'ದೇಶವನ್ನು ಮಹಿಳಾ ದೌರ್ಜನ್ಯ, ಅತ್ಯಾಚಾರಗಳಿಂದ ಮುಕ್ತಗೊಳಿಸಿ'

Update: 2021-01-26 14:23 GMT

ಉಡುಪಿ, ಜ.26: ರಾಜಕೀಯ ಪಕ್ಷಗಳು ಭಾರತ ತಮ್ಮದೇ ಪಿತ್ರಾರ್ಜಿತ ಆಸ್ತಿ ಎಂಬಂತೆ ಕಚ್ಚಾಡುತ್ತಿರುವುದರಿಂದ ಸರಕಾರದ ಮೇಲಿನ ಭರವಸೆ ಬಗ್ಗೆ ನಿರಾಶೆ ಮೂಡುತ್ತದೆ. ಅಲಕ್ಷಿತ ವರ್ಗವನ್ನು ಆತ್ಮಗೌರವದಿಂದ ಬಾಳುವಂತೆ ಮಾಡುವ, ರೈತರ ಕಷ್ಟಕ್ಕೆ ಯಾವುದೇ ನೆಪವನ್ನೂ ಹೇಳದೆ ಸಕಾರಾತ್ಮಕವಾಗಿ ತಕ್ಷಣ ಸ್ಪಂದಿಸುವ ಮತ್ತು ದೇಶವನ್ನು ಮಹಿಳಾ ದೌರ್ಜನ್ಯ, ಅತ್ಯಾಚಾರ ಗಳಿಂದ ಮುಕ್ತ ಮಾಡುವ ಕಡೆಗೆ ಸರಕಾರ ದುಡಿದು ಸಾಧಿಸಿ ತೋರಿಸಬೇಕು ಎಂದು ಹಿರಿಯ ಲೇಖಕಿ ವೈದೇಹಿ ಹೇಳಿದ್ದಾರೆ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾರಥ್ಯದಲ್ಲಿ ಉಸಿರು ಕೋಟ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಮಂಗಳವಾರ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಚೇತನ ಪ್ರೌಢಶಾಲೆಯ ಸರಸ್ವತಿ ಬಾಯಿ ರಾಜವಾಡೆ ವೇದಿಕೆಯಲ್ಲಿ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ 14ನೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಸ್ಥಾನದಿಂದ ಅವರು ಮಾತ ನಾಡುತಿದ್ದರು.

ಸೃಜನಶೀಲ ಪ್ರಕ್ರಿಯೆಯನ್ನು ಎಂದೂ ತಡೆಯಲಾಗದು ಎಂಬ ಪ್ರಾಥಮಿಕ ಜ್ಞಾನವೂ ಇಲ್ಲದ ಹಲ್ಲೆಕೋರರಿಂದ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಿರಂತರ ನಡೆಯುತ್ತಿರುವ ದಾಳಿ, ಮೂಢನಂಬಿಕೆ ವಿರುದ್ದ ಮಾತನಾಡಿದವರನ್ನು ಧಮನಿಸುವ ಕುತ್ಸಿತ ಹುನ್ನಾರಗಳು ಮತ್ತು ಕಗ್ಗೊಲೆಯಂತಹ ಅಮಾನುಷತೆ ನಮ್ಮನ್ನು ತಲ್ಲಣಗೊಳಿಸುತ್ತಿದೆ. ನಾವು ಈ ರೀತಿಯ ಕ್ರೌರ್ಯದ ಬಗ್ಗೆ ಎಚ್ಚೆತ್ತು ಕೊಳ್ಳಬೇಕಾಗಿದೆ ಎಂದರು.

ಭಯ ಹೆಣ್ಣನ್ನು ಆಳುತ್ತಿದೆ

ದೇಹವೇ ಹೆಣ್ಣಿಗೆ ಶತ್ರುವಾಯಿತೆಂಬ ಚಿಂತನೆ ಮಾಡುವಷ್ಟು ದೇಶದಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ. ಇಂದು ಎಲ್ಲ ರೀತಿಯ ಭಯವೇ ಹೆಣ್ಣನ್ನು ಆಳುತ್ತಿದೆ. ಒಂದೆಡೆ ಪುಂಡ ಪೋಕರಿಗಳು, ಇನ್ನೊಂದೆಡೆ ಸಂಸ್ಕೃತಿಯ ಗುತ್ತಿಗೆ ದಾರರು. ಈ ಎಲ್ಲರದ ಮಧ್ಯೆ ಹೆಣ್ಣು ನಲುಗುವಂತಾಗಿದೆ ಎಂದು ವೈದೇಹಿ ಆತಂಕ ವ್ಯಕ್ತಪಡಿಸಿದರು.

ಹಳ್ಳಿಮೂಲೆಗಳಿಂದ ಶಾಲೆಗೆ ಬರುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚುತ್ತಿದೆಯಾ ದರೂ ಅವರ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕೂಡ ಕಾಡುತ್ತದೆ. ಕತ್ತಲ, ನಿರ್ಜನದ ಒಂಟಿ ದಾರಿ ಇಂದಿಗೂ ಬದಲಾಗದೆ ಮಹಿಳೆಯ ಸತತ ಭಯದ ದಾರಿಗಳೇ ಆಗಿವೆ. ಕಾನೂನು ಗಳು ಎಷ್ಟೆ ಸುಧಾರಿಸಿದರೂ, ಮಹಿಳಾ ಪರವಾಗಿದ್ದರೂ ಅವು ತೋರಿಕೆಗೆ ಮಾತ್ರ. ಒಟ್ಟಿನಲ್ಲಿ ಲೋಕದಲ್ಲಿ ಹೆಣ್ಣು ಸೂಕ್ಷ್ಮದ ಗಂಡುಗಳ ಸಂಖ್ಯೆ ಹೆಚ್ಚಾಗಲಿ ಎಂಬುದು ನಮ್ಮ ಹಂಬಲ ಎಂದು ಅವರು ಅಭಿಪ್ರಾಯ ಪಟ್ಟರು.

ಅಸಹನೆಯ ಬೆಂಕಿ ಆರಿಸಲಾಗದೆ ನಾವು ಸೋಲುತ್ತಿದ್ದೇವೆ. ಈ ಉರಿಗಾವಿ ಯಲ್ಲಿ ದೇಶವೇ ಬೇಯುವುದನ್ನು ನೋಡುವಾಗ ಲೇಖಕರು ವೌನ ಇರುವುದು ಹೇಗೆ? ದೇಶದಲ್ಲಿ ಇಂದು ವೌನವೂ, ಮಾತೂ ಸೋಲುತ್ತಿದೆ. ಈ ಎಲ್ಲದರ ಮಧ್ಯೆಯೇ ಧೃತಿಗೆಡದೆ ಬರಹಗಾರರು, ಕಲಾವಿದರು ತಮ್ಮ ಆತ್ಮಸಾಕ್ಷಿಗೆ ಸರಿ ಯಾಗಿ ಕೃತಿಗಳನ್ನು ರಚಿಸುತ್ತಲೇ ಇರುತ್ತಾರೆ. ಅವರು ಅರ್ಥ ಕಳೆದು ಕೊಂಡ ಮಾತು ಮೌನವನ್ನು ಜೀವಂತಗೊಳಿಸಬಲ್ಲರು. ಗಂಭೀರ ಲೇಖಕರು ತಮ್ಮ ಆಳದ ಸತ್ಯವನ್ನು ಹೇಳಲು ಯಾವತ್ತೂ ಹಿಂಜರಿಯುವರಲ್ಲ ಎಂದು ಅವರು ತಿಳಿಸಿದರು.

‘ಅವಸಾನದ ದಾರಿಯಲ್ಲಿ ಪ್ರಾದೇಶಿಕ ಭಾಷೆಗಳು’

ನಾವು ನಮ್ಮ ಭಾಷೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಕನ್ನಡ ಮಾತ್ರವಲ್ಲ, ದೇಶದ ಪ್ರಾದೇಶಿಕ ಭಾಷೆಗಳೆಲ್ಲವೂ ಅವಸಾನದ ದಾರಿಯಲ್ಲಿವೆ. ನಾವು ಎಚ್ಚೆತ್ತು ಭಾಷೆಯ ಮೂಲಕ ನಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಾದ ತುರ್ತು ಎಂದಿಗಿಂತ ಇಂದು ತೀವ್ರವಾಗಿದೆ ಎಂದು ವೈದೇಹಿ ಹೇಳಿದರು.

ಇಂದಿನ ಶಿಕ್ಷಣದ ಮೂಲ ತಳಹದಿಯಾಗಿರುವ ಕೆ.ಜಿ. ತರಗತಿಗಳು ಕನ್ನಡ ದಲ್ಲಿಯೇ ನಡೆಯಬೇಕು. ಸರಕಾರ ಕನ್ನಡ ಶಾಲೆ ಗಳನ್ನು ಮೇಲ್ದರ್ಜೆಗೇರಿಸ ಬೇಕು. ಕನ್ನಡ ಶಾಲೆಗಳು ಆಧುನಿಕವಾಗಿ ಸಜ್ಜಾಗಬೇಕು. ಮಾಧ್ಯಮಿಕದವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಕಡ್ಡಾಯ ಮಾಡಬೇಕು. ಪ್ರೌಢಶಾಲೆಗೆ ಸೇರುವ ಮಗು ತನ್ನ ಕಲಿಕಾ ಮಾಧ್ಯಮವನ್ನು ತಾನೇ ಆಯ್ದುಕೊಳ್ಳುವ ಅವಕಾಶ ನೀಡಬೇಕು. ಇಂಗ್ಲಿಷ್ ಮಾಧ್ಯಮದ ಬದಲು ಭಾಷೆಯಾಗಿ ಆರಂಭದಿಂದಲೂ ಪ್ರಾಥಮಿಕದ ಪಠ್ಯದಲ್ಲಿ ರಬೇಕು. ಕನ್ನಡ ಮಾಧ್ಯಮದ ಮಕ್ಕಳಿಗೆ ಸರಕಾರವು ಉದ್ಯೋಗಾವಕಾಶದಲ್ಲಿ ಯೋಗ್ಯತೆಗನುಸಾರವಾಗಿ ಪ್ರಾಶಸ್ತ್ಯ ನೀಡಬೇಕು ಎಂದು ಅವರು ಒತ್ತಾಯಿಸಿದರು.

‘ಉಡುಪಿ ಜಿಲ್ಲೆ ಜಾತಿಮತ ಧರ್ಮಗಳ ಬಹುರೂಪಿ ಬಹುಧರ್ಮೀ ಬಹು ಭಾಷೆ ಬಹು ಉಪಭಾಷೆಗಳ ಕೂಡಲಸಂಗಮ. ಇಂಥ ಪ್ರದೇಶಗಳಲ್ಲಿ ಸ್ವಾಭಾ ವಿಕವಾಗಿ ಹಿಂಸೆಗೆ ಆಸ್ಪದವಿರುವುದಿಲ್ಲ. ಅಧರ್ಮಕ್ಕೆ ಜಾಗವಿರುವುದಿಲ್ಲ. ಈ ಮಧ್ಯೆ ಒಂದು ಸಣ್ಣ ಹಿಂಸೆ ನಡೆದರೂ ನಾವು ಆತಂಕಿತರಾಗುತ್ತೇವೆ. ಆದರೆ ಅದು ಹೆಚ್ಚು ಕಾಲ ನಿಲ್ಲುವುದಿಲ್ಲ. ನಮ್ಮ ಉಡುಪಿ ಜಿಲ್ಲೆ ತನ್ನ ಮುದವನ್ನೂ ಸೌಹಾರ್ದದ ಚಹರೆಗಳನ್ನೂ ಎಂದಿಗೂ ತೊರೆಯಲಾದರು ಎಂಬ ದೃಢವಾದ ನಂಬಿಕೆ ನನ್ನದು’

-ವೈದೇಹಿ, ಸಮ್ಮೇಳನಾಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News