ನ್ಯಾಯಾಂಗವನ್ನು ಟೀಕಿಸುವ ಪ್ರವೃತ್ತಿ ಹೆಚ್ಚುತ್ತಿದೆ: ಸುಪ್ರೀಂಕೋರ್ಟ್ ಕಳವಳ
ಹೊಸದಿಲ್ಲಿ,ಜ.29: ನ್ಯಾಯಾಲಯಗಳನ್ನು ಟೀಕಿಸುವ ಪ್ರವೃತ್ತಿಯು ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆ ಕೆಲಸದಲ್ಲಿ ತೊಡಗಿದ್ದಾರೆಂದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ. ನ್ಯಾಯಾಂಗದ ವಿರುದ್ಧ ವಿವಾದಾತ್ಮಕ ಟೀಕೆಗಳನ್ನು ಮಾಡಿದ ಆರೋಪದಲ್ಲಿ ವ್ಯಂಗ್ಯಚಿತ್ರಕಾರಿಣಿ ರಚಿತ್ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಲ್ಲಿಸಲಾದ ಅರ್ಜಿಯ ಕುರಿತ ತೀರ್ಪಿನ ಬಗ್ಗೆ ಮೂರು ವಾರಗಳೊಳಗೆ ಉತ್ತರಿಸುವಂತೆ ಸೂಚಿಸಿದ ಸಂದರ್ಭದಲ್ಲಿ ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತನೇಜಾ ಪರ ನ್ಯಾಯವಾದಿ ಮುಕುಲ್ ರೋಹಟಗಿ ಅವರು ತನ್ನ ಕಕ್ಷಿದಾರಳ ಪರವಾಗಿ ಉತ್ತರವನ್ನು ಸಲ್ಲಿಸುವುದಾಗಿ ನ್ಯಾಯೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್.ರೆಡ್ಡಿ ಹಾಗೂ ಎಂ.ಆರ್.ಶಾ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು.
ಪ್ರತಿಯೊಬ್ಬರೂ ನ್ಯಾಯಾಂಗವನ್ನು ಟೀಕಿಸತೊಡಗಿದ್ದಾರೆಂಬ ನ್ಯಾಯಪೀಠದ ಅಸಮಾಧಾನಕ್ಕೆ ಉತ್ತರಿಸಿದ ರೋಹಟಗಿ ಅವರು ತನೇಜಾ ಅವರು 25 ವರ್ಷದ ಯುವತಿಯಾಗಿದ್ದು, ನ್ಯಾಯಾ ಲಯದ ಕುರಿತ ಟೀಕೆಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗದು ಎಂದರು.
ಈ ಮಧ್ಯೆ ಸ್ಟಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮ ಕೋರಿ ಸಲ್ಲಿಸಲಾದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಎರಡು ವಾರಗಳವರೆಗೆ ಮುಂದೂಡಿದೆ. ಕುನಾಲ್ ಕಾಮ್ರಾ ಅವರ ಉತ್ತರವನ್ನು ತಾವು ಸ್ವೀಕರಿಸಿರುವುದಾಗಿ ಅರ್ಜಿದಾರರು ವಿಚಾರಣೆ ವೇಳೆ ತಿಳಿಸಿದ್ದರು.
ಸುಪ್ರೀಂಕೋರ್ಟ್ ವಿರುದ್ಧ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿದ್ದಕ್ಕಾಗಿ ಕಾಮ್ರಾ ಹಾಗೂ ತನೇಜಾ ವಿರುದ್ಧ ಡಿಸೆಂಬರ್ 18ರಂದು ಸರ್ವೋಚ್ಚ ನ್ಯಾಯಾಲಯವು ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.