ಕೃಷಿ ಕಾಯ್ದೆ ರದ್ದುಪಡಿಸಲು ನಿಮ್ಮ ಮಗನಿಗೆ ಮನವರಿಕೆ ಮಾಡಿ: ಪ್ರಧಾನಿ ಮೋದಿಯ ತಾಯಿಗೆ ಪತ್ರ ಬರೆದ ರೈತ

Update: 2021-01-24 18:59 GMT

ಹೊಸದಿಲ್ಲಿ, ಜ.24: ಓರ್ವ ತಾಯಿಯಾಗಿ ನಿಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ತನ್ನ ನಿರ್ಧಾರ ಬದಲಿಸುವಂತೆ ಮಾಡಿದರೆ ಇಡೀ ದೇಶವೇ ನಿಮಗೆ ಧನ್ಯವಾದ ಹೇಳುತ್ತದೆ ಎಂದು ಪಂಜಾಬ್‌ನ ರೈತ ಹರ್ಪ್ರೀತ್ ಸಿಂಗ್ ಪ್ರಧಾನಿ ಮೋದಿಯ ತಾಯಿಗೆ ಪತ್ರ ಬರೆದಿದ್ದಾನೆ.

ಪ್ರಧಾನಿಯ ತಾಯಿ ಹೀರಾಬೆನ್ ಮೋದಿಗೆ ಹಿಂದಿಯಲ್ಲಿ ಸಿಂಗ್ ಬರೆದಿರುವ ಭಾವನಾತ್ಮಕ ಪತ್ರದ ಸಾರಾಂಶ ಹೀಗಿದೆ:

‘ಅತ್ಯಂತ ನೋವಿನಿಂದ ಈ ಪತ್ರ ಬರೆಯುತ್ತಿದ್ದೇನೆ. ಮೂರು ಕರಾಳ ಕಾಯ್ದೆಗಳ ಕಾರಣದಿಂದ ಅನ್ನದಾತರು ಈ ಮೈಕೊರೆಯುವ ಚಳಿಯಲ್ಲಿ ದಿಲ್ಲಿಯ ರಸ್ತೆಯಲ್ಲಿ ಮಲಗುವ ಅನಿವಾರ್ಯತೆ ಎದುರಾಗಿರುವುದು ನಿಮಗೆ ತಿಳಿದಿದೆ. ಇವರಲ್ಲಿ 90-95 ವರ್ಷದ ವೃದ್ಧರು, ಮಕ್ಕಳು, ಮಹಿಳೆಯರೂ ಇದ್ದಾರೆ. ತೀವ್ರ ಚಳಿಯಿಂದ ಜನರು ಅಸ್ವಸ್ಥರಾಗುತ್ತಿದ್ದು ಕೆಲವರು ಮೃತಪಟ್ಟಿದ್ದಾರೆ. ಇದು ನಮ್ಮೆಲ್ಲರಿಗೂ ಆತಂಕದ ವಿಷಯವಾಗಿದೆ.

ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗೆ ಅದಾನಿ, ಅಂಬಾನಿ ಹಾಗೂ ಇತರ ಉದ್ಯಮಪತಿಗಳ ಸಲಹೆಯಂತೆ ಜಾರಿಯಾಗಿರುವ ಮೂರು ಕರಾಳ ಕಾಯ್ದೆಗಳೇ ಕಾರಣವಾಗಿದೆ. ನಿಮ್ಮ ಮೇಲೆ ವಿಶ್ವಾಸವಿಟ್ಟು ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಪುತ್ರ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಅವರು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಅವರೇ ರದ್ದುಗೊಳಿಸಬಹುದು. ಓರ್ವ ವ್ಯಕ್ತಿ ತನ್ನ ತಾಯಿಯ ಮಾತನ್ನು ತಿರಸ್ಕರಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಕೇವಲ ತಾಯಿ ಮಾತ್ರ ತನ್ನ ಮಗನಿಗೆ ಆದೇಶ ನೀಡಬಹುದು. ಆದ್ದರಿಂದ ನಿಮ್ಮ ಪುತ್ರ ನರೇಂದ್ರ ಮೋದಿಯ ನಿರ್ಧಾರ ಬದಲಿಸುವಂತೆ ಮಾಡಿದರೆ ಇಡೀ ದೇಶವೇ ನಿಮ್ಮನ್ನು ಅಭಿನಂದಿಸಲಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ದಿಲ್ಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರಲ್ಲಿ ಪಂಜಾಬ್‌ನ ಫಿರೋಝ್‌ಪುರ ಜಿಲ್ಲೆಯ ಗೋಲು ಕಾ ಮೋಧ್ ಗ್ರಾಮದವರಾದ ಹರ್ಪ್ರೀತ್ ಸಿಂಗ್ ಕೂಡಾ ಇದ್ದಾರೆ. ಈ ಮೊದಲು ಸಿಮ್ಲದಲ್ಲಿ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಸಿಂಗ್, ಜಾಮೀನಿನ ಮೇಲೆ ಬಿಡುಗಡೆಗೊಂಡು ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News