×
Ad

ಬಜೆಟ್ ಅಧಿವೇಶನ: ಆಹ್ವಾನವಿದ್ದರೂ ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳದ ಚಿರಾಗ್ ಪಾಸ್ವಾನ್

Update: 2021-01-30 23:23 IST

ಹೊಸದಿಲ್ಲಿ, ಜ.30: ಅಚ್ಚರಿಯ ನಡೆಯೊಂದರಲ್ಲಿ , ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಜೆಟ್ ಅಧಿವೇಶನದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಶನಿವಾರ ನಡೆದ ಎನ್‌ಡಿಎ ಸಭೆಗೆ ಲೋಕಜನಶಕ್ತಿ ಪಕ್ಷದ(ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್‌ರನ್ನು ಆಹ್ವಾನಿಸಿದೆ.

ಆದರೆ ಪಕ್ಷದ ಅಧ್ಯಕ್ಷರು ಅಸ್ವಸ್ಥರಾಗಿರುವ ಕಾರಣ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು. ಚಿರಾಗ್ ಪಾಸ್ವಾನ್ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ನಿಶ್ಯಕ್ತಿ ಕಾಡುತ್ತಿರುವುದರಿಂದ ಪಾಸ್ವಾನ್ ಮತ್ತೊಮ್ಮೆ ಕೊರೋನ ಸೋಂಕು ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಅವರ ನಿಕಟವರ್ತಿ ಹೇಳಿದ್ದಾರೆ. ಬಿಹಾರ ಚುನಾವಣೆ ಸಂದರ್ಭ ಸೀಟು ಹಂಚಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ಎಲ್‌ಜೆಪಿ ಎನ್‌ಡಿಎ ಮೈತ್ರಿಕೂಟದಲ್ಲಿ ಸೇರದೆ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು.

ಚುನಾವಣೆಯಲ್ಲಿ ಪಕ್ಷ ಕೇವಲ 1 ಸ್ಥಾನ ಮಾತ್ರ ಗೆದ್ದಿದ್ದರೂ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಹಲವು ಸ್ಥಾನ ಕೈತಪ್ಪಲು ಕಾರಣವಾಗಿತ್ತು. ಕಳೆದ ಚುನಾವಣೆಯಲ್ಲಿ 71 ಸ್ಥಾನ ಗೆದ್ದಿದ್ದ ಜೆಡಿಯು ಈ ಬಾರಿ 43 ಸ್ಥಾನಕ್ಕೆ ಕುಸಿದಿದೆ. ಎನ್‌ಡಿಎ ಸಭೆಗೆ ಪಾಸ್ವಾನ್‌ರನ್ನು ಆಹ್ವಾನಿಸಿರುವುದು ಎಲ್‌ಜೆಪಿ ಪಕ್ಷವನ್ನು ಈಗಲೂ ಎನ್‌ಡಿಎ ಮೈತ್ರಿಕೂಟದ ಪಕ್ಷವೆಂದೇ ಬಿಜೆಪಿ ಪರಿಗಣಿಸುತ್ತಿರುವುದರ ದ್ಯೋತಕವಾಗಿದೆ ಎಂದು ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News