ಪತ್ನಿಯಿಂದ ಹಣಕ್ಕೆ ಆಗ್ರಹಿಸುವುದು ಕಿರುಕುಳ ಅಲ್ಲ: ಹೈಕೋರ್ಟ್ ತೀರ್ಪು
ನಾಗ್ಪುರ, ಜ.31: ’ಹಣ ನೀಡುವಂತೆ ಪತ್ನಿಯನ್ನು ಒತ್ತಾಯಿಸುವುದು’ ಎಂಬ ಪದಪುಂಜ ಅಸ್ಪಷ್ಟ ವಾಕ್ಯವಾಗಿದ್ದು, ಇದನ್ನು ಭಾರತೀಯ ದಂಡ ಸಂಹಿತೆ ಕಾಯ್ದೆಯ ಸೆಕ್ಷನ್ 498 ಎ ಅನ್ವಯ ಕಿರುಕುಳ ಎಂದು ಪರಿಗಣಿಸುವಂತಿಲ್ಲ ಎಂದು ಮುಂಬೈ ಹೈಕೋರ್ಟ್‌ನ ನಾಗ್ಪುರ ಪೀಠ ಮಹತ್ವದ ತೀರ್ಪು ನೀಡಿದೆ. ವಿವಾಹವಾದ ಒಂಭತ್ತು ವರ್ಷಗಳ ಬಳಿಕ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆರೋಪಿ ಪತಿಯನ್ನು ಆತ್ಮಹತ್ಯೆ ಕುಮ್ಮಕ್ಕು ಆರೋಪದಿಂದ ಮುಕ್ತಗೊಳಿಸಿದೆ.
"ಈಗ ಇರುವ ಪುರಾವೆ ಪತಿ- ಪತ್ನಿ ನಡುವೆ ಜಗಳ ನಡೆಯುತ್ತಿತ್ತು ಮತ್ತು ಹಣ ನೀಡುವಂತೆ ಆಗ್ರಹಿಸಿ ಪತಿ ಹೊಡೆಯುತ್ತಿದ್ದ ಎನ್ನುವುದಕ್ಕೆ ಸಂಬಂಧಿಸಿದ್ದು. ಹಣಕ್ಕಾಗಿ ಒತ್ತಾಯ ಎನ್ನುವುದು ಅಸ್ಪಷ್ಟ ಪದಪುಂಜವಾಗಿದ್ದು, ಆತ್ಮಹತ್ಯೆಗೂ ಇದಕ್ಕೂ ಸಂಬಂಧ ಕಲ್ಪಿಸಲು ಇತರ ವಿವರಗಳು ಲಭ್ಯ ಇರದ ಹಿನ್ನೆಲೆಯಲ್ಲಿ, ಸೆಕ್ಷನ್ 498ಎ ಅನ್ವಯ ಇದನ್ನು ಕಿರುಕುಳ ಎಂದು ಪರಿಗಣಿಸಲಾಗದು" ಎಂದು ನ್ಯಾಯಮೂರ್ತಿ ಪುಷ್ಪಾ ಗಣೇದಿವಾಲಾ ಅಭಿಪ್ರಾಯಪಟ್ಟಿದ್ದಾರೆ. ತನ್ನನ್ನು ಈ ಪ್ರಕರಣದಿಂದ ಆರೋಪಮುಕ್ತಗೊಳಿಸುವಂತೆ ಮೃತ ಮಹಿಳೆಯ ಪತಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಆರೋಪಿ ಪತ್ನಿಯನ್ನು ಬಿಟ್ಟು ಇರುವ ಬದಲು ಆಕೆಯ ಸಾಂಗತ್ಯದಲ್ಲಿ ಆಸಕ್ತಿ ಹೊಂದಿದ್ದ. ಜಗಳದ ಬಳಿಕ ಪತ್ನಿ ಆಕೆಯ ತಂದೆ ಮನೆಗೆ ಹೋದಾಗಲೆಲ್ಲ ಪತ್ನಿಯನ್ನು ಕರೆತಂದಿದ್ದ ಮತ್ತು ದಾಂಪತ್ಯದ ಹಕ್ಕಿನ ಮರುಸ್ಥಾಪನೆಗೆ ನೋಟಿಸ್ ನೀಡಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಹಾಗೂ ಆಕೆಯ ಶವಸಂಸ್ಕಾರಕ್ಕೆ ಮೃತದೇಹವನ್ನು ಆಕೆಯ ತಂದೆಗೆ ಹಸ್ತಾಂತರಿಸಲು ನಿರಾಕರಿಸಿದ್ದ ಎನ್ನುವುದನ್ನು ನ್ಯಾಯಮೂರ್ತಿ ಉಲ್ಲೇಖಿಸಿದ್ದಾರೆ.