ಟ್ರ್ಯಾಕ್ಟರ್ ರ‍್ಯಾಲಿಗೆ ಪೊಲೀಸರ ಷರತ್ತುಬದ್ಧ ಅನುಮತಿ

Update: 2021-01-24 19:04 GMT

ಹೊಸದಿಲ್ಲಿ, ಜ.24: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಜನವರಿ 26ರ ಗಣರಾಜ್ಯೋತ್ಸವದಂದು ದಿಲ್ಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ದಿಲ್ಲಿ ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ ಹಲವು ಷರತ್ತುಗಳನ್ನು ವಿಧಿಸಿದ್ದಾರೆ.

ರೈತರ ಬೇಡಿಕೆಗಳಿಗೆ ಗೌರವ ಸೂಚಿಸುವ ಸಲುವಾಗಿ ಮಾತ್ರ ಟ್ರ್ಯಾಕ್ಟರ್ ರ‍್ಯಾಲಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿರುವ ಪೊಲೀಸರು, ಪ್ರತಿಭಟನಾ ನಿರತ ರೈತರು ದಿಲ್ಲಿಯನ್ನು ಪ್ರವೇಶಿಸಬಹುದು. ಆದರೆ ಗಣರಾಜ್ಯೋತ್ಸವ ಪರೇಡ್‌ಗೆ ಭಂಗ ಮಾಡಬಾರದು ಎಂದಿದ್ದಾರೆ. ಟ್ರ್ಯಾಕ್ಟರ್ ರ‍್ಯಾಲಿಯ ವಿಷಯದಲ್ಲಿ ದಿಲ್ಲಿ ಪೊಲೀಸರು ಹಾಗೂ ರೈತ ಮುಖಂಡರ ಮಧ್ಯೆ ಶನಿವಾರ 2 ಸುತ್ತಿನ ಮಾತುಕತೆ ನಡೆದಿತ್ತು. ಟ್ರ್ಯಾಕ್ಟರ್ ರ‍್ಯಾಲಿ ಶಾಂತಿಯುತವಾಗಿ ನಡೆಯಲಿದೆ ಎಂದು ರೈತ ಮುಖಂಡರು ಭರವಸೆ ನೀಡಿದ ಬಳಿಕ ರ‍್ಯಾಲಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಟ್ರ್ಯಾಕ್ಟರ್ ರ‍್ಯಾಲಿಗೆ ಪೊಲೀಸರು ವಿಸ್ತೃತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಗಣರಾಜ್ಯೋತ್ಸವ ಮೆರವಣಿಗೆಗೆ ನಿಯೋಜಿಸಲಾಗಿರುವ ಸಿಬಂದಿಯನ್ನು ಮೆರವಣಿಗೆ ಮುಗಿದ ತಕ್ಷಣ ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭಕ್ಕೆ ನಿಯೋಜಿಸಲು ಸೂಕ್ತವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಣರಾಜ್ಯೋತ್ಸವದಂದು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ‍್ಯಾಲಿಯನ್ನು ಕೇಂದ್ರ ಸರಕಾರ ವಿರೋಧಿಸಿತ್ತು ಮತ್ತು ಗಣರಾಜ್ಯೋತ್ಸವ ಸಂದರ್ಭ ರ್ಯಾಲಿ ನಡೆದರೆ ರಾಷ್ಟ್ರಕ್ಕೆ ಮುಜುಗರವಾಗುತ್ತದೆ. ಆದ್ದರಿಂದ ಟ್ರ್ಯಾಕ್ಟರ್ ರ‍್ಯಾಲಿಗೆ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. ಇದು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾದ್ದರಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ದಿಲ್ಲಿ ಪೊಲೀಸರ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಷರತ್ತುಗಳು ಹೀಗಿವೆ:

► ರಾಜಪಥ್‌ನಲ್ಲಿ ನಡೆಯುವ ಸಾಂಪ್ರದಾಯಿಕ ಪರೇಡ್ ಮುಕ್ತಾಯಗೊಂಡ ಬಳಿಕವೇ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಆರಂಭವಾಗಬೇಕು.(ಮಧ್ಯಾಹ್ನ ಸುಮಾರು 11:30ರ ವೇಳೆಗೆ ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವ ಪರೇಡ್ ಅಂತ್ಯವಾಗುತ್ತದೆ.)

► ದಿಲ್ಲಿಯ ಒಳಗೆ ಕೆಲವು ಕಿ.ಮೀವರೆಗೆ ರೈತರು ಬರಬಹು. ನಂತರ ಗೊತ್ತುಪಡಿಸಿದ ಸ್ಥಳಗಳಲ್ಲಿ ನಿರ್ಗಮಿಸಬೇಕು.

► ರ‍್ಯಾಲಿಯಲ್ಲಿ ಎಷ್ಟು ಟ್ರ್ಯಾಕ್ಟರ್‌ಗಳಿಗೆ ಅವಕಾಶವಿದೆ ಎಂದು ಇನ್ನೂ ನಿರ್ಧರಿತವಾಗಿಲ್ಲ.

► ಭದ್ರತಾ ವ್ಯವಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿಯ ಮಾರ್ಗವನ್ನು ನಿಗದಿಗೊಳಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News