ಬ್ಲೂಫ್ಲ್ಯಾಗ್ ಯೋಜನೆ ; ಮೀನುಗಾರರು, ಸ್ಥಳೀಯರ ಸಮಸ್ಯೆ ಆಲಿಸಿ: ಶಶಿಕಾಂತ್ ಪಡುಬಿದ್ರಿ

Update: 2021-01-28 14:53 GMT

ಉಡುಪಿ, ಜ.28: ಪಡುಬಿದ್ರೆಯ ಎಂಡ್ ಪಾಯಿಂಟ್ ಬೀಚ್‌ನಲ್ಲಿ ಪ್ರಾರಂಭಗೊಂಡಿರುವ ಬ್ಲೂ ಫ್ಲ್ಯಾಗ್ ಯೋಜನೆಯಿಂದ ಸ್ಥಳೀಯರಿಗೆ ಹಾಗೂ ಮೀನುಗಾರರಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಲು ತೊಂದರೆ ಯಾಗದಂತೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಬೀಚ್‌ನಲ್ಲಿ ಅಗತ್ಯ ಮೂಲಭೂತ ಸೌಲ್ಯ ಒದಗಿಸುವಂತೆ ಸದಸ್ಯ ಶಶಿಕಾಂತ್ ಪಡುಬಿದ್ರೆ ಉಡುಪಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮನವಿ ಮಾಡಿದರು.

ದಿನಕರ ಬಾಬು ಅಧ್ಯಕ್ಷತೆಯಲ್ಲಿ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಇಂದು ನಡೆದ 23ನೇ ಸಾಮಾನ್ಯ ಸಭೆಯಲ್ಲಿ ಅವರು ಈ ಕುರಿತು ಮಾತನಾಡಿ, ಸ್ಥಳೀಯರು ಬ್ಲೂಪ್ಲಾಗ್ ಉದ್ಘಾಟನೆಯ ದಿನವೇ ಈ ಬಗ್ಗೆ ತಮ್ಮ ಅಸಮಾಧಾನವನ್ನು ತೋಡಿ ಕೊಂಡಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.

ಬ್ಲೂಫ್ಲ್ಯಾಗ್ ಯೋಜನೆಯಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಪಡುಬಿದ್ರಿಯಿಂದ ಅಲ್ಲಿಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಇದರಿಂದ ಸ್ಥಳೀಯರಿಗೆ ತುಂಬಾ ಸಮಸ್ಯೆಯಾಗಿದೆ. ಇದರೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಬರುವ ವಾಹನ ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇದರಿಂದ ಸ್ಥಳೀಯ ನಿವಾಸಿಗರು ತೀವ್ರ ಸಮಸ್ಯೆ ಎದುರಿಸುತಿದ್ದಾರೆ ಎಂದವರು ಹೇಳಿದರು.

ಇನ್ನು ಯೋಜನಾ ಪ್ರದೇಶದೊಳಗೆ ಇರುವ ವ್ಯವಸ್ಥೆಗಳ ಸರಿಯಾದ ನಿರ್ವಹಣೆ ಇಲ್ಲವಾಗಿದೆ. ಶೌಚಾಲಯಗಳ ಸ್ವಚ್ಛತೆ ಮಾಡುವವರಿಲ್ಲ, ಅವುಗಳ ಬಾಗಿಲುಗಳು ಈಗಾಗಲೇ ಮುರಿದಿವೆ. ನೀರಿನ ಪೈಪ್‌ಲೈನ್ ಸೋರುತ್ತಿವೆ. ಎಲ್ಲವೂ ಹಾಳಾಗ ತೊಡಗಿದೆ. ಇವುಗಳ ನಿರ್ವಹಣೆ ಯಾರ ಜವಾಬ್ದಾರಿ ಎಂಬುದು ನಿರ್ಧಾರವಾಗಬೇಕು. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಜನೆ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಮಳೆಗಾಲದಲ್ಲಿ ಸಮಸ್ಯೆ: ಇನ್ನು ಮೀನುಗಾರರಿಗೆ ಯೋಜನೆಯಿಂದ ಸಮಸ್ಯೆಯಾಗಿದೆ. ಅವರಿಗೆ ಯೋಜನಾ ಪ್ರದೇಶದಲ್ಲಿ ಹೋಗಲು ಬಿಡುತ್ತಿಲ್ಲ. ಮಳೆಗಾಲದಲ್ಲಿ ಅಲ್ಲಿನ ಅಳಿವೆ ಬಾಗಿಲಿನಲ್ಲಿ ಅವರು ಮೀನುಗಾರಿಕೆ ಮಾಡುತ್ತಾರೆ. ಇದಕ್ಕೆ ಯೋಜನೆ ಅಡ್ಡಿಯಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಶಶಿಕಾಂತ್ ಪಡುಬಿದ್ರಿ ಹೇಳಿದರು.

ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ: ರಾಷ್ಟ್ರಮಟ್ಟದಲ್ಲಿ ಬ್ಯಾಂಕುಗಳ ವಿಲೀನಿಕರಣವಾದ ಬಳಿಕ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಹುತೇಕ ಹೊರರಾಜ್ಯದ ಸಿಬ್ಬಂದಿಗಳೇ ಕಾರ್ಯನಿರ್ವಹಿಸುತಿದ್ದಾರೆ. ಇದರಿಂದ ಸ್ಥಳೀಯ ರಿಗೆ ಬ್ಯಾಂಕ್ ಸಿಬ್ಬಂದಿಗಳೊಂದಿಗೆ ವ್ಯವಹಾರ ನಡೆಸಲು ಭಾಷಾ ಸಮಸ್ಯೆ ಎದುರಾಗಿದೆ. ಇದು ಗ್ರಾಹಕರ ದೈನಂದಿನ ಬ್ಯಾಂಕ್ ಕೆಲಸ ಕಾರ್ಯ ಗಳಲ್ಲಿ ತೊಂದರೆಯಾಗುತಿದೆ ಎಂದು ಬಾಬು ಶೆಟ್ಟಿ ದೂರಿದರು. ಅವರಿಗೆ ಉಳಿದ ಸದಸ್ಯರು ಬೆಂಬಲ ಸೂಚಿಸಿದರು.

ಬ್ಯಾಂಕ್ ಸೇವೆಗಳಲ್ಲಿ ಸ್ಥಳೀಯರಿಗೆ ನೆರವಾಗುವಂತೆ ಕನಿಷ್ಠ ಪ್ರಮಾಣ ದಲ್ಲಾದರೂ ಕನ್ನಡ ಬಲ್ಲ ರಾಜ್ಯದ ಸಿಬ್ಬಂದಿಗಳನ್ನು ನೇಮಿಸುವಂತೆ ಸದಸ್ಯರು ಒತ್ತಾಯಿಸಿದರು.ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನಿಷ್ಠ ಇಬ್ಬರು ಸಿಬ್ಬಂದಿಯಾದರೂ ಕನ್ನಡ ಬಲ್ಲವರು ಇದ್ದಲ್ಲಿ ಸ್ಥಳೀಯರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಅನ್ಯರಾಜ್ಯದ ಸಿಬ್ಬಂದಿ ಯೊಂದಿಗೆ ಭಾಷಾ ಸಮಸ್ಯೆಯಿಂದ ಬ್ಯಾಂಕ್‌ಗಳ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಲಭ್ಯ ವಾಗುವುದಿಲ್ಲ ಎಂದು ಬಾಬು ಶೆಟ್ಟಿ ಹೇಳಿದರು.

ಬ್ಯಾಂಕಿಂಗ್ ನೇಮಕಾತಿಯಲ್ಲಿ ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಂಧ್ರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಸಿಬ್ಬಂದಿ ಆಯ್ಕೆಯಾಗುತಿದ್ದಾರೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ತಿಳಿಸಿದರು.

ಬ್ಯಾಂಕ್‌ಗಳಲ್ಲಿ ವಿದ್ಯಾಭ್ಯಾಸ ಸಾಲ ಮತ್ತು ಮುದ್ರಾ ಯೋಜನೆಯಡಿ ಸಲ್ಲಿಕೆ ಯಾಗುವ ಅರ್ಜಿಗಳನ್ನು ಕೂಡಲೇ ಮಂಜೂರು ಮಾಡುವಂತೆ, ಸಣ್ಣ ಪುಟ್ಟ ಕಾರಣಗಳಿಗೆ ಅರ್ಜಿ ತಿರಸ್ಕರಿಸದಂತೆ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಹೇಳಿದರು.

ಈ ಬಾರಿ ಶೈಕ್ಷಣಿಕ ಸಾಲಕ್ಕಾಗಿ 695 ಅರ್ಜಿಗಳು ಬಂದಿದ್ದು, ಇವುಗಳಲ್ಲಿ 547 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ. 97 ಅರ್ಜಿಗಳು ಪರಿಶೀಲನೆಯಲ್ಲಿವೆ ಹಾಗೂ 56 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ರುದ್ರೇಶ್ ಅಂಕಿಅಂಶ ನೀಡಿದರು.

ಜಾಗ ಮಾರಾಟ:  ಗಾಳಿಯಂತ್ರ ತಯಾರಿಸುವ ಉದ್ದಿಮೆ ಸ್ಥಾಪಿಸಲು ಬಂದು ಪಲಿಮಾರು, ನಡ್ಸಾಲು ಗ್ರಾಮಗಳಲ್ಲಿ 600 ಎಕರೆಗೂ ಅಧಿಕ ಜಾಗವನ್ನು ಸರಕಾರದಿಂದ ತೀರಾ ಕಡಿಮೆ ಕ್ರಯಕ್ಕೆ ಪಡೆದ ಸುಜ್ಲಾನ್ ಕಂಪೆನಿ ಇದೀಗ ತಮಗೆ ನೀಡಿದ್ದ ಜಾಗ ವನ್ನು ಭಾರೀ ಲಾಭದೊಂದಿಗೆ ಖಾಸಗಿಯವರಿಗೆ ಮಾರಾಟ ಮಾಡಿ ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿದಿದೆ. ಇದಕ್ಕೆ ನಿಷೇಧ ಹೇರುವ ಜೊತೆಗೆ ಅಲ್ಲಿನ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವುದನ್ನು ಕಡ್ಡಾಯಗೊಳಿಸುವಂತೆ ಶಶಿ ಕಾಂತ್ ಪಡುಬಿದ್ರಿ ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಹಿಂದೇಟು: ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯನ್ನು ಪಡೆಯುತಿದ್ದಾರೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಲಸಿಕೆ ಪಡೆಯಲು ಹಿಂಜರಿಯುತಿದ್ದು, ಇದರಿಂದ ಲಸಿಕೆ ನೀಡುವ ನಿಗದಿತ ಗುರಿ ಸಾಧನೆ ಆಗುತ್ತಿಲ್ಲ ಎಂದು ಸುಮಿತ್ ಶೆಟ್ಟಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಲಸಿಕೆ ಪಡೆಯುವ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವಂತೆ ಸಿಇಓ ಡಾ.ನವೀನ್ ಭಟ್ ತಿಳಿಸಿದರು.

ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 22103 ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಿದ್ದು, ಇದುವರೆಗೆ 9299 ಮಂದಿಗೆ ಲಸಿಕೆ ನೀಡಿ, ಶೇ.60.2 ಗುರಿ ಸಾಧಿಸಿದೆ ಎಂದು ಡಿಹೆಚ್‌ಓ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದರು.

ಕಾಟಾಚಾರದ ಪ್ರಕ್ರಿಯೆ: ಜಿಲ್ಲೆಯ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕುರಿತಂತೆ ಸಾಕಷ್ಟು ಮುಂಚಿತವಾಗಿ ಪ್ರಚಾರ ನೀಡಿ ಖರೀದಿ ನಡೆಸುವಂತೆ ಹಾಗೂ ಭತ್ತ ಖರೀದಿ ಯಲ್ಲಿ ಎಂಓ4 ತಳಿಯನ್ನು ಬೆಂಬಲ ಬೆಲೆ ವ್ಯಾಪ್ತಿಗೆ ತರುವಂತೆ ಉದಯ ಎಸ್ ಕೋಟ್ಯಾನ್ ಸಲಹೆ ನೀಡಿದರು. ಈ ಬಾರಿ ಬೆಂಬಲ ಬೆಲೆಯಲ್ಲಿ ಭತ್ತ ನೀಡಲು ಜಿಲ್ಲೆಯ ಯಾವೊಬ್ಬ ರೈತನೂ ಮುಂದೆ ಬಂದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಉತ್ತರಿಸಿದರು.

ಪ್ರತಿವರ್ಷ ಇದು ಕಾಟಾಚಾರಕ್ಕೆ ಮಾಡುವ ವ್ಯವಸ್ಥೆಯಾಗಿ ಕಾಣಿಸುತ್ತದೆ. ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲೇ ಬೆಂಬಲ ಬೆಲೆ ಯಲ್ಲಿ ಭತ್ತದ ಖರೀದಿ ಆರಂಭಗೊಂಡರೆ ಮಾತ್ರ ರೈತರಿಗೆ ಅನುಕೂಲ. ನವೆಂಬರ್‌ನಲ್ಲಿ ಬೆಂಬಲ ಬೆಲೆ ಘೋಷಣೆಯಾಗುವಾಗ ರೈತರು ಭತ್ತ ಮಾರಿಯಾಗಿರುತ್ತದೆ ಎಂದು ಸದಸ್ಯರು ತಿಳಿಸಿದರು.

ಕಲ್ಯಾಣಪುರ ವ್ಯಾಪ್ತಿಯಲ್ಲಿ ನೆರೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಣೆ ಕಾರ್ಯವನ್ನು ಶೀಘ್ರದಲ್ಲಿ ನೀಡುವಂತೆ ಹಾಗೂ ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಿಸುವ ಯೋಜನೆಯಲ್ಲಿ ಜನ್ಮ ದಿನಾಂಕವನ್ನು ಪರಿಗಣಿಸುವಾಗ ವ್ಯತ್ಯಾಸವಾಗ ದಂತೆ ಎಚ್ಚರಿಕೆ ವಹಿಸುವಂತೆ ಜನಾರ್ದನ ತೋನ್ಸೆ ಹೇಳಿದರು.

ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ತಾಲೂಕುಗಳಲ್ಲಿ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆ ಯಾಗುತ್ತಿಲ್ಲ. ಸಂಬಂದಪಟ್ಟ ಅಧಿಕಾರಿಗಳನ್ನು ಕೇಳಿದರೆ ನೂತನ ತಾಲೂಕುಗಳಿಗೆ ಹೊಸ ಲಾಗಿನ್ ರಚನೆ ಯಾಗಬೇಕಿದ್ದು ಇದರಿಂದ ಸಮಸ್ಯೆಯಾಗಿದೆ ಎನ್ನುತ್ತಾರೆ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿ, ವಸತಿ ಯೋಜನೆಯ ಫಲಾನುವಿಗಳಿಗೆ ಅನುಕೂಲ ಮಾಡಿಕೊಡುವಂತೆ ಸದಸ್ಯೆ ಶಿಲ್ಪಾಸುವರ್ಣ ಕೋರಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕರು 20 ದಿನದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಪ್ರತಾಪ್ ಹೆಗ್ಡೆ ಮಾರಾಳಿ, ಶೋಭಾ ಜಿ. ಪುತ್ರನ್, ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಮುಖ್ಯ ಯೋಜನಾ ಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ಜಿಪಂಗೂ ಬಂದ ಕಾಡುಪ್ರಾಣಿಗಳು !

ಕಾಡು ಬಿಟ್ಟು ನಾಡಿಗೆ ಬಂದು ಜಿಲ್ಲೆಯ ಜನರಲ್ಲಿ ಆತಂಕ, ಸಮಸ್ಯೆಗಳನ್ನು ಉಂಟು ಮಾಡುತ್ತಿರುವ ವಿವಿಧ ಕಾಡುಪ್ರಾಣಿಗಳು ಇಂದು ಜಿಪಂ ಸಾಮಾನ್ಯ ಸಭೆಯಲ್ಲೂ ಸದಸ್ಯರ ನಡುವೆ ಸಾಕಷ್ಟು ಚರ್ಚೆಗೆ ಕಾರಣವಾದವು.

ವಿಷಯ ಪ್ರಸ್ತಾಪಿಸಿದ ಸದಸ್ಯೆ ಜ್ಯೋತಿ ಹರೀಶ್, ಇತ್ತೀಚೆಗೆ ಕಬ್ಬಿನಾಲೆ ಸಮೀಪದ ಮತ್ತಾವಿನಲ್ಲಿ ಕರಡಿಯೊಂದು ಗ್ರಾಮಸ್ಥರ ಮೇಲೆ ದಾಳಿ ಮಾಡಿದ್ದು, ಆತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಈ ಪ್ರದೇಶದಲ್ಲಿ ಕರಡಿಗಳು ಸಂಖ್ಯೆ ತುಂಬಾ ಹೆಚ್ಚಿದ್ದು, ಅವೀಗ ಗ್ರಾಮಕ್ಕೂ ಬರುತ್ತಿವೆ. ಇದರಿಂದ ಜನರು ಹೆದರಿಕೆ ಹಾಗೂ ಆತಂಕದಲ್ಲಿದ್ದಾರೆ. ಇದಕ್ಕೊಂದು ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.

ಇವರ ಮಾತಿಗೆ ಪೂರಕವಾಗಿ ಮಾತನಾಡಿ ಜನಾರ್ದನ ತೋನ್ಸೆ ಸೇರಿದಂತೆ ಉಳಿದ ಸದಸ್ಯರು, ಹಿಂದೆಲ್ಲಾ ಕಾಡಿನಲ್ಲಿ ಮಾತ್ರ ಕಾಣಲು ಸಿಗುತಿದ್ದ ಜಿಂಕೆ, ಕಾಡುಕೋಣ ಮುಂತಾದ ಪ್ರಾಣಿಗಳು ಈಗ ಕರಾವಳಿಯವರೆಗೂ ಮನೆಯ ಎದುರೇ ಕಾಣಲು ಸಿಗು ತ್ತಿವೆ. ಅಲ್ಲದೇ ಮಂಗ, ನವಿಲು ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳು ನಾಡಿಗೆ ಬಂದು ರೈತರಿಗೆ, ಜನಸಾಮಾನ್ಯರಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತಿರುವುದಲ್ಲದೇ, ಅಪಘಾತಕ್ಕೂ ಕಾರಣವಾಗುತ್ತಿರುವ ಉದಾಹರಣೆಗಳನ್ನು ನೀಡಿ, ಇದು ಜನರ ಬದುಕಿನ ಪ್ರಶ್ನೆಯಾಗಿರುವುದರಿಂದ ಅವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಭೆಯಲ್ಲಿದ್ದ ಆರ್‌ಎಫ್‌ಓ ಅನಿಲ್‌ಕುಮಾರ್ ತಾವು ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಯವನ್ನು ತರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News