ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರದಲ್ಲಿ ಪೊಲೀಸರ ಮೇಲೆ ಖಡ್ಗದಿಂದ ದಾಳಿ: ಎಫ್‌ಐಆರ್‌ನಲ್ಲಿ ಉಲ್ಲೇಖ

Update: 2021-01-27 17:42 GMT

ಹೊಸದಿಲ್ಲಿ, ಜ.27: ದಿಲ್ಲಿಯಲ್ಲಿ ಮಂಗಳವಾರ ಆಯೋಜಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಖಡ್ಗದಿಂದ ದಾಳಿ ನಡೆಸಲಾಗಿದೆ ಎಂದು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

   ಖಡ್ಗ ಮತ್ತು ಕೃಪಾಣ (ಕಿರುಗತ್ತಿ) ಹೊಂದಿದ್ದ ನಿಹಾಂಗ್‌ರ ನೇತೃತ್ವದಲ್ಲಿ ಸಾಗಿ ಬಂದ ರೈತರು ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಿ ಪೊಲೀಸರತ್ತ ನುಗ್ಗಿಬಂದರು. ಐಟಿಒದಲ್ಲಿರುವ ಪೊಲೀಸ್ ಕೇಂದ್ರ ಕಚೇರಿಯ ಹೊರಭಾಗದಲ್ಲಿ ಪೊಲೀಸ್ ಸಿಬ್ಬಂದಿ ಸಂದೀಪ್ ಮೇಲೆ ಖಡ್ಗದಿಂದ ದಾಳಿ ನಡೆಸಲಾಗಿದೆ. ಪ್ರತಿಭಟನಾಕಾರದೊಂದಿಗಿನ ಸಂಷರ್ಘದಲ್ಲಿ 300ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

2021ರ ಜನವರಿ 26ರಂದು ಬೆಳಿಗ್ಗೆ 8:30ರ ಸಂದರ್ಭ ಸುಮಾರು 6,000ದಿಂದ 7,000 ಟ್ರ್ಯಾಕ್ಟರ್‌ಗಳು ಸಿಂಘು ಗಡಿಭಾಗದಲ್ಲಿ ಜಮಾವಣೆಗೊಂಡಿದ್ದವು. ಸಂಜಯ್ ಗಾಂಧಿ ಟ್ರಾನ್ಸ್‌ಪೋರ್ಟ್ ನಗರದವರೆಗೆ ಸಾಗಿ ಅಲ್ಲಿಂದ ಬಲಕ್ಕೆ ತಿರುಗಲು ರೈತರಿಗೆ ಸೂಚಿಸಲಾಗಿತ್ತು. ಆದರೆ ಒಪ್ಪಿಕೊಂಡ ರಸ್ತೆಯಲ್ಲಿ ತೆರಳುವ ಬದಲು ಅವರು ಕೇಂದ್ರ ದಿಲ್ಲಿಯತ್ತ ಮುಂದುವರಿಯುವುದಾಗಿ ಪಟ್ಟುಹಿಡಿದರು. ಪೊಲೀಸರು ಮನ ಒಲಿಸಲು ಪ್ರಯತ್ನಿಸುತ್ತಿದ್ದಂತೆಯೇ, ಕುದುರೆ ಮೇಲೆ ಇದ್ದ ನಿಹಾಂಗರ (ಖಡ್ಗ, ಕೃಪಾಣ, ಕೊಡಲಿ ಮುಂತಾದ ಆಯುಧ ಹೊಂದಿದ್ದರು) ನೇತೃತ್ವದಲ್ಲಿ ಮುಂದೊತ್ತಿ ಬಂದ ರೈತರು ಬ್ಯಾರಿಕೇಡ್ ಧ್ವಂಸಗೊಳಿಸಿ ಪೊಲೀಸರ ಮೇಲೇರಿ ಬಂದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ. ದಿಲ್ಲಿ ಪೊಲೀಸ್ ಕ್ರೈಂಬ್ರಾಂಚ್‌ನ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುವ ನಿರೀಕ್ಷೆಯಿದೆ. ಟ್ರ್ಯಾಕ್ಟರ್ ರ‍್ಯಾಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಸಂದರ್ಭ ಖಡ್ಗ ಹಿಡಿದಿರುವ ಪ್ರತಿಭಟನಾಕಾರನೊಬ್ಬ ಪೊಲೀಸರನ್ನು ಅಟ್ಟಿಸಿಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News