ಪ್ರಧಾನಿ ಮೋದಿ ಮೂಲಕ ಅರ್ನಬ್‍ಗೆ ಬಾಲಕೋಟ್ ದಾಳಿಯ ಮಾಹಿತಿ ತಲುಪಿತ್ತು: ರಾಹುಲ್ ಗಾಂಧಿ ಆರೋಪ

Update: 2021-01-25 12:31 GMT

ಚೆನ್ನೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಮುಖಾಂತರ ಪಾಕಿಸ್ತಾನದ ಬಾಲಕೋಟ್ ಮೇಲೆ 2019ರಲ್ಲಿ ಭಾರತ ನಡೆಸಿದ್ದ ವೈಮಾನಿಕ ದಾಳಿಯ ಕುರಿತ ಪೂರ್ವ ಮಾಹಿತಿ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿಗೆ ಲಭಿಸುವಂತೆ ಮಾಡಲಾಗಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.

ಆದಾಗ್ಯೂ ಕಾಂಗ್ರೆಸ್ ಸಂಸದ ತಮ್ಮ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಪುರಾವೆಯನ್ನು ಒದಗಿಸಲಿಲ್ಲ.
ಪ್ರಧಾನಮಂತ್ರಿ ಕಚೇರಿ(ಪಿಎಂಒ) ಕೂಡ ರಾಹುಲ್ ಅವರ ಆಧಾರರಹಿತ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿಲ್ಲ.
ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿನ ಕರೂರ್ ನಲ್ಲಿ ಸೋಮವಾರ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್, ಯೋಜಿತ ನಿಖರ ವೈಮಾನಿಕ ದಾಳಿಯ ಪೂರ್ವ ಮಾಹಿತಿಯು ಪ್ರಧಾನಿ, ರಕ್ಷಣಾ ಸಚಿವರು ಸೇರಿದಂತೆ ಕೇವಲ ಐದು ಜನರಿಗೆ ಮಾತ್ರ ತಿಳಿದಿರುತ್ತದೆ.

ಬಾಲಕೋಟ್ ಮೇಲೆ ನಡೆದಿರುವ ವಾಯುದಾಳಿಯ ಬಗ್ಗೆ ಪತ್ರಕರ್ತನೊಬ್ಬನಿಗೆ ಮೊದಲೇ ತಿಳಿದಿತ್ತು ಎಂಬ ವಿಚಾರ ಕೆಲವು ದಿನಗಳ ಮೊದಲು ಬಹಿರಂಗವಾಗಿದೆ. ಭಾರತೀಯ ವಾಯುಪಡೆಯು ಪಾಕಿಸ್ತಾನದ ನೆಲದಲ್ಲಿ ಬಾಂಬುಹಾಕುವ  3 ದಿನಗಳ ಮೊದಲೇ ಭಾರತೀಯ ಪತ್ರಕರ್ತನಿಗೆ ಅದು ಸಂಭವಿಸಲಿದೆ ಎಂದು ತಿಳಿಸಲಾಯಿತು. ಈ ಮೂಲಕ ನಮ್ಮ ಐಎಎಫ್ ಪೈಲಟ್ ಗಳ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಲಾಗಿತ್ತು ಎಂದರು.

ಬಾಲಕೋಟ್ ವಾಯುದಾಳಿಯ ಬಗ್ಗೆ ಈ ಜಗತ್ತಿನಲ್ಲಿ ಐವರಿಗೆ ಮಾತ್ರ ಗೊತ್ತಿರುತ್ತದೆ. ಭಾರತದ ಪ್ರಧಾನಿ, ಭಾರತದ ರಕ್ಷಣಾ ಮಂತ್ರಿ, ರಾಷ್ಟ್ರೀಯ ಭದ್ರತಾ ಸಲಹೆಗಾರ, ವಾಯುಪಡೆಯ ಮುಖ್ಯಸ್ಥರು ಹಾಗೂ ಗೃಹ ಸಚಿವರಿಗೆ ಗೊತ್ತಿರುತ್ತದೆ. ಬಾಲಕೋಟ್ ವಾಯುದಾಳಿ ನಡೆಯುವ ಮೊದಲು ಈ ಪತ್ರಕರ್ತನಿಗೆ ಈ ಬಗ್ಗೆ ಯಾರು ಮಾಹಿತಿ ನೀಡಿದರು ಎಂಬ ಕುರಿತು ವಿಚಾರಣೆ ಏಕೆ ಪ್ರಾರಂಭವಾಗಿಲ್ಲ ಎಂದು ನಾನು ಈಗ ತಿಳಿದುಕೊಳ್ಳಲು ಬಯಸಿದ್ದೇನೆ. ಕಾರಣ ಈ 5 ಜನರಲ್ಲಿ ಒಬ್ಬರು ಈ ಮನುಷ್ಯನಿಗೆ ಹೇಳಿರಬೇಕು. ಈ 5 ಜನರು ನಮ್ಮ ವಾಯುಪಡೆಗೆ ದ್ರೋಹ ಬಗೆದಿದ್ದಾರೆ ಎಂದು ರಾಹುಲ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News