'ಜನ್ಮದಿನದಂದೇʼ ಮುನವ್ವರ್‌ ಫಾರೂಕಿಗೆ ಜಾಮೀನು ನಿರಾಕರಣೆ: ಸಾಮಾಜಿಕ ತಾಣದಾದ್ಯಂತ ಆಕ್ರೋಶ

Update: 2021-01-28 13:23 GMT

ಭೋಪಾಲ್,ಜ.28: ಇಂದೋರ್‌ ನಲ್ಲಿ ನಡೆದ ಹೊಸ ವರ್ಷದ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ನಿಂದನಾತ್ಮಕ ಮಾತುಗಳನ್ನಾಡಿದ್ದಾರೆಂಬ ಹಿಂದು ಸಂಘಟನೆಯ ನಾಯಕನೊಬ್ಬನ ದೂರಿನ ನಂತರ ಜೈಲುಪಾಲಾಗಿರುವ ಕಾಮಿಡಿಯನ್ ಮುನಾವರ್ ಫಾರೂಖಿ ಅವರ ಜಾಮೀನು ಅರ್ಜಿಯನ್ನು ಇಂದು ಮಧ್ಯ ಪ್ರದೇಶ ಹೈಕೋರ್ಟ್ ತಿರಸ್ಕರಿಸಿರುವ ಬೆಳವಣಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಂತೆಯೇ ನೆಟ್ಟಿಗರಿಂದ ಕುತೂಹಲಕಾರಿ ಪ್ರತಿಕ್ರಿಯೆಗಳಿಗೂ ಕಾರಣವಾಗಿದೆ.

"ಮುನವ್ವರ್ ಫಾರೂಖಿಗೆ ಜಾಮೀನು ನಿರಾಕರಿಸಿದ ನ್ಯಾಯಾಧೀಶರು ಈ ಹಿಂದೆ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕೆಂಬ ಷರತ್ತಿನೊಂದಿಗೆ ಲೈಂಗಿಕ ಕಿರುಕುಳ ಆರೋಪಿಯೊಬ್ಬನಿಗೆ ಜಾಮೀನು ನೀಡಿದ್ದರು" ಎಂದು  ಆದಿತ್ಯ ಮೆನೊನ್ ಎಂಬ ಟ್ವಿಟ್ಟರಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಿಂದೂಸ್ತಾನ್‌ ಟೈಮ್ಸ್‌ ವರದಿಯ ಪ್ರಕಾರ, ನ್ಯಾಯಾಧೀಶ ರೋಹಿತ್‌ ಆರ್ಯ ಈ ಹಿಂದೆ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಯುವತಿಯ ಅರ್ಜಿಯ ಕುರಿತು ತೀರ್ಪು ನೀಡುತ್ತಾ, "ಆರೋಪಿಯು ಯುವತಿಗೆ ರಕ್ಷಾ ಬಂಧನ ದಿನದಂದು ರಾಖಿ ಕಟ್ಟಬೇಕು, ಮಾತ್ರವಲ್ಲದೇ 11,000ರೂ. ಉಡುಗೊರೆಯನ್ನೂ ನೀಡಬೇಕು ಎಂದು ತೀರ್ಪು ನೀಡಿ ಆರೋಪಿಗೆ ಯಾವುದೇ ಶಿಕ್ಷೆ ನೀಡದೇ ಕಳುಹಿಸಿದ್ದರು ಎನ್ನಲಾಗಿದೆ.

"ಪ್ರಜಾಪ್ರಭುತ್ವದಲ್ಲಿ ಹೈಕೋರ್ಟ್ ಒಂದು ಮುನವ್ವರ್ ಫಾರೂಖಿಗೆ ಜಾಮೀನು ನಿರಾಕರಿಸಿದೆ ಎಂದು ತಿಳಿಯಲು ಭಯವಾಗುತ್ತಿದೆ. ಆತನ ಅಪರಾಧ- ಯಾವತ್ತೂ ಹೇಳದೇ ಇದ್ದ ಒಂದು ಜೋಕ್.  ಕಲ್ಪನೆಯ ಅಪರಾಧಕ್ಕೆ ಶಿಕ್ಷೆ" ಎಂದು ಸ್ವಾತಿ ಚತುರ್ವೇದಿ ಬರೆದಿದ್ದಾರಲ್ಲದೆ ಜತೆಗೆ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದ ತುಣುಕೊಂದನ್ನೂ ಪೋಸ್ಟ್ ಮಾಡಿದ್ದಾರೆ.

"ಅನ್ಯಾಯವನ್ನು ಸಹಿಸಲು ಅವರಿಗೆ ಎಲ್ಲಾ  ಶಕ್ತಿಯೂ ದೊರೆಯಲಿ" ಎಂದು ಡಿಂಕಲ್ ಜೋಷಿ ಎಂಬವರು ಪ್ರತಿಕ್ರಿಯಿಸಿದ್ದರೆ ಟ್ವಿಟ್ಟರಿಗರೊಬ್ಬರು ಇಂದು ಮುನಾವರ್ ಅವರ ಹುಟ್ಟು ಹಬ್ಬ ಎಂಬುದನ್ನೂ ನೆನಪಿಸಿದ್ದಾರಲ್ಲದೆ ಅವರಿಗೆ ಜಾಮೀನು ನಿರಾಕರಣೆ ಆದೇಶ ಅವರ ಹುಟ್ಟುಹಬ್ಬದಂದೇ ಬಂದಿರುವುದು ವಿಪರ್ಯಾಸ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News