1100 ಕೋಟಿ ವೆಚ್ಚದಲ್ಲಿ 3 ವರ್ಷದಲ್ಲಿ ರಾಮಮಂದಿರ ನಿರ್ಮಾಣ

Update: 2021-01-24 16:58 GMT

ಮುಂಬೈ, ಜ.24: ಅಯೋಧ್ಯೆಯಲ್ಲಿ ಸುಮಾರು 3 ವರ್ಷದಲ್ಲಿ ರಾಮಮಂದಿರ ನಿರ್ಮಾಣವಾಗಲಿದ್ದು ಈ ಯೋಜನೆಗೆ 1,100 ಕೋಟಿ ರೂ. ವೆಚ್ಚವಾಗಲಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದದೇವ್ ಗಿರಿ ಮಹಾರಾಜ್ ಹೇಳಿದ್ದಾರೆ.

    ಪ್ರಧಾನ ಮಂದಿರ ಮೂರೂವರೆ ವರ್ಷದಲ್ಲಿ 300ರಿಂದ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಸಂಪೂರ್ಣ 70 ಎಕರೆ ಪ್ರದೇಶದ ಜಮೀನಿನಲ್ಲಿ ನಡೆಸಲಾಗುವ ಅಭಿವೃದ್ಧಿ ಕಾರ್ಯದ ಖರ್ಚು ಸೇರಿದಂತೆ ಒಟ್ಟು ವೆಚ್ಚ 1,100 ಕೋಟಿ ರೂ. ಆಗಲಿದೆ. ರಾಮಮಂದಿರ ನಿರ್ಮಾಣ ಯೋಜನೆಯಲ್ಲಿ ಒಳಗೊಂಡಿರುವ ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕ ಯೋಜನೆಯ ವೆಚ್ಚವನ್ನು ನಿಗದಿಗೊಳಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ ಎಂದವರು ಹೇಳಿದ್ದಾರೆ. ಖಾಸಗಿ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು.

   ಕೆಲವು ಕೈಗಾರಿಕೋದ್ಯಮಿಗಳಿಂದ ಈ ಹಣವನ್ನು ದೇಣಿಗೆ ಪಡೆಯಲು ಸಾಧ್ಯವಿದೆ. ನಿರ್ಮಾಣ ಯೋಜನೆಯನ್ನು ತಮಗೆ ವಹಿಸಿಕೊಟ್ಟರೆ ಯೋಜನೆಯನ್ನು ತಾವೇ ಪೂರ್ಣಗೊಳಿಸುವುದಾಗಿ ಕೆಲವು ಉದ್ಯಮಪತಿಗಳು ಮುಂದೆ ಬಂದಿದ್ದಾರೆ. ಆದರೆ ಈ ಪ್ರಸ್ತಾವವನ್ನು ನಯವಾಗಿ ನಿರಾಕರಿಸಲಾಗಿದೆ ಎಂದವರು ಹೇಳಿದ್ದಾರೆ. 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹ ಯೋಜನೆಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂಬ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ ನೀವು ಯಾವ ಬಣ್ಣದ ಕನ್ನಡಕ ಧರಿಸಿದ್ದೀರೋ ಆ ಬಣ್ಣದಂತೆ ನಿಮಗೆ ಪರಿಸರ ಕಾಣುತ್ತದೆ. ನಾವು ಯಾವ ಕನ್ನಡಕವನ್ನೂ ಧರಿಸಿಲ್ಲ ಮತ್ತು ನಮ್ಮ ಕಣ್ಣು ಭಕ್ತಿಯ ಮಾರ್ಗದತ್ತ ಕೇಂದ್ರಿತವಾಗಿದೆ. 6.5 ಲಕ್ಷ ಗ್ರಾಮಗಳು ಹಾಗೂ 15 ಕೋಟಿ ಮನೆಗಳನ್ನು ತಲುಪುವ (ದೇಣಿಗೆ ಸಂಗ್ರಹಿಸಲು) ಗುರಿ ಹೊಂದಿದ್ದೇವೆ’ ಎಂದರು.

 ದೇಣಿಗೆ ಸಂಗ್ರಹಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸಕ್ಕೆ ಹೋಗುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ದೇಣಿಗೆ ನೀಡಲು ಸಿದ್ಧರಿದ್ದರೆ ನಾವು ಖಂಡಿತಾ ಹೋಗುತ್ತೇವೆ . ಶಿವಸೇನೆ ಮುಖಂಡೆ, ಮಹಾರಾಷ್ಟ್ರ ವಿಧಾನಪರಿಷತ್ ಉಪಾಧ್ಯಕ್ಷೆ ನೀಲಂ ಗೋರೆ ಒಂದು ಕಿ.ಗ್ರಾಂ ಬೆಳ್ಳಿಯ ಇಟ್ಟಿಗೆ ನೀಡಿದ್ದಾರೆ ಎಂದರು.

ದೇಣಿಗೆ ಸಂಗ್ರಹಕ್ಕೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿವಾಸಕ್ಕೆ ಹೋಗಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ‘ ನನಗೆ ಅಲ್ಲಿ ಅಗೌರವ ತೋರುವುದಿಲ್ಲ ಎಂದು ಯಾರಾದರೂ ಖಾತರಿ ನೀಡಿದರೆ ಖಂಡಿತಾ ಹೋಗುತ್ತೇನೆ’ ಎಂದುತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News