ದ.ಕ. ಜಿಲ್ಲೆಯಲ್ಲಿ ‘ಪೋಸ್ಟ್ ಕೋವಿಡ್ ಸೆಂಟರ್’ಗಳ ಸಂಖ್ಯೆಯಲ್ಲಿ ಹೆಚ್ಚಳ

Update: 2021-01-28 15:47 GMT

ಮಂಗಳೂರು, ಜ.28: ದೇಶಾದ್ಯಂತ ಕೋವಿಡ್ ಅಬ್ಬರ ಕಡಿಮೆಯಾಗುತ್ತಿದ್ದರೂ ಕೂಡ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಇತರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ‘ಆಯುಷ್’ನಡಿ ಹೋಮಿಯೋಪಥಿ ಹಾಗೂ ಆರ್ಯುವೇದ ವೈದ್ಯ ಪದ್ಧತಿಯು ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ದ.ಕ ಜಿಲ್ಲೆಯಲ್ಲಿ ಪೋಸ್ಟ್ ಕೋವಿಡ್ ಚಿಕಿತ್ಸಾ ಕೇಂದ್ರಗಳು ಹೆಚ್ಚಾಗಿರುವುದು ಸಾಕ್ಷಿಯಾಗಿದೆ.

ಕೊರೋನ ಬಂದ ಬಳಿಕ ಜನಸಾಮಾನ್ಯರಲ್ಲಿ ಅದರಲ್ಲೂ ಹಿರಿಯರಲ್ಲಿ ಗಂಟು ನೋವು, ಬೆನ್ನು ನೋವು, ಉಸಿರಾಟದ ಸಮಸ್ಯೆ, ಮಲಬದ್ದತೆ ಸಹಿತ ಹಲವು ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಆಯುಷ್ ಇಲಾಖೆಯಡಿಯಲ್ಲಿರುವ ಹೋಮಿಯೋಪಥಿ ಮತ್ತು ಆರ್ಯುವೇದ ವೈದ್ಯಕೀಯ ಪದ್ಧತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಜಿಲ್ಲೆಯ ಫಾದರ್ ಮುಲ್ಲರ್, ಯೆನೆಪೋಯ, ಆಳ್ವಾಸ್ ಸಹಿತ ಕೆಲವು ಹೋಮಿಯೋಪಥಿ ಹಾಗೂ ಆರ್ಯುವೇದ ಕಾಲೇಜಿನಲ್ಲಿ ಪೋಸ್ಟ್ ಕೋವಿಡ್ ಚಿಕಿತ್ಸಾ ಕೇಂದ್ರಗಳು ಆರಂಭಗೊಂಡಿವೆ.

ನಗರ ಹೊರವಲಯದ ದೇರಳಕಟ್ಟೆಯ ಫಾದರ್ ಮುಲ್ಲರ್ಸ್‌ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಆ್ಯಂಡ್ ಹಾಸ್ಪಿಟಲ್‌ನಲ್ಲಿ ಹೋಮಿಯೋಪಥಿ ಪೋಸ್ಟ್ ಕೋವಿಡ್ ಸೆಂಟರ್ ತೆರೆಯಲಾಗಿದೆ. ಕಳೆದ ಎರಡು ತಿಂಗಳಿನಿಂದ ಈ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ಕೋವಿಡ್‌ನಿಂದ ಚೇತರಿಕೆ ಕಂಡ ರೋಗಿಗಳಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆ ಪೈಕಿ ಅನೇಕ ಮಂದಿ ಹೋಮಿಯೋಪಥಿಯಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಾರೆ. ನಮ್ಮಲ್ಲಿ ಹೋಮಿಯೋಪಥಿ, ಯೋಗ, ನ್ಯಾಚುರೋಪಥಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಫಾದರ್ ಮುಲ್ಲರ್ ಕಾಲೇಜಿನ ನಿರ್ದೇಶಕ ಫಾ.ರೋಶನ್ ಕ್ರಾಸ್ತಾ ಹೇಳುತ್ತಾರೆ.

ಈಗಾಗಲೇ ನಮ್ಮಲ್ಲಿ ಆರ್ಯುವೇದ ಸಹಿತ ಹೋಮಿಯೋಥಿ, ನ್ಯಾಚುರೋಪಥಿಯಲ್ಲಿ ಪೋಸ್ಟ್ ಕೋವಿಡ್ ಸೆಂಟರ್‌ಗಳನ್ನು ತೆರೆಯಲಾಗಿದೆ. ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣಿಸಿಕೊಳ್ಳುತ್ತಿದೆ. ರೋಗಿಗಳು ಕೂಡ ಈ ಚಿಕಿತ್ಸೆಗೆ ಒಗ್ಗಿಕೊಳ್ಳುತ್ತಿದ್ದಾರೆ ಎಂದು ಆಳ್ವಾಸ್ ಹೋಮಿಯೋಪಥಿಕ್ ಕಾಲೇಜಿನ ಪ್ರಾಂಶುಪಾಲ ಡಾ.ರೋಶನ್ ಪಿಂಟೋ ಅಭಿಪ್ರಾಯಪಡುತ್ತಾರೆ.

ಕೊರೋನ ಸೋಂಕು ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಆಯುಷ್ ಇಲಾಖೆಯಡಿ ವೈದ್ಯ ಪದ್ದತಿಯಲ್ಲಿ ಚಿಕಿತ್ಸೆ ನೀಡುವ ಕೆಲಸ ಮಾಡಿದ್ದೆವು. ಆದರೆ ಈಗ ಪೋಸ್ಟ್ ಕೋವಿಡ್ ಸೆಂಟರ್‌ಗಳನ್ನು ತೆರೆಯುವ ಮೂಲಕ ರೋಗಿಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಮಾಡಲಾಗುತ್ತಿದೆ. ಉಳಿದ ವೈದ್ಯಕೀಯ ಪದ್ದತಿಗಿಂತ ಹೆಚ್ಚಾಗಿ ಆಯುಷ್ ವೈದ್ಯ ಪದ್ದತಿಯ ಕಡೆಗೆ ಒಲವು ವ್ಯಕ್ತವಾಗುತ್ತಿದೆ ಎಂದು ದ.ಕ. ಆಯುಷ್ ಇಲಾಖೆಯ ಅಧಿಕಾರಿ ಮುಹಮ್ಮದ್ ಇಕ್ಬಾಲ್ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News