ದಿಲ್ಲಿ ಹಿಂಸಾಚಾರದ ಕುರಿತು ಕಳವಳ ವ್ಯಕ್ತಪಡಿಸಿದ ಮಮತಾ, ಯೆಚೂರಿ
ಹೊಸದಿಲ್ಲಿ, ಜ.26: ಕೇಂದ್ರದ ಕೃಷಿ ಕಾಯ್ದೆಯ ವಿರುದ್ಧ ರೈತರು ಹೊಸದಿಲ್ಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಮಂಗಳವಾರ ಹಿಂಸಾತ್ಮಕ ತಿರುವನ್ನು ಪಡೆದಿರುವುದನ್ನು ಪ್ರತಿಪಕ್ಷ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಕಳೆದ 65 ದಿನಗಳಿಂದ ದಿಲ್ಲಿಯ ಗಡಿಗಳಲ್ಲಿ ಬೀಡುಬಿಟ್ಟಿರುವ ರೈತರು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೇಂದ್ರ ಸರಕಾರವು ಕಡೆಗಣಿಸಿರುವುದೇ ಹಿಂಸಾಚಾರ ಭುಗಿಲೇಳಲು ಕಾರಣವಾಯಿತೆಂದು ಅವು ಹೇಳಿವೆ.
ದಿಲ್ಲಿಯಲ್ಲಿ ಇಂದು ನಡೆದಿರುವ ಕಳವಳಕಾರಿ ಹಾಗೂ ಆಘಾತಕಾರಿ ಬೆಳವಣಿಗೆಗಳಿಂದ ತಾನು ತೀವ್ರವಾಗಿ ವಿಚಲಿತಳಾಗಿರುವುದಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಈ ಪರಿಸ್ಥಿತಿ ಗೆ ಕೇಂದ್ರದ ಅಸಂವೇದನಕಾರಿ ವರ್ತನೆ ಹಾಗೂ ನಮ್ಮ ರೈತ ಸಹೋದರರು, ಸಹೋದರಿಯರ ಬಗ್ಗೆ ನಿರ್ಲಕ್ಷ್ಯದ ಮನೋಭಾವನೆ ಹೊಂದಿರುವುದನ್ನು ದೂರಬೇಕಾಗಿದೆ ಎಂದು ಅವರು ಟ್ವೀಟಿಸಿದ್ದಾರೆ. ದಿಲ್ಲಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಅವರು, ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ತಕ್ಷಣವೇ ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಮೋದಿ ಸರಕಾರವು ಪರಿಸ್ಥಿತಿಯನ್ನು ಈ ಮಟ್ಟಕ್ಕೆ ತಂದಿದೆ. 60ಕ್ಕೂ ಅಧಿಕ ದಿನಗಳಿಂದ ರೈತರು ಕಡುಚಳಿಯಲ್ಲಿ ಪ್ರತಿಭಟನೆ ನಡೆಸುತ್ತಾ ಇದ್ದಾರೆ. ಆದರೂ ಅವರನ್ನು ದಿಲ್ಲಿಯೊಳಗೆ ಬರಲು ಬಿಡಲಿಲ್ಲ ಮತ್ತು ಪ್ರತಿಭಟನೆಯ ಅವಧಿಯಲ್ಲಿ 100ಕ್ಕೂ ಅಧಿಕ ರೈತರು ಮೃತಪಟ್ಟಿದ್ದಾರೆ ಎಂದಿದ್ದಾರೆ.
ಬಿಜೆಪಿ ಸಚಿವರು ಪ್ರತಿಭಟನನಿರತ ರೈತರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಅವರನ್ನು ಖಳರೆಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ಯಚೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.