ಕಾಮಿಡಿಯನ್ ಮುನವ್ವರ್‌ ಫಾರೂಕಿ ಜಾಮೀನು ಅರ್ಜಿ ತಿರಸ್ಕರಿಸಿದ ಮಧ್ಯ ಪ್ರದೇಶ ಹೈಕೋರ್ಟ್

Update: 2021-01-28 08:05 GMT

ಭೋಪಾಲ್,ಜ.28: ಕಾಮಿಡಿಯನ್ ಮುನವ್ವರ್ ಫಾರೂಖಿ ಹಾಗೂ ಅವರ ಒಬ್ಬ ಸಮೀಪವರ್ತಿಯ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಇಂದು ತಿರಸ್ಕರಿಸಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಹೆಸರಿನಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಹಾಗೂ ನಿಂದನೆಗೈಯ್ಯುವ  ಉದ್ದೇಶಪೂರ್ವಕ ಕೃತ್ಯವನ್ನು ಅರ್ಜಿದಾರರು ನಡೆಸಿರುವುದು ಇಲ್ಲಿಯ ತನಕ ಸಂಗ್ರಹಿಸಲಾದ  ಪುರಾವೆಯಿಂದ ತಿಳಿದು ಬಂದಿದೆ ಎಂಬ ಕಾರಣಕ್ಕೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.

ಪ್ರಮುಖವಾಗಿ ಈ ಪ್ರಕರಣದ ಸಾಕ್ಷಿಗಳಾದ ದೂರುದಾರ ಏಕಲವ್ಯ ಸಿಂಗ್ ಗೌರ್ ಹಾಗೂ ಕುನಾಲ್ ಎಂಬವರ ಹೇಳಿಕೆಯನ್ನು ಅವಲಂಬಿಸಿ ನ್ಯಾಯಾಲಯ ಜಾಮೀನು  ನಿರಾಕರಿಸಿದೆ. ಏಕಲವ್ಯ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರನಾಗಿದ್ದು ಸ್ಥಳೀಯ ಹಿಂದು ಸಂಘಟನೆಯ ನಾಯಕರೂ ಆಗಿದ್ದಾರೆ.

ದೂರುದಾರರು ಹಾಗೂ ಸಾಕ್ಷಿಗಳ ಹೇಳಿಕೆಗಳು ಹಾಗೂ ಕಾರ್ಯಕ್ರಮದ ವೀಡಿಯೋ (ಗೌರ್‍ನಿಂದ ಚಿತ್ರೀಕರಿಸಲ್ಪಟ್ಟ) ಪರಿಶೀಲಿಸಲಾಗಿದ್ದು ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಸಾಕ್ಷ್ಯಗಳು ದೊರೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಆದೇಶ ನೀಡುವ ವೇಳೆ ನ್ಯಾಯಾಲಯ ಹೇಳಿದೆ.

ಆರೋಪಿ  ಹಿಂದು ದೇವರುಗಳನ್ನು ಅವಮಾನಿಸುವ ರೀತಿಯ ಹಾಸ್ಯವನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ 18 ತಿಂಗಳಲ್ಲಿ ಮಾಡಿದ್ದಾರೆಂದು ದೂರುದಾರ  ಹೇಳಿರುವುದು ಹಾಗೂ ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪಿಸಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಆದರೆ ಬಂಧಿಸಿದ್ದ ಕೆಲವು ದಿನಗಳಲ್ಲೇ ಮುನವ್ವರ್‌ ಫಾರೂಕಿ ಹಾಸ್ಯದಲ್ಲಿ ಯಾವುದೇ ಆಕ್ಷೇಪಕಾರಿ ಅಂಶಗಳಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದರು.

ಇಂದೋರ್‍ನ ಮೊನ್ರೋ ಕೆಫೆಯಲ್ಲಿ ಹೊಸ ವರ್ಷದ ಕಾರ್ಯಕ್ರಮದ ವೇಳೆ ಮುನಾವರ್ ನಿಂದನಾತ್ಮಕ ಮಾತುಗಳನ್ನು ಆಡಿದ್ದಾರೆ ಹಾಗೂ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾರೆಂದು ದೂರಲಾಗಿತ್ತು. ಪ್ರಕರಣ ಸಂಬಂಧ ಫಾರೂಖಿ ಹಾಗೂ ಐದು ಮಂದಿ ಇತರರನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಿ ತೀರ್ಪು ನೀಡುವ ಮುಂಚೆಯೇ, "ಇಂತಹಾ ವ್ಯಕ್ತಿಗಳನ್ನು ಸುಮ್ಮನೆ ಬಿಡಬಾರದು" ಎಂದು ನ್ಯಾಯಾಧೀಶರು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News