ಇಐಎ ಕರಡನ್ನು 22 ಭಾಷೆಗಳಿಗೆ ಅನುವಾದಿಸಲು ಹಿಂದೇಟು: ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ದಿಲ್ಲಿ ಹೈಕೋರ್ಟ್

Update: 2021-01-27 14:52 GMT

ಹೊಸದಿಲ್ಲಿ, ಜ.27: ಕೇಂದ್ರದ ವಿರುದ್ಧ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ ದಿಲ್ಲಿ ಉಚ್ಚ ನ್ಯಾಯಾಲಯವು,ಕರಡು ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) 2020 ಅನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಮತ್ತು ತಮ್ಮ ಪ್ರತಿಕ್ರಿಯೆಗಳನ್ನು ತಿಳಿಸಲು ಸಾಧ್ಯವಾಗುವಂತೆ ಅದನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿಯ ಎಲ್ಲ 22 ಭಾಷೆಗಳಿಗೆ ಅನುವಾದಿಸುವಂತೆ ತನ್ನ ಆದೇಶವನ್ನು ಸರಕಾರವೇಕೆ ಬಲವಾಗಿ ವಿರೋಧಿಸುತ್ತಿದೆ ಎನ್ನುವುದು ತನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿತು.

ಕರಡು ಇಐಎಗೆ ಸ್ಥಳೀಯ ಭಾಷೆಗಳಲ್ಲಿ ಎತ್ತಲಾಗುವ ಆಕ್ಷೇಪಗಳನ್ನು ಸರಕಾರವು ತಿಳಿದುಕೊಳ್ಳುವ ಅಗತ್ಯವಿದೆ. ಹೀಗಾಗಿ ಇಐಎ ಅನ್ನು ಎಲ್ಲ 22 ಭಾಷೆಗಳಿಗೆ ಅನುವಾದಿಸುವುದರಿಂದ ಏನು ಹಾನಿಯಿದೆ ಎಂದು ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ನೇತೃತ್ವದ ಪೀಠವು ಪ್ರಶ್ನಿಸಿತು.

ಸರಕಾರವು ಈಗಾಗಲೇ ಕರಡು ಇಐಎಗೆ 20 ಲಕ್ಷಕ್ಕೂ ಅಧಿಕ ಉತ್ತರಗಳನ್ನು ಸ್ವೀಕರಿಸಿದೆ, ಹೀಗಾಗಿ ಅದನ್ನು ಇನ್ನಷ್ಟು ಹೆಚ್ಚು ಭಾಷೆಗಳಿಗೆ ಅನುವಾದಿಸುವ ಅಗತ್ಯವಿಲ್ಲ ಎಂದು ತಿಳಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು,ಅಧಿಸೂಚನೆಯು ಎಲ್ಲ ಭಾಷೆಗಳಿಗೆ ಅನುವಾದಗೊಳ್ಳಬೇಕು ಎಂದು ಸಂವಿಧಾನದಲ್ಲಿಯೂ ಹೇಳಲಾಗಿಲ್ಲ ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ಅಂತಿಮ ಅಧಿಸೂಚನೆ ಎಲ್ಲ ಭಾಷೆಗಳಿಗೆ ಅನುವಾದಗೊಳ್ಳದಿರಬಹುದು,ಆದರೆ ಅದು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕಾಗಿ ಇರುವ ಕರಡು ಪ್ರತಿಯನ್ನು ಉಲ್ಲೇಖಿಸಿಲ್ಲ ಎಂದು ಹೇಳಿತು.

ಕರಡು ನೀತಿಯನ್ನು ಎಲ್ಲ ಭಾಷೆಗಳಿಗೆ ಅನುವಾದಿಸುವುದು ಆಡಳಿತಾತ್ಮಕ ಸಮಸ್ಯೆಗಳನ್ನುಂಟು ಮಾಡುತ್ತದೆ ಎಂಬ ಶರ್ಮಾರ ಸಮಜಾಯಿಷಿಯನ್ನು ತಿರಸ್ಕರಿಸಿದ ನ್ಯಾಯಾಲಯವು,ಈ ಆಧುನಿಕ ಯುಗದಲ್ಲಿ ಅದು ಅಸಾಧ್ಯ ಕೆಲಸವೇನಲ್ಲ ಎಂದು ಹೇಳಿತು. ಅನುವಾದಕ್ಕೆ ಏನು ತೊಂದರೆಗಳಿವೆ ಎನ್ನುವುದನ್ನು ಮುಂದಿನ ವಿಚಾರಣಾ ದಿನಾಂಕವಾದ ಫೆ.25ರೊಳಗೆ ತಿಳಿಸುವಂತೆ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶ ನೀಡಿತು.

ಕರಡು ಇಐಎ ಯೋಜನೆಗಳ ಘಟನೋತ್ತರ ಮಂಜೂರಾತಿಗೆ ಅವಕಾಶವನ್ನು ಒದಗಿಸುತ್ತದೆ ಮತ್ತು ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕ ಸಮಾಲೋಚನೆಯ ಅಗತ್ಯವನ್ನು ನಿವಾರಿಸುತ್ತದೆ ಎಂದು ಆಕ್ಷೇಪಿಸಿ ಪರಿಸರ ಹೋರಾಟಗಾರ ವಿಕ್ರಾಂತ್ ತೋಂಗದ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಅದನ್ನು ಎಲ್ಲ 22 ಭಾಷೆಗಳಿಗೆ ಅನುವಾದಿಸುವಂತೆ ಕಳೆದ ವರ್ಷದ ಜೂನ್ 30ರಂದು ಆದೇಶಿಸಿತ್ತು. ಆದೇಶದ ಪುನರ್‌ಪರಿಶೀಲನೆಯನ್ನು ಕೋರಿ ಕೇಂದ್ರವು ಕಳೆದ ಸೆಪ್ಟಂಬರ್‌ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News