ಮಹಾರಾಷ್ಟ್ರ ರಾಜ್ಯಪಾಲರಿಗೆ ಕಂಗನಾ ಭೇಟಿಗೆ ಸಮಯವಿದೆ, ರೈತರ ಭೇಟಿಗೆ ಬಿಡುವಿಲ್ಲ: ಶರದ್ ಪವಾರ್

Update: 2021-01-25 11:58 GMT

ಮುಂಬೈ: ದಿಲ್ಲಿ ಸುತ್ತಮುತ್ತ ಕಳೆದ ಕೆಲವು ತಿಂಗಳುಗಳಿಂದ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲವಾಗಿ ಮುಂಬೈನ ಆಝಾದ್  ಮೈದಾನದಲ್ಲಿ ಸಾಗರೋಪಾದಿಯಲ್ಲಿ ನೆರೆದಿರುವ ರೈತರನ್ನು ಉದ್ದೇಶಿಸಿ ಮಾತನಾಡಿದ ಎನ್ ಸಿಪಿ ವರಿಷ್ಠ ಶರದ್ ಪವಾರ್, ಕೇಂದ್ರ ಸರಕಾರ ಪಂಜಾಬ್ ನ್ನು ಏಕೆ ನಿರ್ಲಕ್ಷಿಸುತ್ತಿದೆ. ಪಂಜಾಬ್ ಪಾಕಿಸ್ತಾನದಲ್ಲಿದೆಯೇ? ಎಂದು ಪ್ರಶ್ನಿಸಿದರು. ರೈತರ ಮನವಿ ಸ್ವೀಕರಿಸಬೇಕಾದ ರಾಜ್ಯಪಾಲರು ಗೋವಾಕ್ಕೆ ತೆರಳಿರುವುದನ್ನು ಉಲ್ಲೇಖಿಸಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಟ್ರ್ಯಾಕ್ಟರ್ ರ್ಯಾಲಿ ನಡೆಸಲಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ನಾಸಿಕ್ ಸಹಿತ ಮಹಾರಾಷ್ಟ್ರದ ಹಲವು ಜಿಲ್ಲೆಗಳಿಂದ ರೈತರು ಮುಂಬೈಗೆ ಆಗಮಿಸಿದ್ದಾರೆ. ದಿಲ್ಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ಕೇಂದ್ರ ಸರಕಾರದ ನಿಲುವನ್ನು ಮಾಜಿ ಕೇಂದ್ರ ಸಚಿವ ಪವಾರ್ ಖಂಡಿಸಿದರು.

"ಕಳೆದ 60 ದಿನಗಳಿಂದ ಚಳಿ,ಬಿಸಿಲು ಅಥವಾ ಮಳೆಯನ್ನು ಲೆಕ್ಕಿಸದೇ ಉತ್ತರಪ್ರದೇಶ, ಪಂಜಾಬ್ ಹಾಗೂ ಹರ್ಯಾಣದ ರೈತರು ಪ್ರತಿಭಟಿಸುತ್ತಿದ್ದಾರೆ.  ದಿಲ್ಲಿಯಲ್ಲಿ ಪ್ರತಿಭಟಿಸುತ್ತಿರುವುದು ಪಂಜಾಬ್ ರೈತರು ಮಾತ್ರ ಎಂದು ಅವರು(ಕೇಂದ್ರ)ಹೇಳುತ್ತಿದ್ದಾರೆ. ಪಂಜಾಬ್ ಪಾಕಿಸ್ತಾನದಲ್ಲಿಯೇ? ಅವರು ನಮ್ಮವರೇ ಅಲ್ಲವೇ?'' ಎಂದು ಪವಾರ್ ಪ್ರಶ್ನಿಸಿದರು.

ರೈತರು ಆಝಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ರಾಜ್ಯಪಾಲರ ನಿವಾಸಕ್ಕೆ ಮೆರವಣಿಗೆ ನಡೆಸಿ ಮನವಿ ಪತ್ರ ನೀಡಲು ಬಯಸಿದ್ದರು. ಆದರೆ ಹೆಚ್ಚುವರಿಯಾಗಿ ಗೋವಾದ ಉಸ್ತುವಾರಿಯಾಗಿರುವ ಭಗತ್ ಸಿಂಗ್ ಕೋಶಿಯಾರಿ ಇಂದು ಗೋವಾಕ್ಕೆ ತೆರಳಿದ್ದಾರೆ. ಇದನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿರುವ ಪವಾರ್, "ಮಹಾರಾಷ್ಟ್ರ ಈ ತನಕ ಇಂತಹ ರಾಜ್ಯಪಾಲರನ್ನು ನೋಡಿಲ್ಲ. ಅವರಿಗೆ ನಟಿ ಕಂಗನಾ ರಣಾವತ್ ಭೇಟಿಗೆ ಸಮಯವಿರುತ್ತದೆ. ಆದರೆ ರೈತರುಗಳನ್ನು ಭೇಟಿಯಾಗಲು ಸಮಯವಿರುವುದಿಲ್ಲ.  ಅವರು ಇಲ್ಲಿಗೆ ಬಂದು ನಿಮ್ಮೊಂದಿಗೆ ಮಾತನಾಡಬೇಕಾಗಿತ್ತು. ಆದರೆ, ಅವರು ಇಲ್ಲಿಗೆ ಬಂದಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News