'ರಾಷ್ಟ್ರಪತಿ ಶೌರ್ಯ ಪ್ರಶಸ್ತಿಗೆ ಚಿಕ್ಕಾಸೂ ಬೆಲೆ ನೀಡದ ಕೇರಳ ಪೊಲೀಸ್'

Update: 2021-01-25 15:22 GMT
ತ್ರಿಕಾಗೋಷ್ಠಿಯಲ್ಲಿ ವಿಜಯಲಕ್ಷ್ಮೀ ಅಮ್ಮ ಹಾಗೂ ಮಗಳು ಬೀನಾ

ಉಡುಪಿ, ಜ. 25: ಬರಿಗೈಯಲ್ಲಿ ಡಕಾಯಿತರೊಂದಿಗೆ ಸೆಣಸಾಡಿ ಅಪ್ರತಿಮ ಸಾಹಸ ಪ್ರದರ್ಶಿಸಿದ್ದಕ್ಕಾಗಿ ರಾಷ್ಟ್ರಪತಿಯಿಂದ ಪ್ರತಿಷ್ಠಿತ ಶೌರ್ಯ ಪ್ರಶಸ್ತಿ ಗೆದ್ದ ತನ್ನ ಗಂಡನಿಗೆ ಸಿಗಬೇಕಾಗಿದ್ದ ಗೌರವಧನಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಹೋರಾಡುತ್ತಿರುವ ವಿಜಯಲಕ್ಷ್ಮೀ ಅಮ್ಮ ಇದೀಗ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.

ಈಗ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ಮಗಳು ಬೀನಾ ಅವರೊಂದಿಗೆ ವಾಸವಾಗಿರುವ ಕಲ್ಲಿಕೋಟೆ ಜಿಲ್ಲೆಯ ಕೊಯಿಲಾಂಡಿಯ ನಿವಾಸಿ 82 ವರ್ಷ ಪ್ರಾಯದ ವಿಜಯಲಕ್ಷ್ಮೀ ಅಮ್ಮ ಅವರಿಗೆ ನ್ಯಾಯ ಸಿಗುವವರೆಗೆ ಪ್ರತಿಷ್ಠಾನ ಸಂಪೂರ್ಣ ಬೆಂಬಲ ನೀಡುವುದು ಎಂದು ಸೋಮವಾರ ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಪ್ರತಿಮ ಸಾಹಸ ಮೆರೆದ ಪೊಲೀಸ್ ಸಬ್‌ಇನ್ಸೆಪೆಕ್ಟರ್ ಪತ್ನಿ ನಡೆಸಿದ ಹೋರಾಟವನ್ನು ಎಳೆಎಳೆಯಾಗಿ ಬಿಡಿಸಿಟ್ಟ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ತಿಳಿಸಿದರು.

ಮಂಗಳೂರಿನಲ್ಲಿ ಪೊಲೀಸ್ ಇಲಾಖೆ ಸೇರ್ಪಡೆ: 1951ರಲ್ಲಿ ಪದವಿ ಶಿಕ್ಷಣ ಮುಗಿಸಿದ ಬಾಲಕೃಷ್ಣ ನಾಯರ್, ಅದೇ ವರ್ಷ ಮಂಗಳೂರಿನ ಬಂದರ್ ಪೊಲೀಸ್ ಠಾಣೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿ ತನ್ನ ವೃತ್ತಿ ಬದುಕು ಆರಂಭಿಸಿದರು. ಮುಂದೆ ಹಂಪನಕಟ್ಟೆ, ಬದಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ನಾಯರ್, ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಕಾಸರಗೋಡಿ ನಲ್ಲಿದ್ದುದರಿಂದ ಅಧಿಕೃತವಾಗಿ ಕೇರಳ ಪೊಲೀಸ್ ಇಲಾಖೆಗೆ ಸೇರ್ಪಡೆ ಗೊಂಡರು.

1961ರಲ್ಲಿ ಮಂಜೇಶ್ವರ ಠಾಣೆಯಲ್ಲಿದ್ದಾಗ ಅಂದಿನ ಕುಖ್ಯಾತ ಅಂತರ್ ರಾಜ್ಯ ಡಕಾಯಿತ ಕಿಟ್ಟು ಅಗಸ ತನ್ನ ಸಂಗಡಿಗರೊಂದಿಗೆ ಬದಿಯಡ್ಕದ ಭಟ್ಟರೊಬ್ಬರ ಮನೆಗೆ ದಾಳಿ ನಡೆಸಲಿದ್ದಾರೆ ಎಂಬ ರಹಸ್ಯ ಮಾಹಿತಿಯ ಪಡೆದ ನಾಯರ್, ಪೊಲೀಸ್ ಮಾಹಿತಿದಾರ ಮಹಮ್ಮದ್ ಎಂಬವರೊಂದಿಗೆ ಸ್ಥಳಕ್ಕೆ ಧಾವಿಸಿದ್ದರು. ಪೊಲೀಸ್ ಆಗಮನದ ಸುಳಿವು ದೊರೆತ ಕಿಟ್ಟು ಅಗಸ ಪಲಾಯನಕ್ಕೆ ಹೂಡುವ ಮುನ್ನ ಹೊಡೆದ ಗುಂಡು ಮಹಮ್ಮದ್‌ರ ಕಣ್ಣಿಗೆ ತಗಲಿತು. ಗಂಭೀರ ಗಾಯ ಗೊಂಡ ಮಹಮ್ಮದ್ ಸ್ಥಳದಲ್ಲೇ ಕುಸಿದಿದ್ದರು.

ಜೀವನದ ಹಂಗು ತೊರೆದು ಹೋರಾಟ: ಇದರಿಂದ ಧೃತಿಗೆಡದ ನಾಯರ್, ಜೀವನದ ಹಂಗುತೊರೆದು ಪಿಸ್ತೂಲುಧಾರಿಯಾಗಿದ್ದ ಕಿಟ್ಟು ಅಗಸನ ಮೇಲೆ ಮುಗಿಬಿದ್ದು, ಬರಿಗೈಲಿ ಅವನೊಂದಿಗೆ ಸೆಣಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದರು. ಡಕಾಯಿತನನ್ನು ಲಾಕಪ್‌ಗೆ ಸೇರಿಸಿದ ನಾಯರ್, ತೀವ್ರವಾಗಿ ಗಾಯಗೊಂಡ ಮಾಹಿತಿದಾರ ಮಹಮ್ಮದ್‌ರನ್ನು ರಾತ್ರಿ 4:30ಕ್ಕೆ ತನ್ನ ಮೋಟಾರು ಸೈಕಲ್‌ನಲ್ಲೇ ಮಂಗಳೂರು ಆಸ್ಪತ್ರೆಯೊಂದಿಗೆ ಸಾಗಿಸಿ ಸಾಹಸ ಮೆರೆದಿದ್ದರು. ಕಣ್ಣು ಕಳೆದುಕೊಂಡರೂ ಮಹಮ್ಮದ್‌ರ ಜೀವ ಉಳಿದಿತ್ತು.

ರಾಷ್ಟ್ರಪತಿಗಳಿಂದ ಶೌರ್ಯಪ್ರಶಸ್ತಿ: ಅದಾಗಲೇ ಆರು ದರೋಡೆ ಪ್ರಕರಣ ಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಿಟ್ಟು ಅಗಸನನ್ನು ದೋಚಿದ ಹಣ ಹಾಗೂ ಒಡೆವೆಗಳ ಸಹಿತ ಬಂಧಿಸುವಲ್ಲಿ ತೋರಿದ ಅಪ್ರತಿಮ ಸಾಹಸ ಹಾಗೂ ಸಮಯೋಚಿತ ಕಾರ್ಯಾಚರಣೆಯಿಂದ ಮಹಮ್ಮದ್‌ರ ಜೀವ ಉಳಿಸಿದ್ದಕ್ಕಾಗಿ 1962ರ ಗಣರಾಜ್ಯೋತ್ಸವದಂದು ಬಾಲಕೃಷ್ಣ ನಾಯರ್ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಹಾಗೂ ಚಿನ್ನದ ಪದಕ ಗಳಿಸಿದ್ದರು.

ಕೇಂದ್ರ ಸರಕಾರ ರೂಪಿಸಿದ ನಿಯಮಗಳಂತೆ ರಾಷ್ಟ್ರ ಶೌರ್ಯ ಪ್ರಶಸ್ತಿ ಗಳಿಸಿದ ಸೈನಿಕರು ಅಥವಾ ಪೊಲೀಸರು ಪ್ರಶಸ್ತಿಯ ದಿನದಿಂದ ಪ್ರತಿ ತಿಂಗಳೂ ತಮ್ಮ ಸಂಬಳದೊಂದಿಗೆ ವಿಶೇಷ ನಗದು ಬಹುಮಾನ ಪಡೆಯುತ್ತಾರೆ. ಪೊಲೀಸ್ ಸಿಬ್ಬಂದಿ ತನ್ನ ರಾಜ್ಯದ ಇಲಾಖೆಯ ಮೂಲಕ ಈ ಬಹುಮಾನ ಪಡೆಯುತ್ತಾರೆ. ನಿವೃತ್ತಿಯ ಬಳಿಕ ಪ್ರಶಸ್ತಿಯ ಹಣವನ್ನು ಪ್ರತಿ ತಿಂಗಳು ಅವರ ನಿವೃತ್ತಿ ವೇತನದೊಂದಿಗೆ ನೀಡಲಾಗುತ್ತದೆ. ಅವರ ಮರಣಾ ನಂತರ ಅವರ ಪತ್ನಿ ಈ ನಗದು ಪುರಸ್ಕಾರಕ್ಕೆ ಅರ್ಹರಾಗಿರುವರು.

ಪೊಲೀಸ್ ಇಲಾಖೆಯಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ ಬಾಲಕೃಷ್ಣ ನಾಯರ್ 1981ರಲ್ಲಿ ಸೇವಾ ನಿವೃತ್ತರಾದರು. 1961ರಿಂದ 1975ರವರೆಗೆ ಪ್ರತಿ ತಿಂಗಳು ಕೇವಲ 25 ರೂ.ನಗದು ಪುರಸ್ಕಾರ ಪಡೆಯುತಿದ್ದ ಬಾಲಕೃಷ್ಣ ನಾಯರ್, ಮುಂದೆ ತನ್ಮ ಜೀವತಾವಧಿಯವರೆಗೆ ತಿಂಗಳಿಗೆ 100ರೂ. ಪಡೆಯುತಿದ್ದರು. 1988ರಲ್ಲಿ ನಾಯರ್ ತಮ್ಮ 62ನೇ ವರ್ಷದಲ್ಲಿ ನಿಧನರಾದರು.

ಅವರ ಮರಣಾನಂತರ ಪತ್ನಿ ವಿಜಯಲಕ್ಷ್ಮೀ, ತಮ್ಮ ಮಗಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ವಾಸಿಸತೊಡಗಿದರು. ನಿಯಮದಂತೆ ಪ್ರಶಸ್ತಿ ವಿಜೇತರ ಪತ್ನಿಗೂ ಕುಟುಂಬದ ಪಿಂಚಣಿಯೊಂದಿಗೆ ಈ ಶೌರ್ಯ ಪ್ರಶಸ್ತಿಯ ನಗದು ಪುರಸ್ಕಾರವೂ ಸಿಗಬೇಕಿತ್ತು. ಆದರೆ ಪ್ರಶಸ್ತಿ ಬಾಬ್ತು 100ರೂ. ಪಡೆಯಲು ಅವರು ಪ್ರತಿತಿಂಗಳೂ ವಿಜಯಲಕ್ಷ್ಮೀ ಕಲ್ಲಿಕೋಟೆಯ ಯೊಯಿಲಾಂಡಿಗೆ ಹೋಗಿ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿ, ಸ್ಟೇಟ್ ಬ್ಯಾಂಕ್ ಮೂಲಕ ಪಡೆಯಬೇಕಿತ್ತು. ಇದಕ್ಕೆ ಅವರು ಪ್ರತಿಬಾರಿ 500 ರೂ.ಗೂ ಅಧಿಕ ಖರ್ಚು ಮಾಡಬೇಕಿತ್ತು. ಅದನ್ನು ಸುರತ್ಕಲ್‌ನ ತನ್ನ ಬ್ಯಾಂಕ್ ಖಾತೆಗೆ ಕಳುಹಿಸಿ ಎಂಬ ಮನವಿ ಯಾವುದೇ ಫಲ ನೀಡಲಿಲ್ಲ.

ಹೀಗಾಗಿ ಅವರು ಐದಾರು ತಿಂಗಳಿಗೊಮ್ಮೆ ಕೊಯಿಲಾಂಡಿಗೆ ಹೋಗಿ ಹಣ ಪಡೆಯುವುದನ್ನು ರೂಢಿಸಿಕೊಂಡರು. ಈ ನಡುವೆ ಕಲ್ಲಿಕೋಟೆಯ ಮಾಹಿತಿ ಹಕ್ಕು ಕಾರ್ಯಕರ್ತರು ಪುರಸ್ಕಾರ ಮೊತ್ತದ ಕುರಿತಂತೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕೇಂದ್ರ ಸರಕಾರದ ಗೃಹ ಮಂತ್ರಾಲಯಕ್ಕೆ ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ 2014ರಲ್ಲಿ ಬಂದ ಉತ್ತರ ಎಲ್ಲರ ಅಚ್ಚರಿಗೆ ಕಾರಣವಾಯಿತು.

ಅದರಂತೆ ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುತಿದ್ದ 100ರೂ. ಮೊತ್ತ 1997ರಿಂದ 200, ಬಳಿಕ 500ಕ್ಕೇರಿ 2013ರಲ್ಲಿ 3000ರೂ.ಗೇರಿತ್ತು. ಇದೀಗ ಆ ಮೊತ್ತ 6000ರೂ.ಗೇರಿದೆ. ಆದರೆ ವಿಜಯಲಕ್ಷ್ಮೀ ಅವರಿಗೆ ಆರಂಭ ದಿಂದಲೂ ತಿಂಗಳಿಗೆ ಸಿಗುತಿದ್ದುದು ಕೇವಲ 100ರೂ. ಮಾತ್ರ. ಇನ್ನೂ ನಾಚಿಕೆಗೇಡಿನ ವಿಷಯವೆಂದರೆ ಕಳೆದೆರಡು ವರ್ಷಗಳಿಂದ ಈ ಮೊತ್ತವೂ ಆಕೆಗೆ ಸಿಗುತ್ತಿಲ್ಲ ಎಂದು ಡಾ.ಶಾನುಭಾಗ್ ವಿಷಾಧ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆ ವಿರುದ್ದ ನ್ಯಾಯಾಲಯಕ್ಕೆ: ತನಗೆ ಸಿಗುತ್ತಿರುವ ಕುಟುಂಬ ಪಿಂಚಣಿಗಿಂತ ಗಂಡನ ಶೌರ್ಯ ಪ್ರಶಸ್ತಿಗೆ ಸಿಗಬೇಕಾದ ನ್ಯಾಯಯುತ ಗೌರವ ಪಡೆಯುವ ಛಲದೊಂದಿಗೆ ವಿಜಯಮ್ಮ ಪೊಲೀಸ್ ಇಲಾಖೆಯನ್ನು ನ್ಯಾಯಾಲಯಕ್ಕೇಳೆಯಲು ನಿರ್ಧರಿಸಿದರು. 2015ರಲ್ಲಿ ಕಲ್ಲಿಕೋಟೆಯ ವಕೀಲರೊಬ್ಬರ ಮೂಲಕ ಕೇರಳ ಗೃಹ ಸಚಿವಾಲಯಕ್ಕೆ ನೀಡಿದ ನೋಟೀಸಿಗೆ ಕೇರಳ ಸರಕಾರ ಉತ್ತರಿಸಲೇ ಇಲ್ಲ. ಇದರಿಂದ 2016ರಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಲಾಯರ್ ನೋಟೀಸು ಕಳುಹಿಸಿದರು. 10 ದಿನದಲ್ಲೇ ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ ಕೇಂದ್ರ ಗೃಹ ಸಚಿವಾಲಯ ವಿಜಯಲಕ್ಷ್ಮೀ ಅವರಿಗೆ ನೀಡಬೇಕಾದ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿತು.

ತನ್ನ ಸಾಹಸಿ ಗಂಡನ ಗೌರವದ ಪ್ರತೀಕವಾದ ಶೌರ್ಯ ಪ್ರಶಸ್ತಿಯ ಗೌರವಧನ ಪಡೆಯುವ ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಕೊನೆಗೆ ವಿಜಯಲಕ್ಷ್ಮೀ ಅವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ತಮಗೆ ಸಹಾಯ ಮಾಡುವಂತೆ ಕೋರಿಕೊಂಡರು.

ಇದೀಗ 82ರ ವೃದ್ಧೆಗಾಗಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಪ್ರತಿಷ್ಠಾನ ಮುಂದಾಗಿದೆ. ಅವರಿಗೆ ಈಗ ಬರಲು ಬಾಕಿ ಇರುವ ಹಣ ಎಷ್ಟು ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದು ಡಾ.ಶಾನುಭಾಗ್ ಹೇಳುತ್ತಾರೆ. ಈ ವೃದ್ಧೆಗಾಗಿರುವ ಅನ್ಯಾಯದ ವಿರುದ್ಧ ಕೇರಳದಾದ್ಯಂತ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಪ್ರತಿಷ್ಠಾನ ತಿರುವನಂತಪುರ ಹಾಗೂ ಕಲ್ಲಿಕೋಟೆಯ ಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಸಂಘಟನೆಗಳನ್ನು ಸಂಪರ್ಕಿಸಿದ್ದು, ಆಕೆಗೆ ನ್ಯಾಯ ಸಿಗುವವರೆಗೆ ತನ್ನ ಹೋರಾಟವನ್ನು ಮುಂದುವರಿಸುವುದು ಎಂದವರು ಹೇಳಿದರು.

1962ರ ಜ.26ರ ‘ಕನ್ನಡವಾಣಿ’ ಗಣರಾಜ್ಯೋತ್ಸವ ವಿಶೇಷ ಸಂಚಿಕೆಯಲ್ಲಿ
ಬಾಲಕೃಷ್ಣ ನಾಯರ್ ಅವರ ಸಾಹಸದ ಲೇಖನ ಪ್ರಕಟ ಗೊಂಡಿರುವುದು.

---

ಬಾಲಕೃಷ್ಣ ನಾಯರ್‌ಗೆ ಕೇಂದ್ರ ಸರಕಾರ ನೀಡಿರುವ
ಶೌರ್ಯಚಕ್ರ ಪ್ರಶಸ್ತಿಯ ಚಿನ್ನದ ಪದಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News