ಇದುವರೆಗೆ ಕೋವಿಡ್‌ ಲಸಿಕೆ ಪಡೆದ ಬಳಿಕ ಮೃತಪಟ್ಟಿರುವ 9 ಆರೋಗ್ಯ ಕಾರ್ಯಕರ್ತರು

Update: 2021-01-28 07:59 GMT

ಹೊಸದಿಲ್ಲಿ,ಜ.28: ಜನವರಿ 16ರಂದು  ಭಾರತದಲ್ಲಿ ಕೋವಿಡ್-19 ಲಸಿಕೆ ವಿತರಣಾ ಕಾರ್ಯಕ್ರಮ ಆರಂಭಗೊಂಡಿದ್ದರೆ ಕಳೆದ 12 ದಿನಗಳ ಅವಧಿಯಲ್ಲಿ ಇಲ್ಲಿಯ ತನಕ ಲಸಿಕೆ ಹಾಕಿಕೊಂಡವರ ಪೈಕಿ 9 ಮಂದಿ ಆರೋಗ್ಯ ಕಾರ್ಯಕರ್ತರು ಮೃತಪಟ್ಟಿರುವ ವಿಚಾರ ಆತಂಕಕ್ಕೆ ಕಾರಣವಾಗಿದೆ.  ಈ ಎಇಎಫ್‍ಐ ಅಥವಾ ಲಸಿಕೆ ನೀಡಿಕೆ ಬಳಿಕ ಉಂಟಾದ ಪ್ರತಿಕೂಲ ಪರಿಣಾಮಗಳ ಕುರಿತಾದ ತನಿಖೆಯ ಎಲ್ಲಾ ಮಾಹಿತಿಗಳನ್ನು ಸರಕಾರ ತಕ್ಷಣ ಬಹಿರಂಗಗೊಳಿಸುವುದು ಅಗತ್ಯವಾಗಿದೆ ಎಂದು scroll.in ವರದಿ ತಿಳಿಸಿದೆ.

ಈ ಒಂಬತ್ತು ಮಂದಿ 27ರಿಂದ 56 ವರ್ಷದವರಾಗಿದ್ದು ಆರು ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ಇಲ್ಲಿಯ ತನಕ ಮೃತಪಟ್ಟಿದ್ದಾರೆ. ಈ ಪ್ರಕರಣಗಳು ಉತ್ತರ ಪ್ರದೇಶ, ಕರ್ನಾಟಕ, ಆಂಧ್ರ ಪ್ರದೇಶ, ರಾಜಸ್ಥಾನ, ತೆಲಂಗಾಣ, ಗುರುಗ್ರಾಮ ಮತ್ತು ಒಡಿಶಾದಿಂದ ವರದಿಯಾಗಿವೆ. ಈ ಸಾವುಗಳು ಲಸಿಕೆ ಹಾಕಿಸಿಕೊಂಡ 24 ಗಂಟೆಗಳು ಹಾಗೂ ಐದು ದಿನಗಳ ನಡುವೆ ನಡೆದಿದೆ ಹಾಗೂ ಎಲ್ಲಾ ಸಾವುಗಳಿಗೆ ಕಾರ್ಡಿಯೋ ವ್ಯಾಸ್ಕುಲರ್ ಸಮಸ್ಯೆ ಅಥವಾ ʼಬ್ರೈನ್ ಸ್ಟ್ರೋಕ್ʼ  ಕಾರಣ ನೀಡಲಾಗಿದೆ. ಮೃತಪಟ್ಟ ಎಲ್ಲಾ ಒಂಬತ್ತು ಮಂದಿ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು.

1.ಪ್ರತಿಯೊಂದು ಪ್ರಕರಣದಲ್ಲಿಯೂ ಸರಕಾರ ಇದು ಲಸಿಕೆಯಿಂದುಂಟಾದ ಸಾವಲ್ಲ ಎಂದು  ಹೇಳಿದೆಯಾದರೂ ಈ ತೀರ್ಮಾನಕ್ಕೆ ಯಾರು ಬಂದಿದ್ದಾರೆ ಎಂದು ತಿಳಿಸಿಲ್ಲ ಹಾಗೂ ತನಿಖೆಯ ವಿವರಗಳನ್ನು ಬಹಿರಂಗಗೊಳಿಸಿಲ್ಲ. ಇವುಗಳನ್ನು ತಕ್ಷಣ ಬಹಿರಂಗಪಡಿಸಬೇಕಿದೆ.

2.ಎಇಎಫ್‍ಐ ತನಿಖಾ ಸಮಿತಿ ಸದಸ್ಯರ ಹೆಸರುಗಳು  ಹಾಗೂ ಅರ್ಹತೆಗಳೂ ಬಹಿರಂಗಗೊಳ್ಳಬೇಕು.

3. ಈ ಸಾವುಗಳಿಗೂ ಲಸಿಕೆಗೂ ಸಂಬಂಧವಿಲ್ಲವೆಂದು ಹೇಗೆ ನಿರ್ಧರಿಸಲಾಗಿದೆ?

4. ಕೋ-ವಿನ್ ಆ್ಯಪ್‍ನಲ್ಲಿನ ಕೆಲವೊಂದು ಲೋಪದಿಂದ ತನಿಖೆಗೂ ಸಮಸ್ಯೆಯಾಗಿದೆಯೇ?

5. ಈ ಒಂಬತ್ತು ಪ್ರಕರಣಗಳ ತನಿಖೆ ಮುಗಿಯುವ ತನಕ ಲಸಿಕೆ ನೀಡಿಕೆಯನ್ನೇಕೆ ತಡೆ ಹಿಡಿಯಲಾಗಿಲ್ಲ? ಗಂಭೀರ ಪರಿಣಾಮಗಳುಂಟಾದಾಗ ಕೊವಿಡ್ ಲಸಿಕೆಗಳ ಕ್ಲಿನಿಕಲ್ ಟ್ರಯಲ್‍ಗಳನ್ನು ಕನಿಷ್ಠ ಮೂರು ಬಾರಿ ನಿಲ್ಲಿಸಲಾಗಿತ್ತು ಹಾಗೂ  ವ್ಯತಿರಿಕ್ತ ಪರಿಣಾಮಗಳಿಗೂ ಲಸಿಕೆಗೂ ಸಂಬಂಧವಿಲ್ಲವೆಂದು ತಿಳಿದ ನಂತರ ಮುಂದುವರಿಸಲಾಗಿತ್ತು.

6. ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ದೊರೆಯಲಿದೆಯೇ?

7. ಲಸಿಕೆ ಅಭಿಯಾನದಲ್ಲಿ ಇನ್ನು ಯಾರಾದರೂ ಮೃತಪಟ್ಟಿದ್ದಾರೆಯೇ? ಲಸಿಕೆ ಪಡೆದವರಲ್ಲಿ ಉಂಟಾದ ಗಂಭೀರ ಅಡ್ಡ ಪರಿಣಾಮಗಳ ಸಂಖ್ಯೆ, ಲಸಿಕೆ ಹಾಕಿಸಿಕೊಂಡ ದಿನಾಂಕ ಇತ್ಯಾದಿ  ಮಾಹಿತಿಯನ್ನೂ ಸರಕಾರ ಬಹಿರಂಗ ಪಡಿಸಬೇಕಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News