×
Ad

ಟೆಸ್ಟ್ ಕ್ರಿಕೆಟ್: ಶ್ರೀಲಂಕಾ ನೆಲದಲ್ಲಿ ಭಾರತದ ದಾಖಲೆಯನ್ನು ಸರಿಗಟ್ಟಿದ ಇಂಗ್ಲೆಂಡ್ ತಂಡ

Update: 2021-01-25 18:09 IST

ಗಾಲೆ(ಶ್ರೀಲಂಕಾ): ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಆರು ವಿಕೆಟ್ ಗಳಿಂದ ಮಣಿಸಿರುವ ಇಂಗ್ಲೆಂಡ್ ತಂಡ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಜಯಿಸಿ ಕ್ಲೀನ್ ಸ್ವೀಪ್ ಸಾಧಿಸಿದೆ. ಶ್ರೀಲಂಕಾ ನೆಲದಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಜಯಿಸಿರುವ 2ನೇ ಪ್ರವಾಸಿ ತಂಡ ಎನಿಸಿಕೊಂಡಿರುವ ಇಂಗ್ಲೆಂಡ್ ತಂಡ ಭಾರತದ ದಾಖಲೆಯನ್ನು ಸರಿಗಟ್ಟಿದೆ.

ಜೋ ರೂಟ್ ಅವರ ಶತಕ ಹಾಗೂ ಉತ್ತಮ ಬೌಲಿಂಗ್ ಮೂಲಕ ನಡೆಸಿರುವ ಆಲ್ ರೌಂಡ್ ಪ್ರಯತ್ನದಿಂದಾಗಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿದೆ.

ಆಲ್ ರೌಂಡರ್ ಡೊಮ್ ಸಿಬ್ಲೆ (56 ರನ್) ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಜೋಸ್ ಬಟ್ಲರ್(46 ರನ್) ಔಟಾಗದೆ ಬ್ಯಾಟಿಂಗ್ ನಡೆಸಿ 5ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 75 ರನ್ ಸೇರಿಸಿದರು. ಮೊದಲ ಇನಿಂಗ್ಸ್ ಹಿನ್ನಡೆ ಯಿಂದ ಚೇತರಿಸಿಕೊಂಡ ಇಂಗ್ಲೆಂಡ್ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಪಡೆದಿದ್ದ 164 ರನ್ ಗುರಿಯನ್ನು ಬೆನ್ನಟ್ಟಿ ಸರಣಿಯನ್ನು ಜಯಿಸಿತು.

ದ್ವೀಪರಾಷ್ಟ್ರದಲ್ಲಿ ನಡೆದಿರುವ ಟೆಸ್ಟ್ ಕ್ರಿಕೆಟ್ ನಲ್ಲಿ 9ನೇ ಗೆಲುವು ದಾಖಲಿಸಿದ ಇಂಗ್ಲೆಂಡ್ ತಂಡ ಭಾರತದ ಗೆಲುವಿನ ದಾಖಲೆ ಸರಿಗಟ್ಟಿತು. ಶ್ರೀಲಂಕಾದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕಿಂತ ಉತ್ತಮ ಗೆಲುವಿನ ದಾಖಲೆ ನಿರ್ಮಿಸಿದೆ. ಇಂಗ್ಲೆಂಡ್ ತಂಡ ಲಂಕಾದಲ್ಲಿ ಆಡಿರುವ 18 ಪಂದ್ಯಗಳಲ್ಲಿ 9ರಲ್ಲಿ ಜಯ ಸಾಧಿಸಿದರೆ, ಭಾರತ 9 ಪಂದ್ಯಗಳನ್ನು ಗೆಲ್ಲಲು 24 ಪಂದ್ಯಗಳಲ್ಲಿ ಆಡಿತ್ತು.

ಇಂಗ್ಲೆಂಡ್ ತಂಡ ಶ್ರೀಲಂಕಾದಲ್ಲಿ ಸತತ ಐದನೇ ಬಾರಿ ಟೆಸ್ಟ್ ಕ್ರಿಕೆಟ್ ನಲ್ಲಿ ಜಯ ದಾಖಲಿಸಿದೆ. ಜೋ ರೂಟ್ ಬಳಗ 2012ರ ಎಪ್ರಿಲ್ ನಿಂದ ದ್ವೀಪರಾಷ್ಟ್ರದಲ್ಲಿ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಇಂದು 2-0 ಅಂತರದಿಂದ ಜಯ ಸಾಧಿಸಿರುವ ಇಂಗ್ಲೆಂಡ್ ಫೆಬ್ರವರಿ 5ರಿಂದ ಆರಂಭವಾಗಲಿರುವ ಭಾರತ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಗಿಂತ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News