ಜೆಎನ್‌ಯು ವಿದ್ಯಾರ್ಥಿನಿ ದೇವಾಂಗನಾ ಜಾಮೀನು ಅರ್ಜಿ ವಜಾ
ಹೊಸದಿಲ್ಲಿ, ಜ.29: ಕಳೆದ ವರ್ಷದ ಫೆಬ್ರವರಿಯಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ವ್ಯಾಪಕ ಕೋಮು ಗಲಭೆಗೆ ಸಂಬಂಧಿಸಿ ಬಂಧನದಲ್ಲಿರುವ ‘ಪಿಂಜಾರ ತೋಡ್’ ಕಾರ್ಯಕರ್ತೆ, ಜೆಎನ್‌ಯು ವಿದ್ಯಾರ್ಥಿನಿ ದೇವಾಂಗನಾ ಕಲಿತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದಿಲ್ಲಿಯ ನ್ಯಾಯಾಲಯ ವಜಾಗೊಳಿಸಿದೆ.
ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿ ‘ಪಿಂಜಾರ ತೋಡ್’ ಕಾರ್ಯಕರ್ತೆಯರಾದ ದೇವಾಂಗನಾ ಹಾಗೂ ನತಾಶಾ ನರ್ವಾಲ್‌ರನ್ನು 2020ರ ಮೇ 23ರಂದು ಪೊಲೀಸರು ಬಂಧಿಸಿದ್ದರು.
ಮರುದಿನ ಇವರಿಬ್ಬರಿಗೆ ಜಾಮೀನು ದೊರಕಿತ್ತು. ಆದರೆ ತಕ್ಷಣವೇ, ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಇವರಿಬ್ಬರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ದೇವಾಂಗನಾ ವಿರುದ್ಧ ಕಾನೂನುಬಾಹಿರ ಕೃತ್ಯ(ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಕೆ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರದ ಪೂರ್ವಭಾವಿ ಪಿತೂರಿಯ ಭಾಗವಾಗಿದ್ದಾರೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಇವರ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸತ್ಯವೆಂದು ತೋರುತ್ತದೆ ಎಂದು ಹೇಳಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.