‘ತಾಂಡವ್’ ಧಾರಾವಾಹಿ ವಿವಾದ: ನಟ, ನಿರ್ಮಾಪಕರಿಗೆ ಬಂಧನದ ವಿರುದ್ಧ ರಕ್ಷಣೆಗೆ ಸುಪ್ರೀಂ ಕೋರ್ಟ್ ನಕಾರ

Update: 2021-01-27 14:51 GMT

ಹೊಸದಿಲ್ಲಿ, ಜ.27: ಅಮೆಝಾನ್ ಪ್ರೈಮ್‌ನ ವೆಬ್ ಧಾರಾವಾಹಿ ‘ತಾಂಡವ್ ’ನ ನಿರ್ಮಾಪಕರು ಮತ್ತು ನಟರಿಗೆ ಬಂಧನದ ವಿರುದ್ಧ ರಕ್ಷಣೆ ನೀಡಲು ಸರ್ವೋಚ್ಚ ನ್ಯಾಯಾಲಯವು ಬುಧವಾರ ನಿರಾಕರಿಸಿದೆ. ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪದಲ್ಲಿ ‘ತಾಂಡವ್’ ಬಳಗದ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿವೆ. ಆದರೆ ವಿವಿಧ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಏಕೀಕರಿಸುವಂತೆ ಅರ್ಜಿದಾರರ ಕೋರಿಕೆಯ ಮೇರೆಗೆ ನ್ಯಾ.ಅಶೋಕ ಭೂಷಣ ನೇತೃತ್ವದ ಪೀಠವು ನೋಟಿಸ್‌ನ್ನು ಹೊರಡಿಸಿತು. ಅರ್ಜಿದಾರರು ಉಚ್ಚ ನ್ಯಾಯಾಲಯಗಳನ್ನು ಸಂಪರ್ಕಿಸಲು ಸ್ವತಂತ್ರರಿದ್ದಾರೆ ಎಂದೂ ಅದು ಹೇಳಿತು.

ಧಾರಾವಾಹಿಯ ನಿರ್ದೇಶಕ ಅಲಿ ಅಬ್ಬಾಸ್ ಝಾಫರ್, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ,ಲೇಖಕ ಗೌರವ ಸೋಲಂಕಿ, ಅಮೆಝಾನ್ ಪ್ರೈಮ್‌ನ ಹಿರಿಯ ಅಧಿಕಾರಿ ಅಪರ್ಣಾ ಪುರೋಹಿತ್ ಮತ್ತು ನಟ ಮುಹಮ್ಮದ್ ಜೀಷನ್ ಅವರು ಸಂಭಾವ್ಯ ಬಂಧನದ ವಿರುದ್ಧ ರಕ್ಷಣೆ ಕೋರಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಧಾರಾವಾಹಿಯಲ್ಲಿನ ಆಕ್ಷೇಪಾರ್ಹ ಭಾಗಗಳನ್ನು ತೆಗೆಯಲು ಒಪ್ಪಿಕೊಂಡ ಬಳಿವೂ ತನ್ನ ಕಕ್ಷಿದಾರರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ ಎಂದು ಅರ್ಜಿದಾರರ ಪರ ವಕೀಲ ಫಲಿ ನರಿಮನ್ ತಿಳಿಸಿದ ಬಳಿಕ ನ್ಯಾಯಾಲಯವು,ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಉಚ್ಚ ನ್ಯಾಯಾಲಯಗಳನ್ನೇಕೆ ಕೋರಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ಇನ್ನೋರ್ವ ವಕೀಲ ಮುಕುಲ್ ರೋಹಟ್ಗಿ ಅವರು, ‘ಈ ದಿನಗಳಲ್ಲಿ ಯಾವುದೇ ವಿಷಯಕ್ಕೂ ಜನರನ್ನು ಅಪರಾಧಿಗಳನ್ನಾಗಿ ಪರಿಗಣಿಸಲಾಗುತ್ತಿದೆ. ದಯವಿಟ್ಟು ಇಂತಹ ಬಲವಂತದ ಕ್ರಮಗಳನ್ನು ನಿಲ್ಲಿಸಿ. ಯಾವುದೇ ಪ್ರತಿಭಟನೆಯಿಲ್ಲದೆ ಆಕ್ಷೇಪಾರ್ಹ ಭಾಗಗಳನ್ನು ನಾವು ತೆಗೆದಿದ್ದೇವೆ. ಅದೊಂದು ರಾಜಕೀಯ ವಿಡಂಬನೆಯಾಗಿದೆ ’ಎಂದರು.

ಕನಿಷ್ಠ ಎಲ್ಲ ಎಫ್‌ಐಆರ್‌ಗಳನ್ನು ಒಂದುಗೂಡಿಸಿ. ಅರ್ಜಿದಾರರು ಮುಂಬೈ ನಿವಾಸಿಗಳಾಗಿದ್ದಾರೆ ಮತ್ತು ನ್ಯಾಯಾಲಯಗಳಿಗೆ ಹಾಜರಾಗಲು ವಿವಿಧ ರಾಜ್ಯಗಳಿಗೆ ಹೋಗಲು ಸಾಧ್ಯವಿಲ್ಲ ಎಂದು ರೋಹಟ್ಗಿ ಆಗ್ರಹಿಸಿದರು.

‘ತಾಂಡವ್’ ಧಾರಾವಾಹಿಯ ವಿರುದ್ಧ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ. ದಿಲ್ಲಿ,ಚಂಡಿಗಡ ಮತ್ತು ಮಹಾರಾಷ್ಟ್ರಗಳಲ್ಲಿ ಕನಿಷ್ಠ ಮೂರು ದೂರುಗಳು ಬಾಕಿಯಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News