ಜನರನ್ನು ಪ್ರಚೋದಿಸುವ ಟಿವಿ ಕಾರ್ಯಕ್ರಮ, ಸುದ್ದಿಗಳನ್ನು ನಿಯಂತ್ರಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸಲಹೆ

Update: 2021-01-28 11:01 GMT

ಹೊಸದಿಲ್ಲಿ,ಜ.28:  ಜನರನ್ನು ಹಿಂಸೆಗೆ  ಪ್ರಚೋದಿಸುವ ಟಿವಿ ಕಾರ್ಯಕ್ರಮಗಳು ಹಾಗೂ ಸುದ್ದಿಗಳನ್ನು  ನಿಯಂತ್ರಿಸಬೇಕು ಎಂದು ಸರಕಾರಕ್ಕೆ ಇಂದು ಹೇಳಿದ ಸುಪ್ರೀಂ ಕೋರ್ಟ್, ಸಂಬಂಧಿತ ಕಾನೂನುಗಳನ್ನು ಕಠಿಣಗೊಳಿಸಬೇಕಿದೆ ಎಂದು ಸಲಹೆ ನೀಡಿದೆ.

"ಪ್ರಚೋದನೆಯನ್ನು ನಿಯಂತ್ರಿಸುವುದು ಕಾನೂನು ಸುವ್ಯವಸ್ಥೆ ಕಾಪಾಡುವ ಒಂದು ಪ್ರಮುಖ ಭಾಗವಾಗಿದೆ ಆದರೆ ಸರಕಾರ ಈ ನಿಟ್ಟಿನಲ್ಲಿ ಏನನ್ನೂ ಮಾಡಿಲ್ಲ" ಎಂದು ಕಳೆದ ವರ್ಷ ತಬ್ಲೀಗಿ ಜಮಾತ್ ಕಾರ್ಯಕ್ರಮದಿಂದ ದೇಶದಲ್ಲಿ ಕೋವಿಡ್ ಹರಡುವಿಕೆಗೆ ಕಾರಣವಾಯಿತು ಎಂಬ ಕುರಿತಾದ ಕೆಲ ಮಾಧ್ಯಮಗಳ  ಸುದ್ದಿಯನ್ನು ವಿರೋಧಿಸಿ ಜಮೀಯತ್-ಉಲೇಮಾ-ಐ-ಹಿಂದ್, ಪೀಸ್ ಪಾರ್ಟ್ ಮತ್ತಿತರ ಸಂಘಟನೆಗಳು ಸಲ್ಲಿಸಿದ್ದ ಅಪೀಲಿನ ಮೇಲಿನ ವಿಚಾರಣೆ ಸಂದರ್ಭ ನ್ಯಾಯಾಲಯ ಹೇಳಿದೆ.

"ಪ್ರಾಮಾಣಿಕ ಹಾಗೂ ನ್ಯಾಯಯುತ ವರದಿಗಾರಿಕೆ ಒಂದು ಸಮಸ್ಯೆಯಲ್ಲ, ಆದರೆ ಇತರರನ್ನು ಪ್ರಚೋದಿಸುವ ರೀತಿಯಲ್ಲಿ ಸುದ್ದಿ ಬಿಂಬಿಸಿದಾಗ ಸಮಸ್ಯೆಯಾಗುತ್ತದೆ" ಎಂದು  ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ,  ಜಸ್ಟಿಸ್ ಎ ಎಸ್ ಬೋಪಣ್ಣ ಹಾಗೂ ಜಸ್ಟಿಸ್ ವಿ ರಾಮಸುಬ್ರಮಣಿಯನ್ ಅವರ ಪೀಠ ಹೇಳಿದೆ.

ಮೇಲಿನ ಸಂಘಟನೆಗಳು ಸಲ್ಲಿಸಿದ್ದ ಅಪೀಲನ್ನು ಪರಿಗಣಿಸಿದ್ದ ನ್ಯಾಯಾಲಯ ಈ ಹಿಂದೆ ಕೇಂದ್ರ ಸರಕಾರ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಬ್ರಾಡ್‍ಕಾಸ್ಟಿಂಗ್ ಅಸೋಸಿಯೇಶನ್‍ಗೆ  ನೋಟಿಸ್ ಜಾರಿಗೊಳಿಸಿತ್ತು.

ತಾನು ಕೆಲವೊಂದು ಸುದ್ದಿಗಳ ಪ್ರಸಾರ ನಿಲ್ಲಿಸಿದ್ದಾಗಿ ಕೇಂದ್ರ ಹೇಳಿದರೂ ಸಿಜೆಐ ಬೊಬ್ಡೆ ಈ ಉತ್ತರದಿಂದ ಸಮಾಧಾನಗೊಂಡಿರಲಿಲ್ಲ.

ಗಣತಂತ್ರ ದಿನದಂದು ರೈತರ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭ ಹಿಂಸಾಚಾರ ನಡೆದಾಗ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ್ದನ್ನು ಉಲ್ಲೇಖಿಸಿದ ಸಿಜೆಐ ಬೊಬ್ಡೆ, "ನಿನ್ನೆ ರೈತರ ರ್ಯಾಲಿ ವೇಳೆ  ನೀವು ಇಂಟರ್ನೆಟ್ ಸ್ಥಗಿತಗೊಳಿಸಿದಿರಿ, ಆದರೆ ಇಂತಹ ಸಮಸ್ಯೆಗಳು ಎಲ್ಲಾ ಕಡೆ ಉದ್ಭವವಾಗಬಹುದು" ಎಂದು ಹೇಳಿದರು.  ಕೇಬಲ್ ಟೆಲಿವಿಷನ್ ನೆಟ್‍ವರ್ಕ್ (ನಿಯಂತ್ರಣ)ಕಾಯಿದೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಬಯಸುವುದಾಗಿ ನ್ಯಾಯಾಲಯ ಹೇಳಿತು.

ಪ್ರಕರಣದ ಮುಂದಿನ ವಿಚಾರಣೆ ಮೂರು ವಾರಗಳ ನಂತರ ಮತ್ತೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News