ತೆಂಗು-ಗೇರು ಬೆಳೆಯಲ್ಲಿ ಕೀಟ ನಿಯಂತ್ರಣ

Update: 2021-01-23 18:00 GMT

ಮಂಗಳೂರು, ಜ.23: ಮಂಗಳೂರು ತೋಟಗಾರಿಕೆ ಇಲಾಖೆಯಿಂದ ತೆಂಗು ಹಾಗೂ ಗೇರು ಬೆಳೆಯಲ್ಲಿ ಕೀಟ ನಿಯಂತ್ರಣ ಮಾಡುವ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ಪ್ರಕಟಿಸಿದ್ದಾರೆ.

ತೆಂಗು ಬೆಳೆಯಲ್ಲಿ ನುಸಿ ಕೀಟಗಳು ಉಂಟಾದಾಗ ಎಳೆಯ ಕಾಯಿಗಳ ಮೇಲೆ ತೊಟ್ಟಿನ ಕೆಳಭಾಗದಲ್ಲಿ ರಸವನ್ನು ಹೀರುತ್ತವೆ. ಕಾಯಿ ಬೆಳೆದು ದಪ್ಪವಾದಂತೆಲ್ಲ ತೊಟ್ಟಿನ ಒಳಗಿನಿಂದ ತ್ರಿಕೋನಾಕಾರದ ಬಿಳಿ ಮಚ್ಚೆಗಳು ಕಾಣಿಸುತ್ತವೆ. ನಂತರ ಕಾಯಿಗಳ ಮೇಲೆ ಕಂದು ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ಅದೇ ಜಾಗದಲ್ಲಿ ಉದ್ದನೆಯ ಬಿರುಕುಗಳು ಉಂಟಾಗುತ್ತವೆ. ಈ ಬಿರುಕುಗಳಿಂದ ಅಂಟು ಪದಾರ್ಥ ಹೊರಬರುತ್ತವೆ. ಬಾಧೆಗೊಳಗಾದ ಎಳೆ ಕಾಯಿಗಳು ಉದುರುತ್ತವೆ.

ಈ ಸಂದರ್ಭದಲ್ಲಿ ನೀರಿನಲ್ಲಿ ಕರಗುವ ಗಂಧಕ 5 ಗ್ರಾಂನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಕಾಯಿಗೊಂಚಲಿಗೆ ಸಿಂಪಡಿಸಲು ಈ ತಿಂಗಳು ಸೂಕ್ತವಾಗಿದೆ. ಇದರಿಂದ ತೆಂಗು ಬೆಳೆಯಲ್ಲಿ ನುಸಿ ಕೀಟಗಳ ನಿರ್ವಹಣೆ ಮಾಡಬಹುದಾಗಿದೆ.

ಗೇರು ಬೆಳೆಯಲ್ಲಿ ಟೀ ಸೊಳ್ಳೆಗಳ ಉತ್ಪತ್ತಿಯಾದಾಗ ಟೀ ಸೊಳ್ಳೆಗಳು ಎಲೆ, ಹೂವು, ಹಣ್ಣು ಮತ್ತು ಬೀಜಗಳಿಂದ ರಸ ಹೀರುತ್ತವೆ. ಇದರಿಂದ ಎಲೆ, ಬೀಜಗಳು ಮುರುಟಾಗುವುದು, ರೆಂಬೆಗಳು ಮತ್ತು ಹೂವುಗಳು ಒಣಗುತ್ತವೆ. ಅವುಗಳ ಮೇಲೆ ಕಜ್ಜಿಯಂತಹ ಚುಕ್ಕೆಗಳಾಗುತ್ತವೆ.
ಗೇರು ಬೆಳೆಯಲ್ಲಿ ಟೀ ಸೊಳ್ಳೆಗಳ ನಿರ್ವಹಣೆಗೆ ಲ್ಯಾಂಬ್ಡಸೈಲೋಥ್ರಿನ್ 1 ಮಿ.ಲೀ.ನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ವಿಷಯತಜ್ಞ, ರಿಶಲ್ ಡಿಸೋಜ (8277806372) ಅವರನ್ನು ಸಂಪರ್ಕಿಸಬಹುದು ಎಂದು ಮಂಗಳೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News