ಬೀಜ ಬಿತ್ತನೆ ಯಂತ್ರ ‘ಸೀಡೋಗ್ರಾಫರ್’ ಅಭಿವೃದ್ಧಿ: ರಾಕೇಶ್ ಕೃಷ್ಣ

Update: 2021-01-25 17:02 GMT

ಮಂಗಳೂರು, ಜ.25: ಬೀಜ ಬಿತ್ತನೆ ಯಂತ್ರ ‘ಸೀಡೋಗ್ರಾಫರ್’ ಆವಿಷ್ಕಾರಕ್ಕಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕೃತ ಪುತ್ತೂರು ಸಮೀಪದ ಬನ್ನೂರಿನ 16ರ ಹರೆಯದ ಬಾಲಕ ರಾಕೇಶ್ ಕೃಷ್ಣ, ಈ ಯಂತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ದೇಶದ 32 ಮಕ್ಕಳ ಜತೆ ಸೋಮವಾರ ನರೇಂದ್ರ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದು, ಈ ಸಂದರ್ಭ ರಾಕೇಶ್ ಕೃಷ್ಣ ಸಹಿತ ಆಯ್ದ ಐವರು ಬಾಲ ಸಾಧಕರೊಂದಿಗೆ ನೇರ ಮಾತುಕತೆಯನ್ನೂ ನಡೆಸಿದರು.

ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವಾಗ ಕೃಷಿಯ ಬಗ್ಗೆ ಒಲವು ಯಾಕೆ ಎಂಬ ಪ್ರಧಾನಿಯ ಪ್ರಶ್ನೆಗೆ ಉತ್ತರಿಸಿದ ರಾಕೇಶ್ ಕೃಷ್ಣ, ರೈತ ಕುಟುಂಬದಿಂದ ಬಂದ ನನಗೆ ಕೃಷಿಯಲ್ಲಿ ಹೆಚ್ಚು ಆಸಕ್ತಿ ಇದೆ. ನನ್ನ ತಂದೆ ಈಗಲೂ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಜ್ಜನ ಜೊತೆ ಹೊಲಕ್ಕೆ ತೆರಳಿ ಕೃಷಿ ಚಟುವಟಿಕೆಗಳನ್ನು ಗಮನಿಸುತ್ತಿದ್ದೆ. ಪ್ರಸ್ತುತ ಕಾರ್ಮಿಕರ ವೇತನ ಹೆಚ್ಚಳ, ಕೌಶಲವಿರುವ ಕಾರ್ಮಿಕರ ಕೊರತೆ ಇತ್ಯಾದಿ ಕೃಷಿಕರ ಸಮಸ್ಯೆಗಳನ್ನು ಗಮನಿಸಿದ ಬಳಿಕ ರೈತಗಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಈ ಆವಿಷ್ಕಾರಕ್ಕೆ ಮುಂದಾಗಿದ್ದೆ ಎಂದು ಉತ್ತರಿಸಿದರು.

ಈ ಸ್ಟಾರ್ಟ್‌ಅಪ್ ಯಂತ್ರಕ್ಕೆ ಮಾರುಕಟ್ಟೆ ಬೇಡಿಕೆ ಸಿಕ್ಕಿಲ್ಲವೇ? ಎಂದು ಪ್ರಧಾನಿಯ ಪ್ರಶ್ನಗೆ ಪ್ರತಿಕ್ರಿಯಿಸಿದ ರಾಕೇಶ್ ಕೃಷ್ಣ 2017ರಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಫೆಸ್ಟಿವಲ್ ಆಫ್ ಇನ್ನೋವೇಶನ್ಸ್‌ನಲ್ಲಿ ಈ ಯಂತ್ರ ಪ್ರದರ್ಶನ ಮಾಡಿದ್ದೆ. ಆಗ ಕೆಲವರು ಖರೀದಿಸುವ ಆಸಕ್ತಿ ತೋರಿಸಿದ್ದರು. ಆದರೆ ಈ ಯಂತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ. ಅದರ ನಂತರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದೇನೆ ಎಂದರು.

ಬಿತ್ತನೆ ಅವಧಿ ಗಣನೀಯ ಇಳಿಕೆ: ಪ್ರಧಾನಿಯ ಜೊತೆ ವೀಡಿಯೋ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಕೇಶ್ ಕೃಷ್ಣ, ಸೀಡೋಗ್ರಾಫರ್ ಆವಿಷ್ಕಾರಕ್ಕೆ ಮೊದಲು ಪ್ರಸ್ತುತ ಚಾಲ್ತಿಯಲ್ಲಿರುವ ಕೃಷಿ ಪದ್ಧತಿಗಳನ್ನು ಅಧ್ಯಯನ ಮಾಡಿದ್ದೆ. ಒಂದು ಎಕರೆ ಜಾಗದಲ್ಲಿ ಒಬ್ಬ ಕಾರ್ಮಿಕ ಬಿತ್ತನೆ ಮಾಲು 100- 120 ಗಂಟೆ ತಗಲುತ್ತದೆ. ಆದರೆ ಈ ಯಂತ್ರದಲ್ಲಿ ಒಬ್ಬ ವ್ಯಕ್ತಿ ಒಂದು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲು ಕೇವಲ 18 ಗಂಟೆ ಶ್ರಮ ವಹಿಸಿದರೆ ಸಾಕು. ಮೋಟಾರು ಅಳವಡಿಸಿ ಸ್ವಯಂ ಚಾಲಿತಗೊಳಿಸಿದರೆ 10 ಗಂಟೆಗೂ ಕಡಿಮೆ ಅವಧಿಯಲ್ಲಿ ಬಿತ್ತನೆ ಸಾಧ್ಯ ಎಂದರು.

ಈಗ ತಯಾರಿಸಿದ ಯಂತ್ರವನ್ನು ಜಮೀನಿನಲ್ಲಿ ಎಳೆದೊಯ್ದರೆ ಅದರಲ್ಲಿರುವ ನೇಗಿಲು ಭೂಮಿಯನ್ನು ಉಳುಮೆ ಮಾಡಲಿದೆ. ನೇಗಿಲು ಸಾಗಿದ ಹಾದಿಯಲ್ಲಿ ಒಂದೊಂದೇ ಬೀಜ ನಿರ್ದಿಷ್ಟ ಅಂತರದಲ್ಲಿ ಬೀಳುತ್ತದೆ. ಜತೆಗೆ ಸ್ವಲ್ಪ ನೀರು ಕೂಡ ಸಿಂಪಡಣೆ ಯಾಗುತ್ತದೆ. ಇಷ್ಟಾದ ಮೇಲೆ ಯಂತ್ರದ ಹಿಂದಿನ ರಚನೆಯೊಂದು ಬೀಜದ ಮೇಲೆ ಎರಡು ಅಥವಾ ಎರಡೂವರೆ ಇಂಚು ಮಣ್ಣು ಹಾಕಿ ಮುಚ್ಚುತ್ತಾ ಸಾಗುತ್ತದೆ. ಬೀಜ, ನೀರು ಹಾಕಲು ಯಂತ್ರದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನೀರಿನೊಂದಿಗೆ ರಸಗೊಬ್ಬ ರವನ್ನೂ ಬೆರೆಸಬಹುದು. ಯಾವ ಅಂತರದಲ್ಲಿ ಬೀಜ ಭೂಮಿಗೆ ಬೀಳಬೇಕು ಎನ್ನುವುದನ್ನು ಬೇಕಾದಂತೆ ಬದಲಾವಣೆ ಮಾಡಬಹುದು ಎಂದು ರಾಕೇಶ್ ಕೃಷ್ಣ ಹೇಳಿದರು.

ಸುಮಾರು 15-18 ಕೆಜಿ ಭಾರ ಇರುವ ಈ ಯಂತ್ರದಿಂದ ರಾಗಿ, ಜೋಳ, ತರಕಾರಿ ಬೀಜಗಳನ್ನು ಬಿತ್ತನೆ ಮಾಡಿದ್ದೇನೆ. ಒಣಭೂಮಿಗೆ ಈ ವಿಧಾನ ಅತ್ಯುತ್ತಮವಾಗಿದ್ದು, ನೀರಿನ ಉಳಿತಾಯ ಮಾಡಬಹುದು. ಗದ್ದೆಯ ನಿಂತ ನೀರಿನಲ್ಲೂ ಭತ್ತ ಬಿತ್ತನೆ ಮಾಡಬಹುದು. ಸಿಂಗಲ್ ಲೇನ್ ಯಂತ್ರಕ್ಕೆ ಇನ್ನೂ ಹಲವು ಲೇನ್‌ಯಂತ್ರಗಳನ್ನು ಸೇರಿಸಿ ಟ್ರೈಲೇನ್, ಪೆಂಟಾಲೇನ್ ಪ್ರಯೋಗವನ್ನೂ ಮಾಡಿದ್ದೇನೆ. ಇದರಿಂದ ಮತ್ತಷ್ಟು ಸಮಯ ಉಳಿತಾಯವಾಗುತ್ತದೆ ಎಂದು ರಾಕೇಶ್ ಕೃಷ್ಣ ತಿಳಿಸಿದರು.

ಈಗ ತಯಾರಿಸಿದ ಯಂತ್ರದಲ್ಲೇ ಮಣ್ಣಿನ ಗುಣಮಟ್ಟ, ಮಣ್ಣಿನೊಳಗಿನ ತೇವಾಂಶವನ್ನು ಸ್ವಯಂ ಪರಿಶೀಲಿಸುವ ಸೆನ್ಸಾರ್ ಅಳವಡಿಸುವ ಉದ್ದೇಶ ಇದೆ. ಜತೆಗೆ ಸೌರ ಶಕ್ತಿಯ ಮೂಲಕ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಣೆ ಮಾಡುವಂತಾಗಬೇಕು. ಬೀಜ ಬಿತ್ತನೆ ಮಾಡುತ್ತ ಹೋದಂತೆ ಮಣ್ಣಿನ ತೇವಾಂಶ ಎಷ್ಟಿದೆ ಎಂಬುದನ್ನು ಸೆನ್ಸಾರ್ ಗುರುತಿಸಲಿದ್ದು, ಅದಕ್ಕೆ ಬೇಕಾದಷ್ಟೇ ಪ್ರಮಾಣದಲ್ಲಿ ಸ್ವಯಂಚಾಲಿತವಾಗಿ ನೀರು ಚಿಮುಕುವ ವ್ಯವಸ್ಥೆ ಮಾಡುವ ಉದ್ದೇಶವಿದೆ. ಇದು ಕಾರ್ಯರೂಪಕ್ಕೆ ಬರಲು ಇನ್ನು 2-3 ವರ್ಷಗಳು ಬೇಕು. ಆ ಬಳಿಕ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದೇನೆ ಎಂದು ರಾಕೇಶ್ ಕೃಷ್ಣ ಹೇಳಿದರು.

ಇನ್ವೆಂಟರ್ ಆಗುವಾಸೆ: ಕೃಷಿಯಲ್ಲಿ ಏಕೀಕೃತ ವ್ಯವಸ್ಥೆ ಆಗಬೇಕಿದೆ. ಅದಕ್ಕಾಗಿ ಭವಿಷ್ಯದಲ್ಲಿ ಇನ್ವೆಂಟರ್ ಆಗುವಾಸೆ ಇದೆ. ನನ್ನ ಈ ಸಾಧನೆಗೆ ಹೆತ್ತವರು, ಅಕ್ಕ ರಶ್ಮಿ ಪಾರ್ವತಿ, ಶಿಕ್ಷಕರು, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ್ದಾರೆ ಎಂದು ರಾಕೇಶ್ ಕೃಷ್ಣ ನುಡಿದರು.

ರಾಕೇಶ್‌ರ ತಂದೆ ರವಿಶಂಕರ್ ಕೆ., ತಾಯಿ ದುರ್ಗಾರತ್ನ ಮಾತನಾಡಿ, ಮಗನ ಸಾಧನೆ ಹೆಮ್ಮೆ ತಂದಿದೆ. ಮಗ ಆವಿಷ್ಕರಿಸಿದ ಯಂತ್ರದಿಂದ ತರಕಾರಿ, ಹಣ್ಣಿನ ಗಿಡಗಳು, ಬೇಸಾಯ ಮಾಡಿದ್ದೇವೆ ಎಂದರು.

ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ರಾಕೇಶ್ ಕೃಷ್ಣ ಅವರನ್ನು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News