​ಜ.26: ಲಯನ್ಸ್ ಅಶೋಕ ಸೇವಾ ಭವನ ಉದ್ಘಾಟನೆ

Update: 2021-01-23 17:23 GMT

ಮಂಗಳೂರು. ಜ.23: ನಗರದ ಸರ್ಕಿಟ್ ಹೌಸ್ ಬಳಿ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಲಯನ್ಸ್ ಅಶೋಕ ಸೇವಾ ಭವನ ಜ.26ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಅಶೋಕನಗರ ಲಯನ್ಸ್ ಕ್ಲಬ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ನವೀನ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲಯನ್ಸ್ ಜಿಲ್ಲೆ 317ಡಿ ಇದರ ಜಿಲ್ಲಾ ಗವರ್ನರ್

ಡಾ.ಗೀತಪ್ರಕಾಶ್ ಭವನ ಉದ್ಘಾಟಿಸುವರು. ತೇಜಸ್ವಿನಿ ಆಸ್ಪತ್ರೆಯ ಮುಖ್ಯಸ್ಥ ಡಾ.ಶಾಂತಾರಾಮ ಶೆಟ್ಟಿ ದೀಪ ಪ್ರಜ್ವಲನೆ ಮಾಡುವರು. 2300 ಚ.ಅಡಿ ವಿಸ್ತಾರ ಹೊಂದಿರುವ ಹವಾನಿಯಂತ್ರಿತ ಕಟ್ಟಡದಲ್ಲಿ 200 ಮಂದಿಗೆ ಆಸನದ ವ್ಯವಸ್ಥೆ ಇದೆ. ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಕಟ್ಟಡದಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಆಶ್ರಯ ತಾಣ, ವಿಶೇಷಾಂಗ ಮಕ್ಕಳಿಗೆ ಡೇ ಕೇರ್ ಸೆಂಟರ್, ಯುವ ಸಬಲೀಕರಣಕ್ಕೆ ಸೂಕ್ತ ವೇದಿಕೆಯನ್ನು ಕಟ್ಟದಲ್ಲಿ ಕಲ್ಪಿಸಲಾಗುವುದು. ಸೇವಾ ಕಾರ್ಯಕ್ರಮಗಳು ಹಾಗೂ ಉಪಯುಕ್ತ ಚಟುವಟಿಕೆಗಳಿಗೆ ಸಭಾಂಗಣ ವಿನಿಯೋಗವಾಗಲಿದೆ ಎಂದರು.

ಲಯನ್ಸ್ ಕ್ಲಬ್ ಅಶೋಕನಗರಕ್ಕೆ ಜಿಲ್ಲಾ ಗವರ್ನರ್‌ರ ಅಧಿಕೃತ ಭೇಟಿ ಕಾರ್ಯಕ್ರಮ ಅಂದು ಪೂ.11ಕ್ಕೆ ನಡೆಯಲಿದೆ. ಪ್ರಜ್ವಲ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕ್ಲಬ್ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದ ಪರಪಾದೆ ಎಂಬ ಹಳ್ಳಿಯನ್ನುಮತ್ತು ಅಲ್ಲಿನ ಶಾಲೆಯನ್ನು ದತ್ತು ತೆಗೆದುಕೊಂಡು ಅದರ ಸರ್ವಾಂಗೀಣ ಅಭಿವೃದ್ಧಿ ಮಾಡಿದೆ. ನಿರಂತರ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಕ್ಲಬ್ ಮುನ್ನಡೆಯುತ್ತಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ವಸಂತ ಶೆಟ್ಟಿ, ಕ್ಲಬ್ ಅಧ್ಯಕ್ಷೆ ಪ್ರಜ್ವಲ್ ಶೆಟ್ಟಿ, ವಸಂತ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News