ಭಾರತದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಟಿಕ್‍ಟಾಕ್ ಮಾತೃ ಸಂಸ್ಥೆ ಬೈಟ್‍ಡ್ಯಾನ್ಸ್

Update: 2021-01-27 10:22 GMT

ಹೊಸದಿಲ್ಲಿ: ಚೀನೀ ಆ್ಯಪ್ ಟಿಕ್ ಟಾಕ್‍ಗೆ ಭಾರತ ಸರಕಾರ ಖಾಯಂ ನಿಷೇಧ ಹೇರಿದ ಬೆನ್ನಲ್ಲೇ ಟಿಕ್ ಟಾಕ್ ಮಾತೃ ಸಂಸ್ಥೆ ಬೈಟ್‍ಡ್ಯಾನ್ಸ್ ಭಾರತದಲ್ಲಿನ ತನ್ನ ಕಚೇರಿಯ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿದೆ. ಕೇವಲ ಕೆಲ ಪ್ರಮುಖ ಹುದ್ದೆಗಳನ್ನು ಮಾತ್ರ ಸಂಸ್ಥೆ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಟಿಕ್ ಟಾಕ್ ಮೇಲೆ ಸರಕಾರ ನಿಷೇಧ ಹೇರಿದ ನಂತರದ ಬೆಳವಣಿಗೆಯಲ್ಲಿ ಭಾರತದಲ್ಲಿನ ಕಾನೂನುಗಳಿಗೆ ಸರ್ವರೀತಿಯಿಂದಲೂ ಬದ್ಧವಾಗಲು ಶ್ರಮಿಸುವುದಾಗಿ ಬೈಟ್‍ಡ್ಯಾನ್ಸ್ ಹೇಳಿತ್ತು. ಆದರೆ ಟಿಕ್ ಟಾಕ್ ನಿಷೇಧ ಮುಂದುವರಿಯಲಿದೆ ಎಂದು ಸರಕಾರ ಹೇಳಿರುವುದು ಕಂಪೆನಿಗೆ  ಆಘಾತ ತಂದಿದೆ.

"ಮುಂದೆ ಭಾರತದಲ್ಲಿ ಟಿಕ್ ಟಾಕ್ ಮರು ಆರಂಭಿಸುವ ಅವಕಾಶ ದೊರೆತು ಮಿಲಿಯಗಟ್ಟಲೆ ಬಳಕೆದಾರರು, ಕಲಾವಿದರು, ಕಥಾ ನಿರೂಪಕರು, ಶಿಕ್ಷಣ ತಜ್ಞರು ಹಾಗೂ ಇತರರನ್ನು ಬೆಂಬಲಿಸುವ ಉದ್ದೇಶ ಹೊಂದಿದ್ದೇವೆ. ಭಾರತದಲ್ಲಿನ ನಮ್ಮ 2000ಕ್ಕೂ ಅಧಿಕ ಉದ್ಯೋಗಿಗಳನ್ನು ಅರ್ಧ ವರ್ಷಕ್ಕೂ ಹೆಚ್ಚು ಸಮಯ ನಾವು ಉಳಿಸಿಕೊಂಡಿದ್ದರೂ ಇದೀಗ ನಮ್ಮ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸದೆ ಅನ್ಯಮಾರ್ಗವಿಲ್ಲ,'' ಎಂದು ಕಂಪೆನಿಯ ವಕ್ತಾರರು ಹೇಳಿದ್ದಾರೆ. 

ಕಂಪೆನಿಯು  ಭಾರತದಲ್ಲಿ ಆಫರ್ ಮಾಡುವ ಇತರ ಆ್ಯಪ್‍ಗಳತ್ತ ಗಮನ ಹರಿಸುವಂತೆ ಬೈಟ್‍ಡ್ಯಾನ್ಸ್ ತನ್ನ ಉದ್ಯೊಗಿಗಳಿಗೆ ಹೇಳಿತ್ತು. ಆದರೆ ಉದ್ಯೋಗಿಗಳು ಲಾರ್ಕ್ ಮತ್ತಿತರ ಆ್ಯಪ್‍ಗಳತ್ತ ಗಮನ ಹರಿಸುತ್ತಿದ್ದಂತೆಯೇ ಅವುಗಳಿಗೂ ಟಿಕ್‍ಟಾಕ್ ಗತಿಯೇ ಬರಬಹುದೆಂಬ ಭಯದಿಂದ ಅವುಗಳ ಬಗ್ಗೆ ಹೆಚ್ಚು ಸಾರ್ವಜನಿಕವಾಗಿ ಮಾತನಾಡದಂತೆ ಅವರಿಗೆ ಕಂಪೆನಿ ಸೂಚಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News