ಮಂಗಳೂರು: ಎಸ್‌ಬಿಐನಿಂದ ಗೃಹ, ವಾಹನ ಸಾಲಗಳ ಉತ್ಸವ ಆರಂಭ

Update: 2021-01-24 06:37 GMT

ಮಂಗಳೂರು, ಜ.24: ಭಾರತೀಯ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಂಗಳೂರು ವಲಯವು ನಗರದ ಬೆಂದೂರ್‌ವೆಲ್‌ನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜೂಬಿಲಿ ಹಾಲ್‌ನಲ್ಲಿ ಆಯೋಜಿಸಿರುವ ಗೃಹ ಹಾಗೂ ವಾಹನ ಸಾಲಗಳ ಉತ್ಸವ ಆರಂಭಗೊಂಡಿದೆ.

ಇಂದು ಸಂಜೆ 7:30ರವರೆಗೆ ನಡೆಯುವ ಮೇಳಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಇಂದು ಬೆಳಗ್ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಕೊಡುಗೆ ಅಪರ. ಅದರಲ್ಲೂ ಎಸ್‌ಬಿಐ ಪ್ರಧಾನ ಮಂತ್ರಿಯ ವಿವಿಧ ಸ್ಕೀಂಗಳನ್ನು ಅರ್ಹರಿಗೆ ತಲುಪಿಸುವಲ್ಲಿ ವಿಶೇಶ ಪಾತ್ರ ವಹಿಸಿವೆ ಎಂದರು.

ಕೋವಿಡ್ 19 ಹಿನ್ನೆಲೆಯಲ್ಲಿ 2020ನೆ ಇಸವಿಯು ಆರ್ಥಿಕ ಬಿಕ್ಕಟ್ಟು ಎದುರಿಸಿತ್ತು. ಇದೀಗ ಹೊಸ ವರ್ಷವು ಆ ಬಿಕ್ಕಟ್ಟಿನಿಂದ ಪಾರಾಗಿಸುವ ಮೂಲಕ ಸಾರ್ವಜನಿಕರಲ್ಲಿ ಆರ್ಥಿಕ ಚೈತನ್ಯ ತುಂಬಿಸಬೇಕಿದೆ. ಅದಕ್ಕೆ ಎಸ್‌ಬಿಐ ಸಾಲಮೇಳವು ಸಹಕಾರಿಯಾಗಲಿದೆ ಎಂದರು.

ಎಸ್‌ಬಿಐ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಜೇಶ್ ಗುಪ್ತಾ ಮಾತನಾಡಿ, ಇಂದು ಎಸ್‌ಬಿಐಗೆ ವಿಶೇಷ ದಿನವಾಗಿದೆ. ಕಾರು ಮತ್ತು ಮನೆ ನಿರ್ಮಿಸುವ ಗ್ರಾಹಕರ ಕನಸನ್ನು ನನಸುಗೊಳಿಸುವ ಬ್ಯಾಂಕ್‌ನ ಅಧಿಕಾರಿ, ಸಿಬ್ಬಂದಿ ವರ್ಗವೇ ಸನ್ನದ್ಧರಾಗಿದ್ದಾರೆ. ಬಿಲ್ಡರ್‌ಗಳು ಮತ್ತು ಕಾರ್ ಡೀಲರ್‌ಗಳು ಕೂಡ ಅಸ್ಥೆಯಿಂದ ಗ್ರಾಹಕರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ವ್ಯವಸ್ಥೆಯನ್ನು ಎಸ್‌ಬಿಐ ನೀಡಲಿದೆ ಎಂದರು.
ಬ್ಯಾಂಕ್‌ನ ಹಿರಿಯ ಅಧಿಕಾರಿ ಡೇಝಿ ಕುಸೂರ್ ಉಪಸ್ಥಿತರಿದ್ದರು. ರೀಜನಲ್ ಮ್ಯಾನೇಜರ್ ಹರಿಶಂಕರ್ ಎನ್‌ಎಂ ಸ್ವಾಗತಿಸಿದರು. ಮನೋಹರ್ ವಂದಿಸಿದರು. ಗೀತಾ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.

* ಮಂಗಳೂರಿನ ಆನಂದ ಫೆರ್ನಾಂಡಿಸ್ ದಂಪತಿಗೆ ಗೃಹಸಾಲದ ಪತ್ರ ಮತ್ತು ಮುಹಮ್ಮದ್ ಮುಬೀನ್ ಅವರಿಗೆ ಕಾರಿನ ಸಾಲದ ಪತ್ರವನ್ನು ಹಸ್ತಾಂತರಿಸಲಾಯಿತು.

ಮೇಳದಲ್ಲಿ 22 ಬಿಲ್ಡರ್ ಸಂಸ್ಥೆಗಳು, ಕಾರ್ ಡೀಲರ್‌ಗಳು ಭಾಗಿ
ಮೇಳದಲ್ಲಿ ಸುಮಾರು 22 ಬಿಲ್ಡರ್ ಸಂಸ್ಥೆಗಳು ಹಾಗೂ ಹಲವು ಕಾರ್ ಡೀಲರ್‌ಗಳು ಪಾಲ್ಗೊಂಡಿದ್ದು, ಈ ಗೃಹ ಮತ್ತು ವಾಹನ ಸಾಲದ ಉತ್ಸವದಲ್ಲಿ ಎಸ್‌ಬಿಐ ಗೃಹ ಹಾಗೂ ವಾಹನ ಸಾಲಕ್ಕೆ ತಾತ್ಕಾಲಿಕವಾಗಿ ಮಂಜೂರಾತಿಯನ್ನೂ ಸಹ ನೀಡುತ್ತಿದೆ. ಯೋನೋ ಡಿಜಿಟಲ್ ಆ್ಯಪ್ ಮೂಲಕ ಹೊಸ ವಾಹನ ಸಾಲಗಳಿಗೆ ಅರ್ಜಿ ಸಲ್ಲಿಸುವ ಎಲ್ಲ ಗ್ರಾಹಕರಿಗೆ ಸಂಸ್ಕರಣಾ ಶುಲ್ಕದಲ್ಲಿ ಶೇ.100 ರಿಯಾಯತಿಯನ್ನು ನೀಡುತ್ತಿದೆ.

ವಿಶ್ವದ ಫಾರ್ಚೂನ್-500ರ ಪಟ್ಟಿಯಲ್ಲಿರುವ ಭಾರತದ ಏಕಮಾತ್ರ ಬ್ಯಾಂಕ್ ಆಗಿರುವಭಾರತೀಯ ಸ್ಟೇಟ್ ಬ್ಯಾಂಕ್ ದೇಶದ ಗೃಹ ಸಾಲಗಳ ಒಟ್ಟು ಮಾರುಕಟ್ಟೆ ಪಾಲಿನಲ್ಲಿ ಶೇ.31 ಪಾಲು ಹೊಂದಿದ್ದು, ಮನೆ ಸಾಲಕ್ಕೆ ಗ್ರಾಹಕರ ನೆಚ್ಚಿನ ಬ್ಯಾಂಕ್ ಆಗಿ ಪರಿಣಮಿಸಿದೆ. ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ಗೃಹ ಸಾಲಗಳಿಗೆ ಸಂಸ್ಕರಣಾ ಶುಲ್ಕದಲ್ಲಿ ಶೇ.100 ರಿಯಾಯತಿಯನ್ನು ನೀಡುತ್ತಿದೆ. ತ್ವರಿತಗತಿಯಲ್ಲಿ ಸಾಲ ವಿತರಣೆ, ಶೂನ್ಯ ಸಂಸ್ಕರಣಾ ಶುಲ್ಕ, ಆಕರ್ಷಕ ಬಡ್ಡಿ ದರ ಇವುಗಳು ಗೃಹ ಸಾಲದ ವೈಶಿಷ್ಟಗಳಾಗಿದ್ದು, ಗ್ರಾಹಕರು ಮತ್ತು ಸಾರ್ವಜನಿಕರು ಹೆಚ್ಚು ಆಸಕ್ತಿಯಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಎಸ್‌ಬಿಐ ಗೃಹ ಸಾಲವನ್ನು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರವಾದ ಶೇ.6.80ರಲ್ಲಿ ನೀಡುತ್ತಿದೆ ಮತ್ತು ಕಾರುಗಳ ಸಾಲಗಳನ್ನು ಕನಿಷ್ಠ ಶೇ.7.50 ದರದಲ್ಲಿ (ಫಿಕ್ಸೆಡ್ ದರ) ಸಾಲದ ಪೂರ್ಣ ಅವಧಿಯವರೆಗೆ ನೀಡುತ್ತಿದೆ.

ಈ ಉತ್ಸವದ ಮೂಲಕ ಎಸ್‌ಬಿಐ ಮಂಗಳೂರಿನ ಹೆಸರಾಂತ ಬಿಲ್ಡರ್‌ಗಳು ಮತ್ತು ಕಾರ್ ಡೀಲರ್‌ಗಳನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಸಾರ್ವಜನಿಕರಿಗೆ ಮನೆ ಹಾಗೂ ಕಾರು ಖರೀದಿಯ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿದೆ.

ಉತ್ಸವದ ಪ್ರಯುಕ್ತ ಬಿಲ್ಡರ್‌ಗಳು ಮತ್ತು ಕಾರ್ ಡೀಲರ್‌ಗಳು ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್ ನೀಡುತ್ತಿದೆ. ಗ್ರಾಹಕರು, ಸಾರ್ವಜನಿಕರು ಕುಟುಂಬ ಸಮೇತ ಈ ಉತ್ಸವಕ್ಕೆ ಆಗಮಿಸುತ್ತಿದ್ದು, ಮಕ್ಕಳಿಗಾಗಿ ಆಟದ ಮೈದಾನ ಹಾಗೂ ಫುಡ್‌ಕೋರ್ಟ್ ವ್ಯವಸ್ಥೆ ಕಲ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News