ನಟ ದೀಪ್ ಸಿಧುವನ್ನು ತರಾಟೆಗೆ ತೆಗೆದುಕೊಂಡ ರೈತರ ಒಕ್ಕೂಟ

Update: 2021-01-27 17:06 GMT

ಹೊಸದಿಲ್ಲಿ, ಜ. 27: ಕೆಂಪು ಕೋಟೆಗೆ ರ‍್ಯಾಲಿ ನಡೆಸುವಂತೆ ಹಾಗೂ ಅಲ್ಲಿ ಸಿಕ್ಖರ ಧಾರ್ಮಿಕ ಧ್ವಜ ‘ನಿಶಾನ್ ಸಾಹಿಬ್’ ಆರೋಹಿಸುವಂತೆ ಯುವಕರನ್ನು ಪ್ರಚೋದಿಸಿರುವುದಕ್ಕೆ ರೈತರ ಒಕ್ಕೂಟಗಳು ಪಂಜಾಬಿ ನಟ ಹಾಗೂ ಗಾಯಕ ದೀಪ್ ಸಿಧು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚಳವಳಿಯನ್ನು ಮುಂದೆ ಕೊಂಡೊಯ್ಯುವಂತೆ ದೀಪ್ ಸಿಧು ಯುವಕರಿಗೆ ಪ್ರಚೋದನೆ ನೀಡಿದರು ಹಾಗೂ ಚಳವಳಿಗೆ ಬೇರೆ ಆಯಾಮ ನೀಡಿದರು. ಅವರು ನಮ್ಮ ಚಳವಳಿಗೆ ಹಾನಿ ಉಂಟು ಮಾಡಿದರು. ಅವರು ಯಾರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನಮಗೆ ಗೊತ್ತಿಲ್ಲ ಎಂದು ಬಿಕೆಐಜೆಯ ಜೋಗಿಂದರ್ ಸಿಂಗ್ ಉಗ್ರಹಾನ್ ತಿಳಿಸಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಮಂಗಳವಾರ ಹರಿದಾಡಿದ ವೀಡಿಯೊವೊಂದರಲ್ಲಿ ಸಿಧು ಅವರು ಕೆಂಪು ಕೋಟೆಯಲ್ಲಿ ಖಾಲ್ಸಾ ಧ್ವಜ ಹಿಡಿದುಕೊಂಡು ಮಜ್ದೂರ್ ಏಕ್ತಾ ಹಾಗೂ ಹಾಗೂ ಖಾಲ್ಸಾ ಪರ ಘೋಷಣೆ ಕೂಗುತ್ತಿರುವುದು ಕಂಡು ಬಂದಿದೆ.

ಕೆಂಪು ಕೋಟೆಯ ಹಿಂಸಾಚಾರದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ರೈತರ ಒಕ್ಕೂಟಗಳು ಸಿಧು ಅವರಿಂದ ಅಂತರ ಕಾಯ್ದುಕೊಂಡಿವೆ. ಅಲ್ಲದೆ, ಅವರು ಖಲಿಸ್ತಾನ ಚಳವಳಿಗೆ ಬೆಂಬಲಿಸುತ್ತಾರೆ ಎಂದು ಆರೋಪಿಸಿದೆ.

ಅನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಗುರುದಾಸ್‌ಪುರದ ಸಂಸದ, ನಟ ಸನ್ನಿ ಡಿಯೋಲ್ ಅವರೊಂದಿಗಿದ್ದ ಸಿಧು ಅವರ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭ ಸನ್ನಿ ಡಿಯೋಲ್ ಪರವಾಗಿ ತಾನು ಪ್ರಚಾರ ನಡೆಸಿದ್ದೆ ಎಂದು ಸಿಧು ಹೇಳಿದ್ದಾರೆ. ಆದರೆ, ಸಿಧು ಡಿಸೆಂಬರ್‌ನಲ್ಲಿ ರೈತ ಚಳವಳಿಗೆ ಸೇರಿದ ಬಳಿಕ ತಾನು ಅವರಿಂದ ಅಂತರ ಕಾಯ್ದುಕೊಂಡೆ ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News