ರಾಷ್ಟ್ರಧ್ವಜ ಅರಳಿಸಿ, ಗಿಡ ನೆಡುವ ಮೂಲಕ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯ ಆರಂಭ

Update: 2021-01-26 10:16 GMT

ಲಕ್ನೋ,ಜ.26:  ಭಾರತದ 72ನೇ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜವನ್ನು ಅರಳಿಸಿ ಹಾಗೂ ಗಿಡ ನೆಡುವ ಕಾರ್ಯಕ್ರಮದ ಮೂಲಕ  ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಇಂದು ಅಧಿಕೃತವಾಗಿ ಚಾಲನೆ ದೊರೆಯಿತು.  ಸುಪ್ರೀಂ ಕೋರ್ಟ್ 2019ರಲ್ಲಿ ನೀಡಿದ ತೀರ್ಪಿನನ್ವಯ  ಮಸೀದಿ ನಿರ್ಮಾಣ  ಆರಂಭಗೊಂಡಿದೆ.

ಅಯ್ಯೋಧ್ಯೆಯ ಧನ್ನಿಪುರ್ ಗ್ರಾಮದ ಐದು ಎಕರೆ ಜಮೀನಿನಲ್ಲಿ ಮಸೀದಿ ನಿರ್ಮಿಸುವ ಕಾರ್ಯವನ್ನು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಕೈಗೆತ್ತಿಕೊಳ್ಳಲಿದೆ.  ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವ ರಾಮ ಜನ್ಮಭೂಮಿಯಿಂದ ಈ ಗ್ರಾಮ 25 ಕಿಮೀ ದೂರದಲ್ಲಿದೆ. ರಾಷ್ಟ್ರಧ್ವಜವನ್ನು ಸರಿಯಾಗಿ 8.45ಕ್ಕೆ ಟ್ರಸ್ಟ್ ಮುಖ್ಯಸ್ಥರಾದ ಝಫರ್ ಅಹ್ಮದ್ ಫಾರೂಖಿ ಅರಳಿಸಿದರು. ನಂತರ ಟ್ರಸ್ಟ್ ನ ಎಲ್ಲಾ 12 ಮಂದಿ ಸದಸ್ಯರು  ಸ್ಥಳದಲ್ಲಿ ಸಸಿಯನ್ನು ನೆಟ್ಟರು.

"ಮಸೀದಿ ನಿರ್ಮಾಣವಾಗಲಿರುವ ಜಮೀನಿನ ಮಣ್ಣು ಪರೀಕ್ಷೆ ಕೆಲಸ ಆರಂಭಗೊಂಡಿದೆ. ಆದುದರಿಂದ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ಕೆಲಸ ಆರಂಭವಾಗಿದೆ ಎಂದು ಹೇಳಬಹುದು. ಮಣ್ಣು ಪರೀಕ್ಷೆಯ ವರದಿ ಬಂದ ನಂತರ ಹಾಗೂ ಮಸೀದಿಯ ನಕ್ಷೆಗೆ ಅನುಮೋದನೆ ದೊರೆತ  ನಂತರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮಸೀದಿಗಾಗಿ ದೇಣಿಗೆಗಳಿಗೆ ಅಪೀಲು ಮಾಡಿದ್ದೇವೆ. ಈಗಾಗಲೇ ಜನರು ದೇಣಿಗೆ ನೀಡುತ್ತಿದ್ದಾರೆ," ಎಂದು ಫಾರೂಖಿ ಹೇಳಿದ್ದಾರೆ.

ಮಸೀದಿಯ ಪ್ರಸ್ತಾವಿತ ವಿನ್ಯಾಸವನ್ನು ಕಳೆದ ವಾರ ಫೌಂಡೇಶನ್ ಅನಾವರಣಗೊಳಿಸಿತ್ತು. ಸುಂದರ ಉದ್ಯಾನವನ ಹಾಗೂ ಬೃಹತ್ ಗಾಜಿನ ಗೋಪುರವನ್ನು ಈ ಮಸೀದಿ ಒಳಗೊಳ್ಳಲಿದೆ. ಅದರ ಹಿಂಬದಿಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲಿದೆ. ಮಸೀದಿಯ ಹೆಸರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ, ಮೊದಲ ಹಂತದಲ್ಲಿ ಮಸೀದಿ ಹಾಗೂ  ಆಸ್ಪತ್ರೆ ನಿರ್ಮಾಣಗೊಳ್ಳಲಿದ್ದು ಎರಡನೇ ಹಂತದಲ್ಲಿ ಆಸ್ಪತ್ರೆಯ ವಿಸ್ತರಣೆ ನಡೆಯಲಿದೆ.

ಆಸ್ಪತ್ರೆ ಸಂಕೀರ್ಣದಲ್ಲಿ  ಸಮುದಾಯ ಭೋಜನಶಾಲೆಯಿರಲಿದ್ದು ಇಲ್ಲಿ ಪ್ರತಿನಿತ್ಯ ಕನಿಷ್ಠ 1,000 ಮಂದಿಗೆ ಪೌಷ್ಠಿಕಾಂಶಯುಕ್ತ ಊಟ ದೊರೆಯಲಿದೆ. ಈ ಸ್ಥಳದ ಸುತ್ತಮುತ್ತಲಿನ ಜನರ ವೈದ್ಯಕೀಯ ಅಗತ್ಯತೆಗಳ ಕುರಿತು ಟ್ರಸ್ಟ್ ಅಧ್ಯಯನ ನಡೆಸಿದ್ದು, ಅಪೌಷ್ಠಿಕಾಂಶತೆ ಪ್ರಮುಖ ಸಮಸ್ಯೆಯಾಗಿದೆ ಎಂಬುದನ್ನು ಮನಗಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಅಥರ್ ಹುಸೈನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News