ರೈತರ ಟ್ರ್ಯಾಕ್ಟರ್ ಗಳಿಗೆ ಡೀಸೆಲ್ ಪೂರೈಸದಂತೆ ಉತ್ತರಪ್ರದೇಶ ಸರಕಾರ ಆದೇಶ: ವರದಿ

Update: 2021-01-25 15:11 GMT

ಹೊಸದಿಲ್ಲಿ: ಗಣರಾಜ್ಯೋತ್ಸವ ದಿನದಂದು  ದಿಲ್ಲಿ ಗಡಿಭಾಗಗಳಲ್ಲಿ ಪ್ರತಿಭಟನಾನಿರತ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಸರ್ವ ಸಿದ್ಧತೆ ನಡೆಸಿರುವಂತೆಯೇ ಆಡಳಿತ ವರ್ಗ ಈ ರ್ಯಾಲಿಯಲ್ಲಿ ಭಾಗವಹಿಸಲು ಬಯಸಿರುವ ರೈತರನ್ನು ತಡೆಯಲು ಸರ್ವ ಪ್ರಯತ್ನದಲ್ಲಿ ತೊಡಗಿದೆ ಎಂದು hindustantimes.com ವರದಿ ತಿಳಿಸಿದೆ.

ಪ್ರತಿಭಟನಾನಿರತ ರೈತರ ಟ್ರ್ಯಾಕ್ಟರ್ ಗಳಿಗೆ ಡೀಸೆಲ್ ಗಳನ್ನು ಪೂರೈಸದಂತೆ ಉತ್ತರಪ್ರದೇಶದ ಸರಕಾರವು ಎಲ್ಲ ಜಿಲ್ಲೆಗಳ ಡೀಸೆಲ್ ಪೂರೈಕೆ ಅಧಿಕಾರಿಗಳಿಗೆ ಆದೇಶಿಸಿದೆ. ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೈಜೋಡಿಸಲು ದೇಶಾದ್ಯಂತದ ಸಾವಿರಾರು ರೈತರು ಯೋಜನೆ ಹಾಕಿಕೊಂಡಿದ್ದಾರೆ ಎಂದು hindustantimes.com' ವರದಿ ಮಾಡಿದೆ.

ಉತ್ತರಪ್ರದೇಶ ಸರಕಾರದ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ ರೈತ ನಾಯಕ ರಾಕೇಶ್ ಟಿಕೈಟಾ, ನೀವು ಎಲ್ಲಿದ್ದೀರೋ ಅಲ್ಲಿನ ನಗರ ಹಾಗೂ ಪಟ್ಟಣಗಳಲ್ಲಿ ರಸ್ತೆಯನ್ನು ತಡೆದು ಪ್ರತಿಭಟಿಸಿ ಎಂದು ರೈತರಿಗೆ ಕರೆ ನೀಡಿದ್ದಾರೆ.

ಪಶ್ಚಿಮ ಉತ್ತರಪ್ರದೇಶದ ಮೊರಾದಾಬಾದ್ ರೈತರು ಹಾಗೂ ಆ ರಾಜ್ಯದ ಪೂರ್ವಭಾಗದಲ್ಲಿರುವ ಗಾಝಿಯಾಪುರ ರೈತರು ನನಗೆ ಕರೆ ಮಾಡಿ ತಮ್ಮ ರಾಜ್ಯ ಸರಕಾರದ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ.

ರೈತರು ಹಾಗೂ ಕೇಂದ್ರ ಸರಕಾರದ ನಡುವೆ ನಡೆದಿರುವ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿವೆ. ರೈತರು ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರೆ, ಸರಕಾರ ರೈತರ ಬೇಡಿಕೆಯನ್ನು ಈಡೇರಿಸಲು ನಿರಾಕರಿಸುತ್ತಿದೆ. ರೈತರು ನವೆಂಬರ್ 26ರಿಂದ ದಿಲ್ಲಿ ಸಮೀಪದ ಮೂರು ಗಡಿ ಭಾಗಗಳಾದ ಸಿಂಘು, ಟಿಕ್ರಿ ಹಾಗೂ ಘಾಝಿಯಾಪುರದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News