ಭಾರತದ ‘ಆಂತರಿಕ ವಿಷಯಗಳ’ ಕುರಿತು ವಿವಿಗಳ ಆನ್‌ಲೈನ್ ಅಂತರರಾಷ್ಟ್ರೀಯ ಕಾರ್ಯಕ್ರಮಗಳಿಗೆ ಸರಕಾರದ ಅನುಮತಿ ಅಗತ್ಯ

Update: 2021-01-31 11:23 GMT

ಹೊಸದಿಲ್ಲಿ,ಜ.31: ಸರಕಾರಿ ಅನುದಾನ ಪಡೆಯುತ್ತಿರುವ ವಿವಿಗಳ ಶೈಕ್ಷಣಿಕ ಸ್ವಾತಂತ್ರದ ಮೇಲೆ ಹೊಸ ನಿರ್ಬಂಧವೊಂದನ್ನು ಹೇರಲಾಗಿದ್ದು, ಪ್ರೊಫೆಸರ್‌ಗಳು ಮತ್ತು ಆಡಳಿತಾಧಿಕಾರಿಗಳು ಭಾರತದ ಭದ್ರತೆಗೆ ಸಂಬಂಧಿಸಿದ ವಿಷಯಗಳು ಅಥವಾ ಭಾರತದ ಆಂತರಿಕ ವ್ಯವಹಾರಗಳಿಗೆ ಸ್ಪಷ್ಟವಾಗಿ ಸಂಬಂಧಿಸಿದ ವಿಷಯಗಳನ್ನಿಟ್ಟುಕೊಂಡು ಆನ್‌ಲೈನ್ ಅಂತರರಾಷ್ಟ್ರೀಯ ಕಾರ್ಯಕ್ರಮಗಳು ಅಥವಾ ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಬಯಸಿದ್ದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪೂರ್ವಾನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಪರಿಷ್ಕೃತ ಮಾರ್ಗಸೂಚಿಯಲ್ಲಿ ಭಾರತದ ಆಂತರಿಕ ವ್ಯವಹಾರಗಳ ವ್ಯಾಖ್ಯೆ ಎಷ್ಟು ವಿಶಾಲವಾಗಿದೆಯೆಂದರೆ ಅದು ಅಕ್ಷರಶಃ ವಿದ್ವಾಂಸರ ಆಸಕ್ತಿಯ ಎಲ್ಲ ವಿಷಯಗಳನ್ನೂ ಒಳಗೊಂಡಿದೆ. ರೈತರ ಪ್ರತಿಭಟನೆ, ಸರಕಾರದಿಂದ ಕೋವಿಡ್-19 ಸಾಂಕ್ರಾಮಿಕದ ನಿರ್ವಹಣೆ, ಜಾತಿ ವಿಷಯಗಳು ಇವೆಲ್ಲ ಈ ವ್ಯಾಖ್ಯೆಯಲ್ಲಿ ಒಳಗೊಂಡಿವೆ. ಇಷ್ಟೇ ಸಾಲದು ಎಂಬಂತೆ ನೋಟು ನಿಷೇಧ ಕ್ರಮದ ಒಳಿತು-ಕೆಡುಕುಗಳೂ ಭಾರತದ ಆಂತರಿಕ ವಿಷಯಗಳಲ್ಲಿ ಸೇರಿಕೊಂಡಿವೆ.

ಇಂತಹ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುವ ಎಲ್ಲರ ಹೆಸರುಗಳಿಗೆ ಮುಂಚಿತವಾಗಿ ಸರಕಾರದಿಂದ ಅನುಮತಿ ಪಡೆದುಕೊಳ್ಳುವುದನ್ನೂ ಕಡ್ಡಾಯಗೊಳಿಸಲಾಗಿದೆ.

ಶಿಕ್ಷಣ ಸಚಿವಾಲಯವು ಎರಡು ವಾರಗಳ ಹಿಂದೆ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಯಾವುದೇ ರೂಪದಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ಸೇರಿದಂತೆ ‘ಸೂಕ್ಷ್ಮ ವಿಷಯ’ಗಳನ್ನೊಳಗೊಂಡ ಕಾರ್ಯಕ್ರಮಗಳಿಗೂ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಸರಕಾರಿ ಇಲಾಖೆ ಅಥವಾ ಸರಕಾರಿ ಅನುದಾನದ ವಿವಿ ಏರ್ಪಡಿಸುವ ಆನ್‌ಲೈನ್ ವಿಚಾರಸಂಕಿರಣಗಳಿಗೆ ಅಗತ್ಯವಾಗಿರುವ ಅನುಮತಿಗಳನ್ನು ಸ್ಪಷ್ಟಪಡಿಸಿರುವ ಮಾರ್ಗಸೂಚಿಗಳು, ಸಂಘಟಿಸಲಾಗುತ್ತಿರುವ ಯಾವುದೇ ಆನ್‌ಲೈನ್ ಸಮ್ಮೇಳನಕ್ಕೆ ಅವುಗಳ ‘ಆಡಳಿತಾತ್ಮಕ ಕಾರ್ಯದರ್ಶಿ’ಯ ಪರವಾನಿಗೆ ಅಗತ್ಯವಾಗಿದೆ ಎಂದು ಬೆಟ್ಟು ಮಾಡಿದೆ.

ಆನ್‌ಲೈನ್ ಕಾರ್ಯಕ್ರಮದ ವಿಷಯವು ಸರಕಾರ, ಗಡಿ, ಈಶಾನ್ಯ ರಾಜ್ಯಗಳು, ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ, ಲಡಾಖ್ ಭದ್ರತೆ ಅಥವಾ ಭಾರತದ ಆಂತರಿಕ ವಿಷಯಗಳಿಗೆ ಸ್ಪಷ್ಟವಾಗಿ ಸಂಬಂಧಿಸಿದ ಇತರ ಯಾವುದೇ ವಿಷಯವಲ್ಲ ಎನ್ನುವುದನ್ನು ಅನ್ವಯಿತ ಸಚಿವಾಲಯವು ಖಚಿತಪಡಿಸಿಕೊಳ್ಳಬೇಕು ಎಂದು ಪರಿಷ್ಕೃತ ನಿಯಮಾವಳಿಯು ನಿರ್ದಿಷ್ಟವಾಗಿ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News