ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಸಮುದ್ರದಲ್ಲಿ 1.4 ಕಿ.ಮೀ. ಈಜು

Update: 2021-01-24 07:12 GMT

ಉಡುಪಿ, ಜ.24: ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಸಮುದ್ರದಲ್ಲಿ ನಿರಂತರ 1.4 ಕಿ.ಮೀ. ಈಜುವ ಮೂಲಕ ಹಿರಿಯ ಈಜುಪಟು 65ರ ಹರೆಯದ ಗಂಗಾಧರ ಜಿ. ಕಡೆಕಾರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.

ಉಡುಪಿಯ ಕಿದಿಯೂರು ಪಡುಕೆರೆಯ ಒಂದೂವರೆ ಕಿ.ಮೀ. ದೂರದ ಸಮುದ್ರದಲ್ಲಿ ಇಂದು ಬೆಳಗ್ಗೆ 8:36ಕ್ಕೆ ಪದ್ಮಾಸನ ಭಂಗಿಯಲ್ಲಿ ಕುಳಿತ ಗಂಗಾಧರ ಕಡೆಕಾರ್ ಅವರ ಕಾಲಿಗೆ ಉಡುಪಿ ಅಪರ ಜಿಲ್ಲಾಧಿಕಾರಿ ಸರಪಳಿ ಸುತ್ತಿ ಬೀಗ ಜಡಿಸಿದರು. ನಂತರ ನೀರಿಗೆ ಧುಮಿಕಿದ ಗಂಗಾಧರ್ ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ನಿರಂತರವಾಗಿ ಈಜಿಕೊಂಡು ತೀರದವರೆಗೆ ಒಟ್ಟು 1,400 ಮೀಟರ್ ದೂರ ಕ್ರಮಿಸಿದರು.

ಬೆಳಗ್ಗೆ 9:49ಕ್ಕೆ ಗುರಿ ಮುಟ್ಟುವ ಮೂಲಕ ಗಂಗಾಧರ್ 1,400 ಮೀಟರ್ ದೂರವನ್ನು 1.13.03 ಗಂಟೆಯಲ್ಲಿ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಪ್ರಥಮ ದಾಖ ಲೆಯಾಗಿದೆ. ಗಂಗಾಧರ್ ಅವರನ್ನು ತೀರದಲ್ಲಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ನೂರಾರು ಮಂದಿ ಸ್ವಾಗತಿಸಿ, ಅಭಿನಂದಿಸಿದರು.

ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಗಂಗಾಧರ್ ಕಡೆಕಾರ್, ಈಜುವಾಗ ಜೆಲ್ಲಿ ಫಿಶ್‌ನಿಂದ ಸಮಸ್ಯೆಯಾಗಬಹುದು ಎಂಬ ಆತಂಕ ಇತ್ತು. ಪ್ರಾಕ್ಟಿಸ್ ಮಾಡುವ ಸಂದರ್ಭದಲ್ಲಿ ಜೆಲ್ಲಿ ಫಿಶ್‌ನಿಂದ ಕಣ್ಣು ಉರಿ ಬರುತ್ತಿತ್ತು. ಆದರೆ ಇಂದು ನೀರಿನಡಿಯಲ್ಲಿ ಕಾಣುತ್ತಿದ್ದ ಜೆಲ್ಲಿ ಫಿಶ್ ಮೇಲೆ ಬಂದಿಲ್ಲ. ಹಾಗಾಗಿ ಯಾವುದೇ ತೊಂದರೆ ಆಗಿಲ್ಲ. ನನಗೆ ಈ ಸಾಧನೆ ಮಾಡಲು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ತುಂಬಾ ಸಹಕಾರ ಮಾಡಿದೆ ಎಂದರು.

 ತೀರ್ಪುಗಾರರಾಗಿ ಆಗಮಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಪ್ರತಿನಿಧಿ ಹರೀಶ್ ಆರ್. ಮಾತನಾಡಿ, ‘ಇದೊಂದು ಹೊಸ ದಾಖಲೆಯಾಗಿದ್ದಾರೆ. ಇವರು 1,400 ಮೀಟರ್ ದೂರವನ್ನು ಒಂದು ಗಂಟೆ 13 ನಿಮಿಷದಲ್ಲಿ ಕ್ರಮಿಸಿದ್ದಾರೆ. 65ನೇ ವಯಸ್ಸಿನಲ್ಲಿ ಈ ದಾಖಲೆ ಮಾಡಿರುವುದು ದೊಡ್ಡ ಸಾಧನೆಯಾಗಿದೆ. ಇದರಲ್ಲಿ ಇವರಿಗೆ ಪೈಪೋಟಿಯೇ ಇರುವುದಿಲ್ಲ. ಇಂದು ಇವರಿಗೆ ತಾತ್ಕಾಲಿಕ ಪ್ರಮಾಣಪತ್ರವನ್ನು ನೀಡಿದ್ದು, ಮುಂದೆ ಮೂಲ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News