ಗಣರಾಜ್ಯೋತ್ಸವ: ಗಮನಸೆಳೆದ ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಸ್ತಬ್ಧ ಚಿತ್ರ

Update: 2021-01-26 18:02 GMT

ಹೊಸದಿಲ್ಲಿ, ಜ.26: ಕೊರೋನ ಸೋಂಕು ಈ ಬಾರಿಯ ಗಣರಾಜ್ಯೋತ್ಸವ ಆಚರಣೆಯ ಮೇಲೂ ಪರಿಣಾಮ ಬೀರಿದ್ದು ಪರೇಡ್ ಸಾಗುವ ಮಾರ್ಗ, ಪಥಸಂಚಲನದಲ್ಲಿ ಭಾಗವಹಿಸುವವರು, ಅತಿಥಿಗಳ ಸಂಖ್ಯೆ, ಟ್ಯಾಬ್ಲೊಗಳ ಪ್ರಮಾಣ ಕಳೆದ ಬಾರಿಗಿಂತ ಕಡಿಮೆಯಾಗಿತ್ತು. 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಸ್ತಬ್ಧಚಿತ್ರಗಳು, ಕೇಂದ್ರ ಸರಕಾರದ ವಿವಿಧ ಇಲಾಖೆಗಳ 9 ಟ್ಯಾಬ್ಲೊಗಳು, ರಕ್ಷಣಾ ಇಲಾಖೆಯ 6 ಟ್ಯಾಬ್ಲೊಗಳು ಪ್ರದರ್ಶನಗೊಂಡವು. ಉತ್ತರಪ್ರದೇಶ ರಾಜ್ಯವು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಸ್ತಬ್ಧಚಿತ್ರ ಪ್ರಸ್ತುತಪಡಿಸಿದ್ದು ಇದರ ಜೊತೆಗೆ ರಾಮಾಯಣ ಮಹಾಕಾವ್ಯದಲ್ಲಿ ಬರುವ ವಿವಿಧ ಕತೆಗಳ ಚಿತ್ರಗಳು, ರಾಮಾಯಣ ಬರೆದ ವಾಲ್ಮೀಕಿ ಋಷಿಯ ಬೃಹತ್ ಪ್ರತಿಕೃತಿ ಗಮನ ಸೆಳೆದಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಸ್ತಬ್ಧಚಿತ್ರವನ್ನು ಹೊತ್ತಿದ್ದ ವಾಹನ ಸಾಗಿ ಬಂದಾಗ ಕೇಂದ್ರ ಸಚಿವರ ಸಹಿತ ವೀಕ್ಷಕರು ಎದ್ದುನಿಂತು ಚಪ್ಪಾಳೆ ಹೊಡೆದರು.

ಪ್ರಥಮ ಬಾರಿಗೆ ಲಡಾಕ್‌ನಿಂದ ಸ್ಥಬ್ಧಚಿತ್ರ ಪ್ರದರ್ಶನ:

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇದೇ ಮೊದಲ ಬಾರಿಗೆ ಲಡಾಕ್ ಮತ್ತು ಕೋವಿಡ್-19 ಸೋಂಕಿನ ಸ್ತಬ್ಧಚಿತ್ರ ಪ್ರದರ್ಶಿತವಾಗಿದೆ. 2019ರಲ್ಲಿ ಕಾಶ್ಮೀರ ರಾಜ್ಯದಿಂದ ಪ್ರತ್ಯೇಕವಾಗಿ ನೂತನ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಲಡಾಕ್‌ನ ವಿಶಿಷ್ಟ ಕಲೆ ಮತ್ತು ವಾಸ್ತುಶಿಲ್ಪ, ಭಾಷೆ, ಪದ್ಧತಿ, ಉತ್ಸವಗಳನ್ನು ಬಿಂಬಿಸುವ ಚಿತ್ರಗಳು, ಬೌದ್ಧ ಧರ್ಮಗುರುವಿನ ಬೃಹತ್ ಪ್ರತಿಕೃತಿ, ಲೇಹ್‌ನಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯದ ಪ್ರತಿಕೃತಿ ಗಮನ ಸೆಳೆದಿದೆ. ಜೈವಿಕ ತಂತ್ರಜ್ಞಾನ ಇಲಾಖೆಯು ಆತ್ಮನಿರ್ಭರ ಭಾರತ ವಿಷಯವನ್ನು ಆಧರಿಸಿದ ‘ಮಿಷನ್ ಕೋವಿಡ್ ಸುರಕ್ಷಾ’ ಎಂಬ ಘೋಷಣೆಯೊಂದಿಗೆ ದೇಶದಲ್ಲಿ ತಯಾರಿಸಿರುವ ಕೊರೋನ ಲಸಿಕೆಯ ಸ್ತಬ್ಧಚಿತ್ರ ಪ್ರದರ್ಶಿಸಿದೆ. ಭೂಮಿಯನ್ನು ಸುತ್ತುವರಿದ ಉಂಗುರದಲ್ಲಿ ಮಧ್ಯಭಾಗದಲ್ಲಿ ಭಾರತದ ನಕ್ಷೆಯೊಂದಿಗೆ, ದೇಶದಲ್ಲಿ ನಿರ್ಮಿಸಿರುವ ಕೋವಿಡ್ ಲಸಿಕೆ, ಇದಕ್ಕಾಗಿ ನಡೆಸಿರುವ ವಿಸ್ತೃತ ಸಂಶೋಧನಾ ಕಾರ್ಯಗಳನ್ನು ಟ್ಯಾಬ್ಲೊ ಪ್ರತಿಬಿಂಬಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಪ್ರತೀ ವರ್ಷ ಗಣರಾಜ್ಯೋತ್ಸವದಂದು ರಾಜಪಥ್‌ನಲ್ಲಿ ಮೂರೂ ರಕ್ಷಣಾ ಸೇವೆಗಳಿಗೆ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ದೇಶ ಹೊಂದಿರುವ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳ ಮಾಹಿತಿ ನೀಡಲು ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವರ್ಷದ ಪ್ರಮುಖ ಸಾಧನೆಗಳನ್ನು ಪರಿಚಯಿಸುವ ಎರಡು ಟ್ಯಾಬ್ಲೊಗಳನ್ನು ಪ್ರದರ್ಶಿಸಿದೆ. ಒಂದರಲ್ಲಿ ಲಘು ಯುದ್ಧವಿಮಾನಗಳು, ಮತ್ತೊಂದರಲ್ಲಿ ಟ್ಯಾಂಕ್ ನಿರೋಧಕ ಕ್ಷಿಪಣಿಗಳ ಪ್ರತಿಕೃತಿಗಳಿದ್ದವು. ಗುಜರಾತ್ ರಾಜ್ಯ ಮೊಧೇರಾದಲ್ಲಿರುವ ಸೂರ್ಯ ದೇವಸ್ಥಾನದ ಟ್ಯಾಬ್ಲೊ ಪ್ರಸ್ತುತ ಪಡಿಸಿತು.

ಪರೇಡ್‌ನಲ್ಲಿ ಪಾಲ್ಗೊಂಡ ದೇಶದ ಪ್ರಥಮ ಮಹಿಳಾ ಫೈಟರ್ ಪೈಲಟ್ ಭಾವನಾ ಕಾಂತ್

ದೇಶದಲ್ಲಿ ಯುದ್ಧವಿಮಾನದ ಪೈಲಟ್ ಅರ್ಹತೆ ಪಡೆದಿರುವ ಪ್ರಪ್ರಥಮ ಮಹಿಳೆ ಲೆ ಭಾವನಾ ಕಾಂತ್, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ದೇಶದ ಪ್ರಥಮ ಮಹಿಳಾ ಪೈಲಟ್ ಆಗಿ ಗುರುತಿಸಿಕೊಂಡಿದ್ದಾರೆ.

2017ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ತುಕಡಿಗೆ ಸೇರ್ಪಡೆಯಾದ ಭಾವನಾ ಕಾಂತ್, 2018ರ ಮಾರ್ಚ್‌ನಲ್ಲಿ ಮಿಗ್-21 ಯುದ್ಧವಿಮಾನವನ್ನು ಯಶಸ್ವಿಯಾಗಿ ಚಲಾಯಿಸಿದ್ದರು. ಪ್ರಸ್ತುತ ಪಶ್ಚಿಮ ವಿಭಾಗದ ಯುದ್ಧನೆಲೆಯಲ್ಲಿ ಕರ್ತವ್ಯ ನಿಯೋಜಿತರಾಗಿದ್ದಾರೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ‘ಇಂಡಿಯನ್ ಏರ್‌ಫೋರ್ಸ್: ಟಚ್ ದ ಸ್ಕೈ ವಿತ್ ಗ್ಲೋರಿ’ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಸ್ತುತಗೊಂಡ ಭಾರತೀಯ ವಾಯಪಡೆಯ ಟ್ಯಾಬ್ಲೊ ಲಘು ಯುದ್ಧವಿಮಾನ, ಲಘು ಯುದ್ಧ ಹೆಲಿಕಾಪ್ಟರ್‌ಗಳು, ಎಸ್‌ಯು-30 ಎಂಕೆ-1 ಯುದ್ಧವಿಮಾನ ಮತ್ತು ರೋಹಿಣಿ ರೇಡಾರ್‌ನ ಪ್ರತಿಕೃತಿಯನ್ನು ಹೊಂದಿತ್ತು. ವಾಯುಪಡೆ ಬ್ಯಾಂಡ್‌ನ ನೇತೃತ್ವವನ್ನು ಅಧಿಕಾರಿ ಅಶೋಕ್ ಕುಮಾರ್ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News