ʼಮಹಾತ್ಮ ಗಾಂಧಿʼ ಹುತಾತ್ಮ ದಿನದಂದು ಟ್ವಿಟರ್‌ ನಲ್ಲಿ ಟ್ರೆಂಡ್‌ ಆಗುತ್ತಿರುವ ನಾಥೂರಾಮ್‌ ಗೋಡ್ಸೆ

Update: 2021-01-30 07:49 GMT

ಹೊಸದಿಲ್ಲಿ,ಜ.30: ಭಾರತದ ರಾಷ್ಟ್ರಪಿತ, ದೇಶದ ಸ್ವಾತಂತ್ರ್ಯಕ್ಕಾಗಿ ಜನರನ್ನು ಒಟ್ಟುಗೂಡಿಸಿ ಹೋರಾಟಕ್ಕೆ ಪ್ರೇರೇಪಿಸಿದ ಮಹಾತ್ಮ ಗಾಂಧಿಯವರನ್ನು ನಾಥೂರಾಮ್‌ ವಿನಾಯಕ್‌ ಗೋಡ್ಸೆ ಎಂಬ ದುಷ್ಕರ್ಮಿಯು ಜನವರಿ 30 1948ರಂದು ಗುಂಡಿಕ್ಕಿ ಕೊಲೆಗೈದಿದ್ದನು. ಈ ಹಿನ್ನೆಲೆಯಲ್ಲಿ ಇಂದು ಒಂದೆಡೆ ಮಹಾತ್ಮಾ ಗಾಂಧಿಯವರ ಸ್ಮರಣೆ ನಡೆಯುತ್ತಿದ್ದರೆ ಇನ್ನೊಂದೆಡೆ ಗಾಂಧಿಯನ್ನು ಕೊಲೆಗೈದ ಗೋಡ್ಸೆಯನ್ನು ದೇಶಭಕ್ತನನ್ನಾಗಿಸುವ ಕಾರ್ಯವು ಸಾಮಾಜಿಕ ತಾಣದಾದ್ಯಂತ ನಡೆಯುತ್ತಿದೆ.

ʼದೇಶವನ್ನು ಒಡೆಯಲೆತ್ನಿಸಿದ ಗಾಂಧಿಯನ್ನು ಕೊಂದ ದೇಶಭಕ್ತ ಮತ್ತು ಅಪ್ರತಿಮ ವೀರ ನಾಥೂರಾಮ ಗೋಡ್ಸೆಯನ್ನು ನಾವು ಇಂದು ಸ್ಮರಿಸಬೇಕಿದೆ" ಎಂದು ಹಲವಾರು ಬಳಕೆದಾರರು ಟ್ವಿಟರ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಹಿಂದೆ ಹಿಂದೂ ಮಹಾಸಭಾ ಮಹಾತ್ಮ ಗಾಂಧಿಯವರ ಚಿತ್ರಕ್ಕೆ ಗುಂಡಿಕ್ಕುವ ಮೂಲಕ ವಿವಾದ ಸೃಷ್ಟಿಸಿತ್ತು. ಆದರೆ ಆರೋಪಿಗಳ ವಿರುದ್ಧ ಇದುವರೆಗೂ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ. ಬಿಜೆಪಿ ಸಂಸದೆ ಹಾಗೂ ಭಯೋತ್ಪಾದನಾ ಕೃತ್ಯ ಆರೋಪಿ ಪ್ರಗ್ಯಾ ಸಿಂಗ್‌ ಕೂಡಾ ಗೋಡ್ಸೆಯನ್ನು ದೇಶಭಕ್ತ ಎಂದಿದ್ದರು.

ಈ ಕುರಿತು ಟ್ವೀಟ್‌ ಮಾಡಿದ ಬಳಕೆದಾರರೋರ್ವರು, "ಭಾರತದ ಸ್ವಾತಂತ್ರ್ಯಕ್ಕೋಸ್ಕರ ತನ್ನ ಜೀವನವನ್ನು ಮುಡಿಪಾಗಿಟ್ಟ ಗಾಂಧೀಜಿಯ ಸ್ಮರಣೆಯ ಬದಲು ಇಂದು ಟ್ವಿಟರ್‌ ನಲ್ಲಿ ಕೊಲೆಗಾರ ನಾಥೂರಾಮ್‌ ಗೋಡ್ಸೆ ಹೆಸರು ಟ್ರೆಂಡ್‌ ಆಗುತ್ತಿದೆ. ಭಾರತ ಎತ್ತ ಸಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ. "ಮಹಾತ್ಮಾ ಗಾಂಧಿಯ ನೆಲವು ಗೋಡ್ಸೆಯ ನೆಲವಾಗಿ ಮಾರ್ಪಡುತ್ತಿದೆ" ಎಂದು ಇನ್ನೋರ್ವ ಬಳಕೆದಾರರು ವಿಷಾದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News