'ಕ್ಲೀನ್ ಸಿಟಿ' ಕಿರೀಟಕ್ಕಾಗಿ ಇಂದೋರ್ ಅಧಿಕಾರಿಗಳ 'ನೀಚ ಕೃತ್ಯ': ವಿಡಿಯೋ ವೈರಲ್
ಭೋಪಾಲ್, ಜ.30: ಸತತ ಐದನೇ ವರ್ಷ ದೇಶದ ಅತ್ಯಂತ ಕ್ಲೀನ್ ಸಿಟಿ ಎಂಬ ಕಿರೀಟವನ್ನು ಉಳಿಸಿಕೊಳ್ಳುವ ಸಲುವಾಗಿ ಇಂದೋರ್ ಮಹಾನಗರ ಪಾಲಿಕೆ ಅಧಿಕಾರಿಗಳು ಎಸಗಿದ ನೀಚ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನಗರದಿಂದ ಏಳೆಂಟು ಮಂದಿ ನಿರ್ಗತಿಕ ವೃದ್ಧರನ್ನು ಟ್ರಕ್‌ನಲ್ಲಿ ತುಂಬಿಕೊಂಡು ನಗರದ ಹೊರವಲಯದಲ್ಲಿ ಬಿಟ್ಟುಬರುವ ಅಧಿಕಾರಿಗಳ ಕ್ರಮದ ಬಗೆಗಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರಿಂದಲೂ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅದೇ ಟ್ರಕ್‌ನಲ್ಲಿ ಅವರನ್ನು ವಾಪಸ್ ಕರೆ ತರಲಾಗಿದೆ.
ಈ ಆಘಾತಕಾರಿ ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಇಂದೋರ್ ಮಹಾನಗರ ಪಾಲಿಕೆಯ ಉಪ ಆಯುಕ್ತ ಪ್ರತಾಪ್ ಸೋಳಂಕಿಯರವನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ನೀಚ ಕೃತ್ಯದಲ್ಲಿ ತೊಡಗಿದ್ದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಪಾಲಿಕೆ ಅಧಿಕಾರಿಗಳ ತಂಡ ಕೊರೆಯುವ ಚಳಿಯ ನಡುವೆ ನಿರ್ಗತಿಕ ವೃದ್ಧರನ್ನು ಹೆದ್ದಾರಿ ಬದಿ ಬಿಟ್ಟು ಹೋಗುತ್ತಿರುವ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು. ಇಂದೋರ್ ನಗರದ ಹೊರವಲಯದ ಕ್ಷಿಪ್ರ ಪ್ರದೇಶದ ರಾಜೇಶ್ ಜೋಶಿ ಎನ್ನುವವರು ಈ ವಿಡಿಯೊ ಸೆರೆಹಿಡಿದಿದ್ದಾರೆ. ವೃದ್ಧರನ್ನು ಟ್ರಕ್‌ನಿಂದ ಕೆಳಗಿಳಿಸಿ ಅವರ ವಸ್ತುಗಳನ್ನು ರಸ್ತೆ ಬದಿಗೆ ಅಧಿಕಾರಿಗಳು ಎಸೆಯುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ.
ಮೈಕೊರೆಯುವ ಚಳಿಯ ಮಧ್ಯೆ ವೃದ್ಧರನ್ನು ಹೆದ್ದಾರಿ ಬದಿಯಲ್ಲಿ ಬಿಟ್ಟುಹೋಗುವ ಅಧಿಕಾರಿಗಳ ಕ್ರಮದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅದೇ ಹಳದಿ ಟ್ರಕ್‌ನಲ್ಲಿ ಅಧಿಕಾರಿಗಳು ಮತ್ತೆ ಅವರೆಲ್ಲರನ್ನೂ ಕರೆದೊಯ್ಯುತ್ತಿರುವ ದೃಶ್ಯ ಇನ್ನೊಂದು ವಿಡಿಯೊದಲ್ಲಿದೆ.
ಮಧ್ಯಾಹ್ನ 2:30ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರೂ ಸೇರಿದಂತೆ 8-10 ಮಂದಿ ನಿರ್ಗತಿಕ ವೃದ್ಧರನ್ನು ಟ್ರಕ್‌ಗಳಲ್ಲಿ ತುಂಬಿಕೊಂಡು ಅಧಿಕಾರಿಗಳು ಆಗಮಿಸಿದ್ದರು. ಸ್ಥಳೀಯರು ಇದನ್ನು ಪ್ರಶ್ನಿಸಿದಾಗ ಇಂದೋರ್ ನಗರದಲ್ಲಿ ತೊಂದರೆ ಸೃಷ್ಟಿಸುತ್ತಿದ್ದು, ನಗರವನ್ನು ಹೊಲಸು ಮಾಡುತ್ತಿರುವ ಹಿನ್ನೆಲೆಯಲ್ಲಿ, ಮೇಲಧಿಕಾರಿಗಳ ಸೂಚನೆ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ಹೇಳಿಕೆ ನೀಡಿದ್ದರು.
"ನಗರವನ್ನು ಸ್ವಚ್ಛವಾಗಿಡುವ ಹೆಸರಿನಲ್ಲಿ ಐಎಂಸಿ ಸಿಬ್ಬಂದಿ ಇಂದೋರ್‌ನ ಹೊರವಲಯದಲ್ಲಿ ಮೈ ಕೊರೆಯುವ ಚಳಿಯಲ್ಲಿ ನಿರ್ಗತಿಕ ವೃದ್ಧರನ್ನು ಬಿಟ್ಟುಬಂದಿದ್ದಾರೆ" ಎಂದು ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ವಿಡಿಯೊವನ್ನು ಪೋಸ್ಟ್ ಮಾಡಿ ಟ್ವೀಟ್‌ನಲ್ಲಿ ಬಹಿರಂಗಪಡಿಸಿದ್ದರು. "ಮುತ್ಸದ್ದಿಗಳಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ ಅವರಂಥ ನಾಯಕರನ್ನೇ ಕೈಬಿಟ್ಟ ಬಿಜೆಪಿಯ ಹೊಸ ಸಿದ್ಧಾಂತಕ್ಕೆ ಅನುಸಾರವಾಗಿ ಅವರ ಸೂಚನೆಯನ್ನು ಪಾಲಿಸದೇ ಐಎಂಸಿ ಸಿಬ್ಬಂದಿಗೆ ಬೇರೆ ಯಾವ ಮಾರ್ಗವಿದೆ?" ಎಂದು ಅವರು ಪ್ರಶ್ನಿಸಿದ್ದರು.
इंदौर नगर निगम के अधिकारी स्वच्छता के नाम पर भारी ठंड में बुजुर्गों को शिप्रा छोड़ने पहुँचे -
— Narendra Saluja (@NarendraSaluja) January 29, 2021
अब अधिकारी बेचारे क्या करे वो तो भाजपा की विचारधारा के अनुरूप ही तो काम कर रहे है ?
भाजपा ने भी तो आडवाणी जी , जोशी जी , यशवंत सिन्हा जैसे कई बुजुर्ग नेताओ को कब से छोड़ दिया है ? pic.twitter.com/aYc8JFmXrQ