ಕರಾವಳಿಯ ರಕ್ಷಣೆಗೆ ಪೊಲೀಸರ ಕಟ್ಟೆಚ್ಚರ; ಭದ್ರತೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ: ಎಸ್ಪಿ ಆರ್.ಚೇತನ್

Update: 2021-01-25 13:30 GMT

ಉಡುಪಿ, ಜ.25: ಮಲ್ಪೆ ಕೇಂದ್ರವಾಗಿ ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕರಾವಳಿ ಕಾವಲು ಪೊಲೀಸ್ (ಸಿಎಸ್‌ಪಿ) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕರ್ನಾಟಕ ಕರಾವಳಿಯ ರಕ್ಷಣೆಗೆ ಸಿದ್ಧ ವಾಗಿದ್ದು, ಸಿಎಸ್‌ಪಿ ಜೊತೆ ಸ್ಥಳೀಯ ಮೀನುಗಾರರು ಕಣ್ಣು ಮತ್ತು ಕಿವಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಸ್‌ಪಿ ಎಸ್ಪಿ ಆರ್.ಚೇತನ್ ಹೇಳಿದ್ದಾರೆ.

ಇಂದು ಸಮುದ್ರದ 12 ನಾಟೆಕಲ್ ಮೈಲು ವ್ಯಾಪ್ತಿಯೊಳಗೆ ಕರಾವಳಿ ಕಾವಲು ಪೊಲೀಸರ ಬೋಟು ಗಸ್ತು, ಕಾರ್ಯಾಚರಣೆ, ಮೀನುಗಾರಿಕಾ ಬೋಟುಗಳ ಪರಿಶೀಲನೆ ಬಳಿಕ ಅವರು ಸುದ್ದಿಗಾರೊಂದಿಗೆ ಈ ಬಗ್ಗೆ ಮಾಹಿತಿ ನೀಡಿದರು.

1999ರಲ್ಲಿ ಆರಂಭಗೊಂಡ ಕರಾವಳಿ ಕಾವಲು ಪಡೆಯು 2008ರಲ್ಲಿ ಕರಾವಳಿ ಕಾವಲು ಪೊಲೀಸ್ ಆಗಿ ಬದಲಾಗಿದ್ದು, ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ಒಂದು, ಉಡುಪಿಯಲ್ಲಿ ಮೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ಠಾಣೆಗಳು ಕಾರ್ಯಾಚರಿಸುತ್ತಿವೆ. ಪ್ರತಿ ಠಾಣೆಯಲ್ಲೂ ಇನ್‌ಸ್ಪೆಕ್ಟರ್ ಮಟ್ಟದ ಅಧಿಕಾರಿಗಳು ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

24 ಸಾವಿರ ಬೋಟುಗಳು: ಕರಾವಳಿ. ಮೂರು ಜಿಲ್ಲೆಗಳಲ್ಲಿ ಸುಮಾರು 24ಸಾವಿರ ಮೀನುಗಾರಿಕೆ ಸಂಬಂಧಿಸಿದ ಬೋಟ್‌ಗಳಿವೆ. ಅದರಲ್ಲಿ ಸುಮಾರು ಒಂದು ಲಕ್ಷ ಮಂದಿ ಮೀನುಗಾರರು ದುಡಿಯುತ್ತಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.

ನಾವು ಮೀನುಗಾರರೊಂದಿಗೆ ಪ್ರತಿ ಬಾರಿಯೂ ಕುಂದುಕೊರತೆ ಸಭೆಗಳನ್ನು ನಡೆಸುತ್ತೇವೆ. ಸಭೆಯಲ್ಲಿ ಪ್ರಸ್ತಾಪ ಆಗುವ ಭದ್ರತೆ ಹಾಗೂ ಮೀನುಗಾರಿಕೆ ಸಂಬಂಧಿಸಿದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುತ್ತಿದ್ದೇವೆ. ಹೀಗೆ ನಾವು ನಿರಂತರವಾಗಿ ಮೀನುಗಾರರ ಜೊತೆ ಸಂಪರ್ಕ ಇಟ್ಟುಕೊಂಡಿದ್ದೇವೆ. ಮೂರು ಜಿಲ್ಲೆಗಳ 173 ಮೀನುಗಾರ ಮುಖಂಡರ ವಾಟ್ಸಾಪ್ ಗ್ರೂಪ್‌ನ್ನು ರಚಿಸಿ, ಸಮಸ್ಯೆಗಳ ಬಗ್ಗೆ ಚರ್ಚೆಸಲಾ ಗುತ್ತದೆ. ಮೀನುಗಾರಿಕೆ ತೆರಳುವ ವೇಳೆ ಗುರುತಿನ ಚೀಟಿ ಇಟ್ಟುಕೊಳ್ಳುವ ಬಗ್ಗೆ ಮತ್ತು ಸಂಶಯಾಸ್ಪದ ಬೋಟುಗಳ ಬಗ್ಗೆ ಮಾಹಿತಿ ನೀಡುವ ಕುರಿತು ಅವರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಕರಾವಳಿ ನಿಗ್ರಹ ದಳ: ಕರಾವಳಿ ಕಾವಲು ಪೊಲೀಸ್‌ನಲ್ಲಿ ಒಟ್ಟು 438 ಹುದ್ದೆಗಳಿದ್ದು, ಅದರಲ್ಲಿ ಸುಮಾರು 200 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇದರ ಜೊತೆ ಕರಾವಳಿ ನಿಗ್ರಹ ದಳಕ್ಕೆ 200 ಮಂದಿ ಹೋಮ್ ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.

ಈ ದಳಕ್ಕೆ ಮೀನುಗಾರರೊಂದಿಗೆ ಸಂಪರ್ಕ, ಸಮುದ್ರದ ಬಗ್ಗೆ ಜ್ಞಾನ ಇರು ವವರು ಮತ್ತು ತೀರದ ನಿವಾಸಿಗಳನ್ನು ಮಾತ್ರ ನಿಯೋಜಿಸ ಲಾಗುತ್ತಿದೆ. ಇವರು ಲ್ಯಾಂಡಿಂಗ್ ಪಾಯಿಂಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಒಟ್ಟಾರೆಯಾಗಿ ದೇಶದ ಕರಾವಳಿ ಭದ್ರತೆಯನ್ನು ನೋಡಿಕೊಳ್ಳುವ ಕೆಲಸವನ್ನು ನಮ್ಮ ಇಡೀ ತಂಡ ಮಾಡುತ್ತಿದೆ. ಗಸ್ತು ಬೋಟುಗಳ ಮೂಲಕ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಬೋಟು ಮತ್ತು ಟೂರಿಸ್ಟ್ ಬೋಟುಗಳನ್ನು ಪರಿಶೀಲನೆ ಮಾಡ ಲಾಗುತ್ತದೆ. ಹೀಗೆ ಸಿಬ್ಬಂದಿಗಳು ರಾತ್ರಿ ಹಗಲು ಆಲರ್ಟ್ ಆಗಿ ಕೆಲಸ ಮಾಡುತ್ತಿರುತ್ತಾರೆ ಎಂದರು.

ಆರು ಜೆಟ್ ಸ್ಕೀಗೆ ಪ್ರಸ್ತಾವ: ಕರಾವಳಿ ಕವಾಲು ಪೊಲೀಸ್ ಠಾಣೆಯ ಉಡುಪಿ, ಮಂಗಳೂರು ಹಾಗೂ ಕಾರವಾರಕ್ಕೆ ತಲಾ ಒಂದರಂತೆ ಮೂರು ಜೆಟ್ ಸ್ಕೀಯನ್ನು ಒದಗಿಸಲಾಗಿದೆ. ಮತ್ತೆ ಆರು ಜೆಟ್ ಸ್ಕೀ ನೀಡುವಂತೆ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಇದನ್ನು ಉಳಿದ ಆರು ಠಾಣೆ ಗಳ ವ್ಯಾಪ್ತಿ ಯಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಆರ್.ಚೇತನ್ ತಿಳಿಸಿದರು.

ಈ ಜೆಟ್ ಸ್ಕೀಯನ್ನು ಬೀಚ್‌ಗಳಲ್ಲಿ ಟೂರಿಸ್ಟ್‌ಗಳ ರಕ್ಷಣೆಗೆ ಬಳಸಿಕೊಳ್ಳ ಲಾಗುತ್ತದೆ. ಒಂದು ಜೆಟ್ ಸ್ಕೀಯನ್ನು ಅಗತ್ಯವಾಗಿ ಗೋಕರ್ಣ ಬೀಚ್‌ನಲ್ಲಿ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದ ಅವರು, ಅದೇ ರೀತಿ ಎರಡು ಸೀ ಆ್ಯಂಬುಲೆನ್ಸ್‌ಗೆ ಮೀನುಗಾರಿಕೆ ಇಲಾಖೆುಂದ ಪ್ರಸ್ತಾವ ಹೋಗಿದೆ ಎಂದರು.

3 ತಂಡಗಳ 18 ಸಿಬ್ಬಂದಿಗೆ ತರಬೇತಿ

ಪೊಲೀಸ್ ಇಲಾಖೆಯಿಂದ ಮೂರು ಜಿಲ್ಲೆಗಳಲ್ಲಿರುವ ಕರಾವಳಿ ಕಾವಲು ಪೊಲೀಸ್ ಠಾಣೆಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿ ಕೊಳ್ಳಲಾಗುತ್ತದೆ. ಇವರಿಗೆ ಕಾಲಕಾಲಕ್ಕೆ ಬೋಟ್ ನಿರ್ವಹಣೆ, ಸಮುದ್ರ ಗಸ್ತು, ಈಜು ಸೇರಿದಂತೆ ಅಗತ್ಯ ತರಬೇತಿಗಳನ್ನು ನೀಡಲಾ ಗುತ್ತದೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದರು.

ಅದೇ ರೀತಿ ಗುಜರಾತ್‌ನಲ್ಲಿರುವ ನ್ಯಾಶನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸ್‌ನಲ್ಲಿ ಮೂರು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಕೆಲವು ಸಮಯದ ಹಿಂದೆಯಷ್ಟೇ ನಮ್ಮ ಆರು ಮಂದಿಯ ತಂಡ ತರಬೇತಿಗೆ ತೆರಳಿದೆ. ಈವರೆಗೆ ಒಂದು ತಂಡದಲ್ಲಿ ಆರಂರಂತೆ ಒಟ್ಟು ಮೂರು ತಂಡಗಳಲ್ಲಿ 18 ಮಂದಿ ಸಿಬ್ಬಂದಿಗಳು ತರಬೇತಿ ಪಡೆದುಕೊಂಡಿದ್ದಾರೆ ಎಂದರು.

417 ಪ್ರಕರಣಗಳು ದಾಖಲು

ಬೋಟುಗಳಲ್ಲಿ ಅಕ್ರಮ ಮದ್ಯ ಸಾಗಾಟ, ಕಡಲ ತೀರದಲ್ಲಿ ಮಾದಕದ್ರವ್ಯ ಸೇವನೆ ಮತ್ತು ಮಾರಾಟ, ಮಾನವ ಕಳ್ಳ ಸಾಗಾಟ, ವಿದೇಶಿಯ ರಿಂದ ಅಕ್ರಮ ಮೀನುಗಾರಿಕೆ ಸೇರಿದಂತೆ 25 ಕಾಯಿದೆಯಡಿ ಕೇಸು ದಾಖಲಿಸಲು ಕರಾವಳಿ ಕಾವಲು ಪೊಲೀಸರಿಗೆ ಅವಕಾಶ ಇದೆ. ಅದರಂತೆ ಈವರೆಗೆ ಮೂರು ಜಿಲ್ಲೆ ಗಳಲ್ಲಿ 417 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಇದರಲ್ಲಿ 225 ಅಕ್ರಮ ಮದ್ಯ ಸಾಗಾಟ, 77 ಮಾದಕ ದ್ರವ್ಯ, ಅರಣ್ಯ ಕಾಯಿದೆಯಡಿ 10, ಪೊಲೀಸ್ ಕಾಯಿದೆಯಡಿ 48 ಪ್ರಕರಣಗಳು ದಾಖ ಲಾಗಿವೆ. ಅಲ್ಲದೆ ಈವರೆಗೆ ಒಟ್ಟು 82 ಪ್ರಕರಣಗಳಿಗೆ ಸಂಬಂಧಿಸಿ 61 ಬೋಟುಗಳಲ್ಲಿದ್ದ 461 ಮಂದಿಯನ್ನು ರಕ್ಷಿಸಲಾಗಿದೆ. 2020ರಲ್ಲಿ 12 ಪ್ರಕರಣಕ್ಕೆ ಸಂಬಂಧಿಸಿ 9 ಬೋಟುಗಳಲಿದ್ದ 35 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News