ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಕೃತ್ಯ ಸಮರ್ಥಿಸಿಕೊಂಡ ದೀಪ್ ಸಿಧು

Update: 2021-01-27 17:27 GMT

ಹೊಸದಿಲ್ಲಿ, ಜ.27: ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿಯ ಸಂದರ್ಭದ ಹಿಂಸಾಚಾರದಲ್ಲಿ ಪಂಜಾಬಿ ನಟ ದೀಪ್ ಸಿಧು ಪಾತ್ರದ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ದೀಪ್ ಸಿಧು ಈ ಹಿಂದೆ ಬಿಜೆಪಿ ಸಂಸದ, ನಟ ಸನ್ನಿ ದಿಯೋಲ್‌ರ ನಿಕಟವರ್ತಿಯಾಗಿದ್ದ ಎಂದು ಮೂಲಗಳು ಹೇಳಿವೆ.

ಕೆಂಪು ಕೋಟೆಯಲ್ಲಿ ಸಿಖ್ ಧರ್ಮದ ಧ್ವಜ ‘ನಿಶಾನ್ ಸಾಹಿಬ್’ ಅನ್ನು ಹಾರಿಸಿದ್ದು ದೀಪ್ ಸಿಧು ಎಂದು ರೈತರು ಆರೋಪಿಸಿದ್ದಾರೆ. ದೊಣ್ಣೆ ಹಿಡಿದಿದ್ದ ಪ್ರತಿಭಟನಾಕಾರರು 400 ವರ್ಷ ಪುರಾತನ ಕೆಂಪುಕೋಟೆಯ ಮೇಲೇರಿರುವ ವೀಡಿಯೊ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಭಟನಾಕಾರರ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಮಧ್ಯೆ ಮಂಗಳವಾರ ಸಂಜೆ ಫೇಸ್‌ಬುಕ್‌ನಲ್ಲಿ ಕೃತ್ಯವನ್ನು ಸಮರ್ಥಿಸಿಕೊಂಡಿರುವ ದೀಪ್ ಸಿಧು, ಪ್ರತಿಭಟನಾಕಾರರು ರಾಷ್ಟ್ರಧ್ವಜವನ್ನು ಕೆಳಗಿಳಿಸಿಲ್ಲ, ಆದರೆ ಕೃಷಿ ಕಾಯ್ದೆಯ ವಿರುದ್ಧ ಸಾಂಕೇತಿಕ ಪ್ರತಿಭಟನೆಯಾಗಿ ‘ನಿಶಾನ್ ಸಾಹಿಬ್’ ಅನ್ನು ಮೇಲೇರಿಸಿ ರೈತರ ಪರವಾಗಿ ಘೋಷಣೆ ಕೂಗಿದ್ದಾರೆ. ತ್ರಿಕೋನಾಕೃತಿಯ ನಿಶಾನ್ ಸಾಹಿಬ್ ಧ್ವಜ ದೇಶದ ವೈಶಿಷ್ಟವಾಗಿರುವ ವೈವಿಧ್ಯತೆಯಲ್ಲಿ ಏಕತೆಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.

 ಸಾಮೂಹಿಕ ಪ್ರತಿಭಟನೆಯ ಸಂದರ್ಭ ಇಂತಹ ಆಕ್ರೋಶದ ಕೃತ್ಯ ಸಹಜವಾಗಿದೆ. ಜನರ ನೈಜ ಹಕ್ಕುಗಳನ್ನು ಕಡೆಗಣಿಸಿದಾಗ, ಜನರ ಆಕ್ರೋಶ ಭುಗಿಲೇಳುತ್ತದೆ. ಪ್ರತಿಭಟನಾಕಾರರು ಯಾರಿಗೂ ತೊಂದರೆ ನೀಡಲು ಅಥವಾ ಸಾರ್ವಜನಿಕ ಆಸ್ತಿಗೆ ಹಾನಿಯೆಸಗಲು ದಿಲ್ಲಿಗೆ ತೆರಳಿಲ್ಲ. ನಾವು ಯಾವುದನ್ನೂ ನಾಶಗೊಳಿಸದೆ, ಸಾರ್ವಜನಿಕ ಆಸ್ತಿಗೆ ಹಾನಿಯೆಸಗದೆ ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಪ್ರಜಾಪ್ರಭುತ್ವ ಹಕ್ಕನ್ನು ಶಾಂತರೀತಿಯಲ್ಲಿ ಪ್ರಯೋಗಿಸಿದ್ದೇವೆ. ಓರ್ವ ವ್ಯಕ್ತಿ ಇಷ್ಟೊಂದು ಜನರನ್ನು ಒಗ್ಗೂಡಿಸುತ್ತಾನೆ ಎಂದು ಭಾವಿಸುವುದು ಸರಿಯಲ್ಲ ಎಂದು ದೀಪ್ ಸಿಧು ಹೇಳಿದ್ದಾರೆ.

ದೀಪ್ ಸಿಧು ಸರಕಾರದ ಏಜೆಂಟ್ ಆಗಿದ್ದು ಶಾಂತಿಯುತ ಪ್ರತಿಭಟನೆಯ ಹಳಿ ತಪ್ಪಿಸಲು ಸರಕಾರದ ಪರವಾಗಿ ಕೆಲಸ ಮಾಡಿದ್ದಾನೆ ಎಂದು ಹಲವು ರೈತ ಮುಖಂಡರು ಆರೋಪಿಸಿದ್ದಾರೆ.

ತಮ್ಮ ಶಾಂತಿಯುತ ಪ್ರತಿಭಟನೆಯಲ್ಲಿ ಕೆಲವು ಸಮಾಜ ವಿರೋಧಿ ಶಕ್ತಿಗಳು ಸೇರಿಕೊಂಡು ಗೊಂದಲ ಸೃಷ್ಟಿಸಿವೆ ಎಂದು ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ 41 ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

 ದೀಪ್ ಸಿಧು ಸಿಖ್ ಅಲ್ಲ. ಆತ ಬಿಜೆಪಿ ಕಾರ್ಯಕರ್ತ. ಇದು ರೈತರ ಚಳುವಳಿಯಾಗಿದೆ ಮತ್ತು ರೈತರ ಚಳುವಳಿಯಾಗಿಯೇ ಇರುತ್ತದೆ. ಬ್ಯಾರಿಕೇಡ್ ಮುರಿದವರು ಚಳವಳಿಯ ಭಾಗವಾಗಿರಲು ಸಾಧ್ಯವಿಲ್ಲ ಎಂದು ಭಾರತ ಕಿಸಾನ್ ಯೂನಿಯನ್‌ನ ಮುಖಂಡ ರಾಜೇಶ್ ಟಿಕಾಯತ್ ಹೇಳಿದ್ದಾರೆ.

 ಕೆಂಪುಕೋಟೆಯಲ್ಲಿ ನಡೆದ ಎಲ್ಲಾ ಘಟನೆಗಳಿಗೂ ದೀಪ್ ಸಿಧುವೇ ಕಾರಣ. ಆತ ಆಡಳಿತ ಪಕ್ಷಕ್ಕೆ ನಿಕಟವಾಗಿದ್ದಾನೆ. ಆತನನ್ನು ಕೆಂಪುಕೋಟೆಯಲ್ಲಿ ಪೊಲೀಸರು ಯಾಕೆ ತಡೆಯಲಿಲ್ಲ? ಎಂದು ಕಿಸಾನ್ ಮಝ್ದೂರ್ ಸಂಘರ್ಷ ಸಮಿತಿಯ ಸತ್ನಾಮ್ ಸಿಂಗ್ ಪನ್ನು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News