ಕೃಷಿ ಕಾಯ್ದೆ ಜಾರಿಯನ್ನು 18 ತಿಂಗಳು ತಡೆಹಿಡಿಯಲು ಈಗಲೂ ಸಿದ್ಧ: ಪ್ರಧಾನಿ ಮೋದಿ ಹೇಳಿಕೆ
ಹೊಸದಿಲ್ಲಿ,ಜ.30: ರೈತರು ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಲು ತನ್ನ ಸರಕಾರವು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದರು.
ಮುಂಗಡಪತ್ರ ಅಧಿವೇಶನದ ಸುಗಮ ನಿರ್ವಹಣೆಗಾಗಿ ಕರೆಯಲಾಗಿದ್ದ ವರ್ಚುವಲ್ ಸಭೆಯಲ್ಲಿ ವಿವಿಧ ಪಕ್ಷಗಳ ಸದನ ನಾಯಕರನ್ನುದ್ದೇಶಿಸಿ ಮಾತನಾಡಿದ ಮೋದಿ,ಮೂರು ನೂತನ ಕೃಷಿ ಕಾಯ್ದೆಗಳನ್ನು 18 ತಿಂಗಳುಗಳ ಕಾಲ ಅಮಾನತಿನಲ್ಲಿರಿಸುವ ಸರಕಾರದ ಪ್ರಸ್ತಾವವು ಈಗಲೂ ಚಾಲ್ತಿಯಲ್ಲಿದೆ ಎಂದು ಹೇಳಿದರು.
ಸರಕಾರವು ರೈತರ ಸಮಸ್ಯೆಗಳನ್ನು ಮುಕ್ತಮನಸ್ಸಿನಿಂದ ಪರಿಶೀಲಿಸುತ್ತಿದೆ. ಕೃಷಿಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರತಿಭಟನಾನಿರತ ರೈತರಿಂದ ಕೇವಲ ಒಂದು ದೂರವಾಣಿ ಕರೆಯ ಅಂತರದಲ್ಲಿದ್ದಾರೆ ಮತ್ತು ಈ ತಿಂಗಳ ಪೂರ್ವಾರ್ಧದಲ್ಲಿ ನಡೆದಿದ್ದ ಸಭೆಯಲ್ಲಿ ಅವರು ಇದನ್ನು ರೈತನಾಯಕರಿಗೆ ತಿಳಿಸಿದ್ದಾರೆ ಎಂದು ಮೋದಿ ಹೇಳಿದರು.
ಜ.26ರಂದು ಸಂಭವಿಸಿದ ದುರದೃಷ್ಟಕರ ಘಟನೆಗಳ ಕುರಿತಂತೆ ಮೋದಿಯವರು,ಕಾನೂನು ತನ್ನದೇ ಆದ ಮಾರ್ಗದಲ್ಲಿ ಸಾಗುತ್ತದೆ ಎಂದು ಹೇಳಿದರೆಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.