ಜ.26ರಂದು ರೈತರ ಟ್ರ್ಯಾಕ್ಟರ್‌ ರ‍್ಯಾಲಿ: ನಿಮಗೆ ತಿಳಿದಿರಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ

Update: 2021-01-25 14:20 GMT

ಹೊಸದಿಲ್ಲಿ,ಜ.25: ಕೇಂದ್ರ ಸರಕಾರವು ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಯ ಕುರಿತು ಪ್ರತಿಭಟನೆ ನಡೆಸುತ್ತಿರುವ ರೈತರು ಗಣರಾಜ್ಯೋತ್ಸವ ದಿನದಂದು ರಾಜಧಾನಿ ದಿಲ್ಲಿಗೆ ಟ್ರ್ಯಾಕ್ಟರ್‌ ಮಾರ್ಚ್‌ ನಡೆಸಲಿದ್ದು, ಈಗಾಗಲೇ ಹಲವು ಷರತ್ತುಗಳ ಮೇರೆಗೆ ಪೊಲೀಸರು ಅನುಮತಿ ನೀಡಿದ್ದಾರೆ. ಪೊಲೀಸರು "ರೈತರು ದಿಲ್ಲಿಗೆ ಟ್ರ್ಯಾಕ್ಟರ್‌ ಮಾರ್ಚ್‌ ನಡೆಸಬಹುದು. ಆದರೆ ನಾವು ಸೂಚಿಸಿರುವ ಪರಿಧಿಯೊಳಗೆ ರ್ಯಾಲಿ ನಡೆಸಬಹುದಾಗಿದೆ" ಎಂದು ಹೇಳಿಕೆ ನೀಡಿದ್ದರು.

ವರದಿಗಳ ಪ್ರಕಾರ, ರೈತರ ಟ್ರ್ಯಾಕ್ಟರ್ ರ್ಯಾಲಿಯು ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆಯಲಿದೆ. ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ಪೆರೇಡ್ ಮತ್ತು ಕಾರ್ಯಕ್ರಮಗಳು ಮುಗಿದ ನಂತರವೇ ರ್ಯಾಳಿಯು ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

ಮೂರು ದಾರಿಗಳ ಬಳಕೆ:

ದಿಲ್ಲಿಗೆ ಜೋಡಣೆಯಾಗುವ ಮೂರು ಗಡಿಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ರೈತರು ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂಟೆಲಿಜೆನ್ಸ್ ಅಧಿಕಾರಿ ದೀಪೇಂದ್ರ ಪಾಠಕ್ indianexpress.com ಗೆ ತಿಳಿಸಿರುವ ಪ್ರಕಾರ, ಮೂರು ಗಡಿಗಳಿಂದ ಈ ರೀತಿಯಲ್ಲಿ ರ್ಯಾಳಿಯು ಆರಂಭವಾಗಲಿದೆ

ಸಿಂಘು ಗಡಿಯಲ್ಲಿರುವ ರೈತರು:

ಗಡಿಯ ನಂತರದ 62ಕಿ.ಮೀ ದೂರವನ್ನು ರ್ಯಾಲಿಗಾಗಿ ಬಳಸಬಹುದಾಗಿದೆ.

ಪ್ರತಿಭಟನಾ ನಿರತ ರೈತರು ಸಂಜಯ್‌ ಗಾಂಧಿ ಟ್ರಾನ್ಸ್‌ ಪೋರ್ಟ್‌ ನಗರ್, ಕಂಜಾವಾಲ, ಬವಾನ, ಅವ್ಚಂಡಿ ಗಡಿ ಹಾಗೂ ಕೆ.ಎಮ್.ಪಿ ಎಕ್ಸ್‌ ಪ್ರೆಸ್‌ ವೇ ಮೂಲಕ ಹಾದು ಹೋಗಬಹುದಾಗಿದೆ.

ಪ್ರತಿಭಟನೆಯ ನಂತರ ಸಿಂಘು ಗಡಿಗೆ ಮರಳಬೇಕು

ಟಿಕ್ರಿ ಗಡಿಯಲ್ಲಿರುವ ರೈತರಿಗೆ:

ಗಡಿಯ ನಂತರದ 64ಕಿ.ಮೀ ದೂರವನ್ನು ರ್ಯಾಲಿಗಾಗಿ ಬಳಸಬಹುದಾಗಿದೆ.

ನಂಗ್ಲೋಯಿ, ನಜಾಫ್‌ ಗರ್‌, ಜರೋಧಾ ಹಾಗೂ ಕೆಎಮ್‌ಪಿ ಎಕ್ಸ್‌ ಪ್ರೆಸ್‌ ವೇ ಮೂಲಕ ಹಾದು ಹೋಗಬಹುದಾಗಿದೆ.

ರ್ಯಾಳಿಯ ಬಳಿಕ ಟಿಕ್ರಿ ಗಡಿಗೆ ಮರಳಬೇಕು

ಗಾಝಿಯಾಪುರ್‌ ಗಡಿಯಲ್ಲಿರುವ ರೈತರು:

ಗಡಿಯ ನಂತರದ 46ಕಿ.ಮೀ ದೂರವನ್ನು ರ್ಯಾಲಿಗಾಗಿ ಬಳಸಬಹುದಾಗಿದೆ.

56 ಫೂಟ್‌ ರೋಡ್‌, ಅಪ್ಸರಾ ಬಾರ್ಡರ್‌, ಹಾಪುರ್‌ ರೋಡ್‌ ನಿಂದ ಸಾಗಿ ಕೆಜಿಪಿ ಎಕ್ಸ್‌ ಪ್ರೆಸ್‌ ವೇ ಮೂಲಕ ಹಾದು ಹೋಗಬಹುದಾಗಿದೆ.

ಪ್ರತಿಭಟನೆಯ ಬಳಿಕ ಗಾಝಿಯಾಪುರ್‌ ಬಾರ್ಡರ್‌ ಗೆ ಹಿಂದಿರುಗುವುದು

ಮಾರ್ಗಸೂಚಿಯ ಕುರಿತು ಅಸಮಧಾನ ವ್ಯಕ್ತಪಡಿಸಿದ ರೈತ ಸಂಘ:

ಪ್ರಮುಖ ರೈತ ಸಂಘ, ಬಿಕೆಯು ಉಘ್ರಾಣ್‌ ಈ ಮಾರ್ಗಸೂಚಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿದ ಸಂಘಟನೆಯ ಮುಖಂಡ ಶಿಂಗಾರ ಸಿಂಗ್.‌, "ಟಿಕ್ರಿ ಬಾರ್ಡರ್‌ ನಿಂದ ನೀಡಲಾಗಿರುವ ಮಾರ್ಗಸೂಚಿಯನ್ನು ಎಲ್ಲ ರೈತ ಸಂಘಗಳಿಗೆ ಅನ್ವಯಿಸಲು ಸಾಧ್ಯವಿಲ್ಲ. ಎಲ್ಲರೂ ಆ ದಾರಿಯಿಂದ ನಂಗ್ಲೋಯಿವರೆಗೆ ತಲುಪಲು ಸಾಧ್ಯವಿಲ್ಲ. ಈ ಕುರಿತು ನಾವು ಪೊಲೀಸರೊಂದಿಗೆ ಮಾತನಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ಹಿಂದುಸ್ತಾನ್‌ ಟೈಮ್ಸ್‌ ಪ್ರಕಾರ, ಹರ್ಯಾಣದ ಆಡಳಿತವು ಸಾಮಾನ್ಯ ಪ್ರಯಾಣಿಕರಿಗೂ ಮಾರ್ಗಸೂಚಿ ಹೊರಡಿಸಿದೆ. ಅತ್ಯಗತ್ಯವಿಲ್ಲದಿದ್ದರೆ ಯಾರೂ ದಿಲ್ಲಿಯ ಕಡೆಗೆ ಪ್ರಯಾಣ ಬೆಳೆಸದಿರಿ ಎಂದು ಹೇಳಿಕೆ ನೀಡಿದ್ದಾಗಿ hindustantimes.com ವರದಿ ಮಾಡಿದೆ. ಟ್ರಾಫಿಕ್‌ ವ್ಯವಸ್ಥೆಯು ಅಸ್ತವ್ಯಸ್ತವಾಗಲಿದ್ದು, ಸುಗಮಗೊಳಿಸಲು ಪ್ರಯತ್ನಿಸಲಾಗುವುದು ಎಂದು ದಿಲ್ಲಿ ಪೊಲೀಸರು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

ಈ ನಡುವೆ ರೈತರು ಕೂಡಾ ತಮ್ಮದೇ ಭದ್ರತಾ ವ್ಯವಸ್ಥೆಯನ್ನೂ ಕೈಗೊಂಡಿದ್ದಾರೆ. 24 ಗಂಟೆಗಳಿಗೆ ಬೇಕಾಗುವಷ್ಟು ಆಹಾರ, ಸಾಮಗ್ರಿಗಳನ್ನು ತಮ್ಮ ಜೊತೆಯಲ್ಲಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವಂತೆಯೂ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. "ಯಾವುದೇ ವದಂತಿಗಳಿಗೆ ರೈತರು ಬಲಿ ಬೀಳಬಾರದು. ಯಾವುದೇ ಒಂದು ವಿಚಾರದ ಕುರಿತು ನಿಮಗೆ ಸ್ಪಷ್ಟನೆ ಅಗತ್ಯವಿದ್ದಲ್ಲಿ ಕಿಸಾನ್‌ ಏಕ್ತಾ ಮೋರ್ಚಾದ ಫೇಸ್‌ ಬುಕ್‌ ಪೇಜ್‌ ಅನ್ನು ಗಮನಿಸಲು ರೈತ ಮುಖಂಡರು ತಿಳಿಸಿದ್ದಾರೆ. 

ಈ ಟ್ರ್ಯಾಕ್ಟರ್‌ ಪೆರೇಡ್‌ ಮೂಲಕ ನಮ್ಮ ಹೋರಾಟದ ಕುರಿತಾದಂತೆ ನಾವು ಜಗತ್ತಿಗೆ ತಿಳಿಸಲಿದ್ದೇವೆ. ಪೆರೇಡ್‌ ಶಾಂತಿಯುತವಾಗಿ ನಡೆಸುವುದು ನಮ್ಮ ವಿಜಯವಾಗಿದೆ. ನಮಗೆ ದಿಲ್ಲಿಯನ್ನು ಜಯಿಸಬೇಕು ಎಂಬ ಉದ್ದೇಶವೇನಿಲ್ಲ. ನಮಗೆ ಈ ದೇಶದ ಜನರ ಹೃದಯವನ್ನು ಗೆಲ್ಲಬೇಕಾಗಿದೆ" ಎಂದು ರೈತ ಮುಖಂಡರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News