ಎಂಡಬ್ಲ್ಯೂಪಿಎಸ್‌ಸಿ ತಿದ್ದುಪಡಿ ಮಸೂದೆಗೆ ಸಂಸತ್ತಿನ ಸ್ಥಾಯಿ ಸಮಿತಿ ಸ್ವಾಗತ
ಹೊಸದಿಲ್ಲಿ, ಜ.30: ಪೋಷಕರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕ್ಷೇಮಾಭ್ಯುದಯ (ತಿದ್ದುಪಡಿ) ಮಸೂದೆ 2019ರ (ಎಂಡಬ್ಲ್ಯೂಪಿಎಸ್‌ಸಿ) ಮೂಲಕ ಮಕ್ಕಳು, ಹೆತ್ತವರು ಮತ್ತು ಸಂಬಂಧಿಕರ ವ್ಯಾಖ್ಯಾನವನ್ನು ವಿಸ್ತರಿಸಿರುವುದರಿಂದ ಯಾವುದೇ ರೀತಿಯ ಕಾನೂನಿನ ಸಂದಿಗ್ಧತೆಗೆ ಅವಕಾಶವಿಲ್ಲವಾಗಿದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿಯ ವರದಿಯೊಂದು ಹೇಳಿದೆ. ಪ್ರಸ್ತಾವಿತ ಮಸೂದೆಯಲ್ಲಿ ಮಕ್ಕಳ ಪದದ ವ್ಯಾಖ್ಯಾನದ ವ್ಯಾಪ್ತಿಗೆ ಅಳಿಯ, ಸೊಸೆ, ದತ್ತು ಪುತ್ರ ಅಥವಾ ಮಲ ಮಗ, ಮಗಳು, ಪಾಲಕರ ನೆರವಿನಲ್ಲಿರುವ ಅಪ್ರಾಪ್ತ ವಯಸ್ಕರನ್ನು ಸೇರಿಸಲಾಗಿದೆ. ಇದೇ ರೀತಿ ಹೆತ್ತವರು ಪದದ ವ್ಯಾಖ್ಯಾನದ ವ್ಯಾಪ್ತಿಗೆ ಮಾವ, ಅತ್ತೆ, ಅಜ್ಜ-ಅಜ್ಜಿಯರನ್ನು ಸೇರಿಸಲಾಗಿದೆ. ಸಂಬಂಧಿಕರ ವ್ಯಾಖ್ಯಾನದಲ್ಲಿ ಪಾಲಕರ ನೆರವಿನಲ್ಲಿರುವ ಅಪ್ರಾಪ್ತ ವಯಸ್ಕರು ಸೇರುತ್ತಾರೆ. ಅರ್ಹ(ಸ್ವೀಕಾರಾರ್ಹ) ಸಂಬಂಧಿಕರು/ಪೋಷಕರು ಮತ್ತು ಹಿರಿಯ ನಾಗರಿಕರು ಕಾನೂನು ಉತ್ತರಾಧಿಕಾರಿಗಳಿಂದ ಪೋಷಣೆಯ ಹಕ್ಕು ಪಡೆಯುವುದರಿಂದ ಈ ಮಸೂದೆ ಮಹತ್ವದ ಕ್ರಮವೆಂದು ಸಮಿತಿ ಪರಿಗಣಿಸುತ್ತದೆ. ಜೊತೆಗೆ, ಮಕ್ಕಳ ವ್ಯಾಖ್ಯಾನದಲ್ಲಿ ಮಾಡಿರುವ ತಿದ್ದುಪಡಿ ಪೋಷಕರ ವ್ಯಾಖ್ಯಾನದಲ್ಲಿ ಸಹಕಾಲಿಕವಾಗಿ ಪ್ರತಿಬಿಂಬಿಸಿದೆ ಎಂದು ಸಮಿತಿ ಹೇಳಿದೆ. ಮಸೂದೆಯಲ್ಲಿ ಬಂಧುಗಳ ವ್ಯಾಖ್ಯಾನವನ್ನು ಪರಿಷ್ಕರಿಸಿ ಈ ವಿಭಾಗದಲ್ಲಿ ಅಪ್ರಾಪ್ತ ವಯಸ್ಕರನ್ನೂ ಸೇರಿಸಿರುವುದರಿಂದ ಹಿರಿಯ ನಾಗರಿಕರು ಇನ್ನು ಮುಂದೆ ಅಪ್ರಾಪ್ತ ವಯಸ್ಕರಿಂದಲೂ (ಅಪ್ರಾಪ್ತ ವಯಸ್ಕರ ಪಾಲಕರ ಮೂಲಕ) ಜೀವನ ನಿರ್ವಹಣೆ ಪಡೆಯಲು ಸಾಧ್ಯವಾಗಲಿದೆ. ಅಲ್ಲದೆ, ಮಸೂದೆಯಲ್ಲಿ ಯೋಗಕ್ಷೇಮದ ವ್ಯಾಖ್ಯಾನವನ್ನು ವಿಸ್ತರಿಸಿ, ಪೋಷಕರು ಹಾಗೂ ಹಿರಿಯ ನಾಗರಿಕರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಆಹಾರ, ಬಟ್ಟೆ, ವಸತಿ, ಸುರಕ್ಷೆ ಮತ್ತು ಭದ್ರತೆ, ವೈದ್ಯಕೀಯ ನೆರವು, ಆರೋಗ್ಯಸೇವೆ, ಉಪಚಾರ, ಮನರಂಜನೆಗಳನ್ನು ಸೇರಿಸಿರುವುದು ಸೂಕ್ತ ಕ್ರಮವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಪೋಷಕರು/ ಹಿರಿಯ ನಾಗರಿಕರಿಗೆ ಗರಿಷ್ಠ 10,000 ರೂ. ನಿರ್ವಹಣೆ ಮೊತ್ತವನ್ನು ಮಸೂದೆಯಲ್ಲಿ
ನಿಗದಿಗೊಳಿಸಲಾಗಿದೆ. ಇದರಿಂದ ಪೋಷಕರು/ ಹಿರಿಯ ನಾಗರಿಕರು ಘನತೆಯಿಂದ ಜೀವನ ನಡೆಸಲು ಅನುಕೂಲವಾಗುತ್ತದೆ. ತಿದ್ದುಪಡಿ ಮಸೂದೆಯಲ್ಲಿ ಮಾಡಲಾದ ವ್ಯಾಖ್ಯಾನಗಳು 2007ರ ಕಾಯ್ದೆಗೆ ಪ್ರಾಯೋಗಿಕ, ಸಮಗ್ರ ಮತ್ತು ವಿಶಾಲ ದೃಷ್ಟಿಕೋನವನ್ನು ನೀಡುತ್ತದೆ. ಸ್ವೀಕಾರಾರ್ಹ ಬಂಧುಗಳಿಂದ ಪೋಷಣೆ ಭತ್ತೆ ಪಡೆಯಲು ಪೋಷಕರು/ಹಿರಿಯ ನಾಗರಿಕರಿಗೆ ಅವಕಾಶ ನೀಡುತ್ತದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಹೇಳಿದೆ.