್ಭದಲ್ಲಿ ಸಬ್ಸಿಡಿ ಮತ್ತು ಸಾಲಮನ್ನಾ ಹೊರತಾಗಿಯೂ ಯೋಚಿಸುವ ಅಗತ್ಯವಿದೆ. ಇಸ್ರೇಲ್ ಮುಂತಾದ ಅಭಿವೃದ್ಧಿಶೀಲ ರಾಷ್ಟ್ರಗಳ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನ ನೆರವಿನಿಂದ ಕೃಷಿ ಚಟುವಟಿಕೆ ನಡೆಸಬೇಕಿದೆ. ಇದಕ್ಕಾಗಿ ಸಣ್ಣ ಸಣ್ಣ ರೈತರನ್ನು ಒಗ್ಗೂಡಿಸಿ ಸಹಕಾರ ಸಂಘ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್ ಮೂಲಕ ಕೃಷಿ ಮಾಡಿದರೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಸುಧಾರಣಾ ಕಾನೂನಿಗೆ ದೇಶಾದ್ಯಂತ ಪ್ರತಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಮಾತನಾಡಿದ ಅಣ್ಣಆಮಲೈ, ಹಿಂದೆ ಸೇವಾ ಕ್ಷೇತ್ರದಲ್ಲಿ ಬದಲಾವಣೆ ತರುವ ಸಂದರ್ಭದಲ್ಲೂ ದೇಶದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅದೇರೀತಿ ಕೃಷಿ ಸುಧಾರಣೆ ಕಾನೂನು ಜಾರಿಗೂ ವಿರೋಧ ವ್ಯಕ್ತವಾಗುತ್ತಿದೆ. ಇದೆಲ್ಲವನ್ನೂ ರಾಜಕೀಯದಿಂದ ಹೊರತಾಗಿ ಯೋಚಿಸಬೇಕಿದೆ. ದೇಶದಲ್ಲಿ ಸಾವಯವ ಉತ್ಪನ್ನಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಈಶಾನ್ಯ ಭಾರತ, ಸಿಕ್ಕಿಂ, ಕೇರಳ ರಾಜ್ಯಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದರು.

ಭಾರತೀಯರಿಗೆ ಪ್ರಜಾಪ್ರಭುತ್ವ ಪದ್ಧತಿ ರಕ್ತಗತವಾಗಿದೆ. ಕೃಷ್ಣಮಠದಲ್ಲಿ 5 ಶತಮಾನಗಳಿಂದ ನಡೆಯುತ್ತಿರುವ ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ ಇದಕ್ಕೊಂದು ಉತ್ತಮ ನಿದರ್ಶನ. ಅಧಿಕಾರವನ್ನು ಹೇಗೆ ಹಸ್ತಾಂತರಿಸಬೇಕು ಎಂಬುದಕ್ಕೆ ಮಾದರಿಯಾಗಿದೆ ಎಂದರು.

ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ರಮಣ ಉಪಾಧ್ಯಾಯ ಮತ್ತು ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಉಪಸ್ಥಿತರಿದ್ದರು.

ಸನ್ಮಾನ: ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ 14 ಮಂದಿಯನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ, ಕುಂದಾಪುರದ ಮಾಜಿ ಶಾಸಕ ಏ.ಜಿ.ಕೊಡ್ಗಿ, ಅಪ್ಪಣ್ಣ ಹೆಗ್ಡೆ, ಉಡುಪಿಯ ಸೋಮಶೇಖರ ಭಟ್, ಗುಜ್ಜಾಡಿ ಪ್ರಭಾಕರ ನಾಯಕ್, ಯು.ಕೆ.ರಾಘವೇಂದ್ರ ರಾವ್, ಪ್ರೊ.ಎಂ.ಎಲ್.ಸಾಮಗ ಮಲ್ಪೆ ಅಲ್ಲದೇ ದಿ.ಕೆ.ಕೆ.ಪೈ ಇವರ ಪರವಾಗಿ ಮೊಮ್ಮಗ ಅಶ್ವಿನ್ ಪೈ ಮಣಿಪಾಲ, ದಿ.ವಿಜಯನಾಥ ಶೆಣೈ ಸ್ಮರಣಾರ್ಥ ಪುತ್ರಿ ಅನುರೂಪಾ ಶೆಣೈ , ದಿ.ದೇವರಾಜ ಸ್ಮರಣಾರ್ಥ ಪುತ್ರ ರಾಜೇಶ್ ರಾವ್, ದಿ.ಟಿ.ವಿ.ರಾವ್ ಸ್ಮರಣಾರ್ಥ ಪುತ್ರ ಡಾ.ಶ್ರೀನಿವಾಸ ರಾವ್, ಮೂಡಬಿದ್ರೆಯ ದಿ.ಅಮರನಾಥ ಶೆಟ್ಟಿ ಸ್ಮರಣಾರ್ಥ ಪತ್ನಿ ಜಯಶ್ರೀ ಶೆಟ್ಟಿ, ದಿ.ಕೆ.ವಿ.ಬಿಳಿರಾಯ ಸ್ಮರಣಾರ್ಥ ಪುತ್ರ ಸುರೇಶ ಬಿಳಿರಾಯ ಉಡುಪಿ ಇವರನ್ನು ಪರ್ಯಾಯ ಶ್ರೀಗಳು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News