ನೇತಾಜಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿಗೆ ಅವಮಾನವಾದರೂ ಸುಮ್ಮನಿದ್ದ ಪ್ರಧಾನಿ: ಟಿಎಂಸಿ ಸಚಿವರ ಟೀಕೆ

Update: 2021-01-24 16:44 GMT

 ಕೋಲ್ಕತಾ, ಜ.24: ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಕೋಲ್ಕತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಷಣ ಮಾಡುತ್ತಿದ್ದಾಗ ಕೆಲವು ಸಭಿಕರು ‘ಜೈಶ್ರೀರಾಂ’ ಘೋಷಣೆ ಕೂಗಿ ಆಕ್ಷೇಪಾರ್ಹವಾಗಿ ವರ್ತಿಸಿದರೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಧಾನಿ ಮೋದಿ ಅದನ್ನು ಖಂಡಿಸದೆ ಮೌನವಾಗಿದ್ದುದು ವಿಷಾದನೀಯ ಎಂದು ಟಿಎಂಸಿ ಮುಖಂಡ, ಸಚಿವ ಬ್ರಾತ್ಯ ಬಸು ಹೇಳಿದ್ದಾರೆ.

ಈ ಘಟನೆ ಕೆಲವರ ಸ್ತ್ರೀದ್ವೇಷಿ ಮನಸ್ಥಿತಿಯ ದ್ಯೋತಕವಾಗಿದೆ. ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಧಾನಿ ಮೋದಿ ಪ್ರೇಕ್ಷಕರಲ್ಲಿ ಒಂದು ವರ್ಗದ ವರ್ತನೆಯನ್ನು ಖಂಡಿಸುವ ಒಂದು ಶಬ್ದವನ್ನೂ ಆಡಲಿಲ್ಲ. ನೇತಾಜಿಯವರ ಬಗ್ಗೆ ಬಿಜೆಪಿಗೆ ಗೌರವವಿಲ್ಲ ಮತ್ತು ನೇತಾಜಿಯವರ ಸಿದ್ಧಾಂತದ ಕಲ್ಪನೆಯೇ ಇಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ತುರ್ತಾಗಿ ಕರೆದ ಸುದ್ಧಿಗೋಷ್ಟಿಯಲ್ಲಿ ಬಸು ಹೇಳಿದ್ದಾರೆ.

  ಕರಾಳ ಫ್ಯಾಸಿಸ್ಟ್ ಶಕ್ತಿಯೊಂದು ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ದಯವಿಟ್ಟು ಈ ಶಕ್ತಿ ಬಂಗಾಳದ ಮೇಲೆ ನಿಯಂತ್ರಣ ಸಾಧಿಸಲು ಬಿಡಬೇಡಿ. ಈಗ ರಾಜ್ಯದಲ್ಲಿ ವಿಭಿನ್ನ ಸಿದ್ಧಾಂತದ ಜನತೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಗೊಳಿಸುವ ಸ್ಥಿತಿಯಿದೆ. ಒಂದು ವೇಳೆ ಕರಾಳ ಫ್ಯಾಸಿಸ್ಟ್ ಶಕ್ತಿ ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ.

ದುಷ್ಟ ಶಕ್ತಿಯೊಂದು ದೇಶದ ಕಲಾವಿದರ ಧ್ವನಿಯನ್ನು ಹತ್ತಿಕ್ಕಲು ಮುಂದಾಗಿದೆ. ನಿರ್ದೇಶಕ ಅನುರಾಗ್ ಕಶ್ಯಪ್, ನಟ ನಸೀರುದ್ದೀನ್ ಶಾಗೆ ಈಗಾಗಲೇ ಇದರ ಬಿಸಿ ತಟ್ಟಿದೆ ಎಂದವರು ಹೇಳಿದರು. ಟಿಎಂಸಿ ವಕ್ತಾರ ಕುಣಾಲ್ ಘೋಷ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News