ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಏಕೆ ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ವಿವರಿಸಬೇಕು: ರೈತ ನಾಯಕ ಟಿಕಾಯತ್

Update: 2021-01-31 07:56 GMT

ಘಾಝಿಯಾಬಾದ್ (ಉ.ಪ್ರ.),ಜ.31: ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಏಕೆ ಬಯಸುತ್ತಿಲ್ಲ ಎನ್ನುವುದನ್ನು ವಿವರಿಸುವಂತೆ ಕೇಂದ್ರವನ್ನು ಆಗ್ರಹಿಸಿರುವ ಭಾರತೀಯ ಕಿಸಾನ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು, ಸರಕಾರವು ಪ್ರಪಂಚದ ಎದುರು ತಲೆ ಬಗ್ಗಿಸಲು ತಾವು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಗಣತಂತ್ರ ದಿನದಂದು ದಿಲ್ಲಿಯಲ್ಲಿ ಟ್ರಾಕ್ಟರ್ ರ್ಯಾಲಿ ಸಂದರ್ಭ ಹಿಂಸಾಚಾರದ ಬಳಿಕ ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಬಿಕೆಯು ನೇತೃತ್ವದ ಪ್ರತಿಭಟನೆಯು ಬಲಗುಂದಿದಂತೆ ಕಂಡುಬಂದಿತ್ತಾದರೂ ಶನಿವಾರ ಮುಝಫ್ಫರ್‌ನಗರದಲ್ಲಿ ರೈತರ ‘ಮಹಾಪಂಚಾಯತ್’ನ ಬಳಿಕ ಹೆಚ್ಚೆಚ್ಚು ರೈತರು ಘಾಜಿಪುರದಲ್ಲಿಯ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿರುವ ನಡುವೆಯೇ ರೈತರ ಆಂದೋಲನದ ಪ್ರಮುಖ ಮುಖವಾಗಿ ಹೊರಹೊಮ್ಮಿರುವ ಟಿಕಾಯತ್ ಸರಕಾರದ ಮುಂದೆ ಈ ಪ್ರಶ್ನೆಯನ್ನಿಟ್ಟಿದ್ದಾರೆ.

ಶನಿವಾರ ಘಾಝಿಪುರದಲ್ಲಿ ಪ್ರತಿಭಟನಾನಿರತ ರೈತರನ್ನುದ್ದೇಶಿಸಿ ಮಾತನಾಡಿದ ಟಿಕಾಯತ್, ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲವೆಂದು ಹಟ ಹಿಡಿದಿರುವ ಸರಕಾರಕ್ಕೆ ಇರುವ ಅನಿವಾರ್ಯತೆಯಾದರೂ ಏನು ಎಂದು ಪ್ರಶ್ನಿಸಿದರು.

‘ಸರಕಾರವು ತನ್ನ ಕಾರಣಗಳನ್ನು ರೈತರಿಗೆ ತಿಳಿಸಬಹುದು ಮತ್ತು ನಾವು (ರೈತರ) ಪಂಚಾಯತ್ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿರುವ ಜನರಾಗಿದ್ದೇವೆ. ಸರಕಾರವು ನಾಚಿಕೆಯಿಂದ ಪ್ರಪಂಚದ ಮುಂದೆ ತಲೆ ಬಗ್ಗಿಸಲು ನಾವೆಂದೂ ಅವಕಾಶ ನೀಡುವುದಿಲ್ಲ’ ಎಂದ ಅವರು, ‘ನಾವು ಸರಕಾರದ ವಿರುದ್ಧ ಸೈದ್ಧಾಂತಿಕವಾಗಿ ಹೋರಾಡುತ್ತಿದ್ದೇವೆ. ದೊಣ್ಣೆಗಳು ಮತ್ತು ಬಂದೂಕುಗಳಿಂದ ಈ ಹೋರಾಟ ಸಾಧ್ಯವಿಲ್ಲ ಮತ್ತು ರೈತರನ್ನು ದಮನಿಸಲೂ ಸಾಧ್ಯವಿಲ್ಲ. ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರವಷ್ಟೇ ರೈತರು ತಮ್ಮ ಮನೆಗಳಿಗೆ ಮರಳುತ್ತಾರೆ’ ಎಂದರು.

ರೈತರು ಗಾಂಧೀಜಿಯವರ ಅಹಿಂಸಾ ತತ್ವದಲ್ಲಿ ನಂಬಿಕೆಯನ್ನು ಮತ್ತು ಸಂವಿಧಾನದಲ್ಲಿ ಸಂಪೂರ್ಣ ವಿಶ್ವಾಸವನ್ನು ಹೊಂದಿದ್ದಾರೆ ಎಂದ ಟಿಕಾಯತ್, ಪ್ರತಿಯೊಬ್ಬರೂ ಶಾಂತಿಯನ್ನು ಕಾಯ್ದುಕೊಳ್ಳಬೇಕು ಎಂದು ಪ್ರತಿಭಟನಾಕಾರರಲ್ಲಿ ಮನವಿಯನ್ನು ಮಾಡಿಕೊಂಡರು.

ಪೊಲೀಸರು ತಮ್ಮ ಮೇಲೆ ಲಾಠಿ ಪ್ರಹಾರ ಮಾಡಿದರೂ ರೈತರು ಚಿಂತಿಸುವುದಿಲ್ಲ, ಆದರೆ ರಾಜಕೀಯ ಪಕ್ಷಗಳ ಗೂಂಡಾಗಳು ಅವರ ಮೈಮುಟ್ಟುವ ಧೈರ್ಯ ಮಾಡಿದರೆ ರೈತರಾಗಲೀ ಅವರ ಟ್ರಾಕ್ಟರ್‌ಗಳಾಗಲೀ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಒತ್ತಿ ಹೇಳಿದ ಅವರು, ಅಂದು ತಾನು ಸುರಿಸಿದ್ದ ಕಣ್ಣೀರು ತನ್ನದಾಗಿರಲಿಲ್ಲ, ಅದು ರೈತರ ಕಣ್ಣೀರಾಗಿತ್ತು ಎಂದರು.

ತನ್ಮಧ್ಯೆ ಸತತ ಎರಡನೇ ದಿನವಾದ ಶನಿವಾರವೂ ಟಿಕಾಯತ್‌ರನ್ನು ಭೇಟಿಯಾಗಿ ಬೆಂಬಲವನ್ನು ವ್ಯಕ್ತಪಡಿಸಲು ರಾಜಕಾರಣಿಗಳ ದಂಡೇ ಘಾಜಿಪುರಕ್ಕೆ ಆಗಮಿಸಿತ್ತು. ಯಾವುದೇ ರಾಜಕೀಯ ನಾಯಕರು ಪ್ರತಿಭಟನೆಯ ಕೇಂದ್ರ ವೇದಿಕೆಯನ್ನೇರಲು ಅವಕಾಶ ನೀಡುವುದಿಲ್ಲ, ಅವರೊಂದಿಗೆ ಭೇಟಿಯೇನಿದ್ದರೂ ವೇದಿಕೆಯ ಆಚೆಗೇ ನಡೆಯುತ್ತದೆ ಎಂದು ಟಿಕಾಯತ್ ಸ್ಪಷ್ಟಪಡಿಸಿದ್ದಾರೆ.

ಟಿಕಾಯತ್‌ರ ಆಧ್ಯಾತ್ಮಿಕ ಗುರು ಮತ್ತು ನೀಲಕಂಠ ಆಶ್ರಮದ ಸಂಸ್ಥಾಪಕ ಅಮಿತ್ ಮಹಾರಾಜ್ ಅವರು ಗಂಗಾಜಲದೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಪ್ರತಿಭಟನೆಯನ್ನು ರೈತರ ಮಹಾ ಆಂದೋಲನವನ್ನಾಗಿ ಪರಿವರ್ತಿಸಲು ದೇವರು ಟಿಕಾಯತ್‌ಗೆ ಶಕ್ತಿ ನೀಡಲಿ ಎಂದು ಅವರು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.

ಪ್ರತಿಭಟನಾ ಸ್ಥಳದಲ್ಲಿ 3,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮೊಬೈಲ್ ಟಾಯ್ಲೆಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ನೀರು ಸರಬರಾಜನ್ನು ಪುನರಾರಂಭಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News