×
Ad

ಮಾರ್ಚ್, ಎಪ್ರಿಲ್ ವೇಳೆ ಹಳೆಯ 100, 10, 5 ರೂ. ಕರೆನ್ಸಿ ನೋಟುಗಳನ್ನು ಆರ್ಬಿಐ ವಾಪಸ್ ಪಡೆಯಲಿದೆಯೇ?

Update: 2021-01-25 20:39 IST

ಹೊಸದಿಲ್ಲಿ,ಜ.25: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂ 100 ರೂ. 10 ಹಾಗೂ ರೂ. 5ರ ಹಳೆಯ ಸೀರೀಸ್ ಕರೆನ್ಸಿ ನೋಟುಗಳನ್ನು  ಮಾರ್ಚ್, ಎಪ್ರಿಲ್ ತಿಂಗಳೊಳಗಾಗಿ ಖಾಯಂ ಆಗಿ ವಾಪಸ್ ಪಡೆಯಲಿದೆ ಎಂಬ ಕುರಿತಂತೆ ಸಾಕಷ್ಟು ಊಹಾಪೋಹಗಳಿವೆ. ಈ ಕುರಿತು ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು  ಇಂತಹ ಯಾವುದೇ ಉದ್ದೇಶವಿಲ್ಲ ಹಾಗೂ ಈ ಕುರಿತಾದ ವರದಿಗಳು `ಸುಳ್ಳು' ಎಂದು ಹೇಳಿದ್ದಾಗಿ ಪ್ರಮುಖ ಮಾಧ್ಯಮಗಳು ವರದಿ ಮಾಡಿದೆ.

ರಿಸರ್ವ್ ಬ್ಯಾಂಕ್‍ನ ವಕ್ತಾರರೊಬ್ಬರು ಈ ಕುರಿತು ಮಾತನಾಡಿ ಹಳೆಯ ರೂ 100, ರೂ 10 ಹಾಗೂ ರೂ 5 ಮುಖಬೆಲೆಯ ಕರೆನ್ಸಿ ನೋಟುಗಳನ್ನು ವಾಪಸ್ ಪಡೆಯಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದೀಗ ಈ ಕುರಿತು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ಪಷ್ಟನೆ ನೀಡಿದ್ದು, ಹಳೆಯ ನೋಟುಗಳನ್ನು ಅಪನಗದೀಕರಣಗೊಳಿಸುವ ಯಾವುದೇ ಯೋಜನೆ ಇಲ್ಲ. ಇದೆಲ್ಲವೂ ಸುಳ್ಳು ಮಾಹಿತಿಯಾಗಿದೆ ಎಂದು ಹೇಳಿಕೆ ನೀಡಿದೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಭದ್ರತಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಕರೆನ್ಸಿ ನಿರ್ವಹಣಾ ಸಮಿತಿ ಸಭೆಯಲ್ಲಿ  ಮಾತನಾಡಿದ್ದ ಆರ್‍ಬಿಐ ಸಹಾಯಕ ಮಹಾಪ್ರಬಂಧಕ ಬಿ ಮಹೇಶ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂ 100 ರೂ 10 ಹಾಗೂ ರೂ 5ರ ಹಳೆಯ ಸೀರೀಸ್ ಕರೆನ್ಸಿ ನೋಟುಗಳನ್ನು  ಮಾರ್ಚ್, ಎಪ್ರಿಲ್ ತಿಂಗಳೊಳಗಾಗಿ ವಾಪಸ್ ಪಡೆಯುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆಂದು ಹಲವಾರು ಮಾಧ್ಯಮಗಳು ವರದಿ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಲ್ಯಾವೆಂಡರ್ ಬಣ್ಣದ ರೂ 100 ಮುಖಬೆಲೆಯ  ಹೊಸ ನೋಟುಗಳು ಗುಜರಾತ್‍ನ ಪಟಾನ್‍ನಲ್ಲಿ ಸರಸ್ವತಿ ನದಿ ದಂಡೆಯಲ್ಲಿರುವ  ಮೆಟ್ಟಿಲುಗಳಿರುವ ಬಾವಿ ʼರಾಣಿ ಕಿ ವವ್ʼ ಚಿತ್ರಣ ಹೊಂದಿದೆ. ಹಳೆಯ ನೂರು ರೂಪಾಯಿ ನೋಟಿಗಳೂ ಚಲಾವಣೆಯಲ್ಲಿರುತ್ತವೆ ಎಂದು  ಈ ಹೊಸ ನೋಟುಗಳನ್ನು  ಚಲಾವಣೆಗೆ ತಂದ ಸಂದರ್ಭದಲ್ಲಿ   ರಿಸರ್ವ್ ಬ್ಯಾಂಕ್ ಹೇಳಿತ್ತು. ನವೆಂಬರ್ 2016ರ ನೋಟು ಅಮಾನ್ಯೀಕರಣದ ನಂತರದ ಬೆಳವಣಿಗೆಯಲ್ಲಿ ಆರ್ಬಿಐ ರೂ 200 ಹಾಗೂ ರೂ 2,000ರ ಹೊಸ ನೋಟುಗಳನ್ನೂ ಚಲಾವಣೆಗೆ ತಂದಿತ್ತು.

ಆದರೆ ಹೆಚ್ಚು ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆಯೆಂದು ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಆರ್‍ಟಿಐ ಅರ್ಜಿಯೊಂದಕ್ಕೆ ಉತ್ತರದಲ್ಲಿ ತಿಳಿಸಿತ್ತು. ಇದೇ ಕಾರಣದಿಂದ ಇತ್ತೀಚೆಗೆ ಎಟಿಎಂಗಳಲ್ಲಿ ಹೆಚ್ಚು ರೂ. 2000 ಮುಖಬೆಲೆಯ ನೋಟುಗಳು ಲಭಿಸುತ್ತಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News